ಹುಬ್ಬಳ್ಳಿ: ‘ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಮತ್ತು ಎಲ್ಲ ಲಿಂಗಾಯತ ಉಪಪಂಗಡಗಳಿಗೆ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗಾಗಿ ಕಾನೂನಾತ್ಮಕ ಹೋರಾಟ ನಡೆಸಲು ಬೆಂಗಳೂರಿನಲ್ಲಿ ಜುಲೈ 23ರಂದು ಸಮಾಜದ ವಕೀಲರ ರಾಜ್ಯಮಟ್ಟದ ಸಭೆ ಕರೆಯಲಾಗಿದೆ’ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
‘ಮೀಸಲಾತಿಗಾಗಿ ಈಗ ಏಳನೇ ಹಂತದ ಪತ್ರ ಚಳವಳಿ ನಡೆದಿದೆ. ಮುಂದಿನ ಹಂತದಲ್ಲಿ ಕಾನೂನು ಹೋರಾಟಕ್ಕೆ ಸಮಾಜದ ಹಿರಿಯ ವಕೀಲರ ತಂಡ ರಚಿಸಲಾಗುವುದು. ಶಾಶ್ವತ ಹಿಂದುಳಿದ ವರ್ಗಗಳ ಆಯೋಗ, ಮುಖ್ಯಮಂತ್ರಿ, ಕಾನೂನು ಸಚಿವರಿಗೆ ಮನವಿ ಸಲ್ಲಿಸಲಾಗುವುದು. ಅಲ್ಲದೆ, ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ವಕೀಲರ ಸಂಘದ ಮೂಲಕ ಹೋರಾಟ ನಡೆಸಲಾಗುವುದು’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ವಿವಿಧ ಪಕ್ಷಗಳಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ 20 ಶಾಸಕರಿದ್ದಾರೆ. ಎಲ್ಲರೂ ಈ ಅಧಿವೇಶನದಲ್ಲಿ ಮೀಸಲಾತಿಗಾಗಿ ಧ್ವನಿ ಎತ್ತಬೇಕು. ಆ ಮೂಲಕ ಸಮಾಜದ ಋಣ ತೀರಿಸಬೇಕು. ಸಮಾಜದ ಶಾಸಕರು ಗೆಲ್ಲಲು ಮೀಸಲಾತಿ ಹೋರಾಟವೂ ಕಾರಣ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.