ADVERTISEMENT

ಮಹಿಳಾ ಅಭಿವ್ಯಕ್ತಿ ಬಿಂಬಿಸುವ ‘33 ಹೆಡ್ಸ್‌’: ಚಿತ್ರಕಲಾ ಪ್ರದರ್ಶನ ಆರಂಭ

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 9:34 IST
Last Updated 3 ಜನವರಿ 2019, 9:34 IST
ಹುಬ್ಬಳ್ಳಿಯ ಕೃಷ್ಣಭವನದಲ್ಲಿ ಗುರುವಾರ ಆರಂಭವಾದ ಮೂರು ದಿನಗಳ ಚಿತ್ರಕಲಾ ಪ್ರದರ್ಶನವನ್ನು ಕಲಾಪ್ರಿಯರು ವೀಕ್ಷಿಸಿದರು
ಹುಬ್ಬಳ್ಳಿಯ ಕೃಷ್ಣಭವನದಲ್ಲಿ ಗುರುವಾರ ಆರಂಭವಾದ ಮೂರು ದಿನಗಳ ಚಿತ್ರಕಲಾ ಪ್ರದರ್ಶನವನ್ನು ಕಲಾಪ್ರಿಯರು ವೀಕ್ಷಿಸಿದರು   

ಹುಬ್ಬಳ್ಳಿ: ಮಹಿಳೆಯರ ಬದುಕಿನ ತವಕ, ತಲ್ಲಣಗಳನ್ನು ಬಿಂಬಿಸುವ ‘33 ಹೆಡ್ಸ್‌’ ಮೂರು ದಿನಗಳ ಚಿತ್ರಕಲಾ ಪ್ರದರ್ಶನ ನಗರದಲ್ಲಿ ಗುರುವಾರ ಆರಂಭವಾಯಿತು.

ಕೃಷ್ಣಭವನದಲ್ಲಿ ನಡೆಯುತ್ತಿರುವ ಪ್ರದರ್ಶನಕ್ಕೆ ಕಲಾವಿದ ವಿವೇಕ ಎಲ್‌. ಪವಾರ್‌ ಚಾಲನೆ ನೀಡಿದರು. ಮಹಿಳಾ ಸಂವೇದನೆಗಳನ್ನು ವ್ಯಕ್ತಪಡಿಸುವ ವಿವಿಧ ಸಂದರ್ಭಗಳನ್ನು ಕಲಾವಿದ ವಿಜಯ ಧೋನಗಡಿ 33 ಬಣ್ಣಗಳಲ್ಲಿ ಸುಂದರವಾಗಿ ಬಿಡಿಸಿದ್ದಾರೆ. ನಿತ್ಯ ಬೆಳಿಗ್ಗೆ 10.30ರಿಂದ ರಾತ್ರಿ 7.30ರ ತನಕ ಚಿತ್ರಕಲಾ ಪ್ರದರ್ಶನ ನಡೆಯುತ್ತದೆ. ಎಲ್ಲರಿಗೂ ಉಚಿತ ಪ್ರವೇಶವಿದೆ. ಹುಬ್ಬಳ್ಳಿಯ ಹಿರಿಯ ಕಲಾವಿದ ಎಂ.ಕೆ. ಬಂಗ್ಲೇವಾಲ ಇದ್ದರು.

ಕಲಾವಿದ ವಿಜಯ ಮಾತನಾಡಿ ‘ಆಧುನಿಕ ಜಗತ್ತು ಎಷ್ಟೇ ಮುಂದುವರಿದರೂ ಸಾಕಷ್ಟು ಕಡೆ ಮಹಿಳೆ ಈಗಲೂ ತನ್ನ ಸ್ವಾತಂತ್ರ್ಯಕ್ಕಾಗಿ ಪರದಾಡುವ ಸ್ಥಿತಿಯಿದೆ. ಆದ್ದರಿಂದ ಮಹಿಳೆಯನ್ನು ಬಂಧನಕ್ಕೆ ಒಳಪಡಿಸದೇ ಸ್ವಾತಂತ್ರ್ಯವಾಗಿ ಬದುಕಲು ಬಿಡಬೇಕು ಎನ್ನುವ ಆಶಯದಿಂದ ಚಿತ್ರ ಬಿಡಿಸಲಾಗಿದೆ. ಪುತ್ಥಳಿಯ ಹಾಗೆ ಒಂದೇ ಕಡೆ ಮಹಿಳೆಯನ್ನು ಸ್ಥಾಪಿಸುವ ಬದಲು ಆಕೆಯ ಬದುಕಿನ ಸ್ವಾತಂತ್ರ್ಯ ಅನುಭವಿಸಲು ಅವಕಾಶ ಕೊಡಬೇಕು ಎನ್ನುವ ಸಂದೇಶ ನೀಡುತ್ತಿದ್ದೇನೆ’ ಎಂದು ತಿಳಿಸಿದರು.

ADVERTISEMENT

ಕಲಾವಿದ ಕೆ. ಶಂಕರ ಮಾತನಾಡಿ ‘ಹುಬ್ಬಳ್ಳಿಯಲ್ಲಿ ಕಲಾವಿದರಿಗೆ ಪ್ರೋತ್ಸಾಹದ ಕೊರತೆಯಿದೆ. ಆದ್ದರಿಂದ ಇಲ್ಲಿನ ಪ್ರತಿಭಾನ್ವಿತ ಕಲಾವಿದರು ಬೇರೆ, ಬೇರೆ ಕಡೆ ವಲಸೆ ಹೋಗುತ್ತಿದ್ದಾರೆ. ಆಗಾಗ ಚಿತ್ರ ಪ್ರದರ್ಶನಗಳನ್ನು ಏರ್ಪಡಿಸಲು ಕಲಾಗ್ಯಾಲರಿಯನ್ನು ಕೂಡಲೇ ನಿರ್ಮಿಸಬೇಕು’ ಎಂದು ಮನವಿ ಮಾಡಿದರು.

‘ಚಿತ್ರಕಲೆಗಳ ಬಗ್ಗೆ ಸಾಕಷ್ಟು ಜನ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಆದರೆ, ಚಿತ್ರಗಳನ್ನು ಖರೀದಿಸುವುದೇ ಇಲ್ಲ. ಚಿತ್ರಗಳನ್ನು ಖರೀದಿಸಿದರೆ ಕಲಾವಿದನಿಗೂ ಪ್ರೋತ್ಸಾಹ ಕೊಟ್ಟಂತಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.