ADVERTISEMENT

ತಲೆ ಎತ್ತಿದ್ದ ‘ಜಟ್‌ಪಟ್‌ ನಗರ’ ನೆಲಸಮ

ಇ.ಎಸ್.ಸುಧೀಂದ್ರ ಪ್ರಸಾದ್
Published 4 ಜನವರಿ 2018, 9:03 IST
Last Updated 4 ಜನವರಿ 2018, 9:03 IST

ಧಾರವಾಡ: ನಿರಾಶ್ರಿತರು ಎಂದು ಹೇಳಿಕೊಂಡ ನೂರಕ್ಕೂ ಅಧಿಕ ಕುಟುಂಬಗಳು, ಇಲ್ಲಿನ ಕಲಘಟಗಿ ರಸ್ತೆಯ ಬಳಿಯ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಲು ಮುಂದಾಗಿದ್ದ ಪ್ರಯತ್ನವನ್ನು ಕಂದಾಯ ಇಲಾಖೆ ವಿಫಲಗೊಳಿಸಿದೆ.

ಪೊಲೀಸ್ ತರಬೇತಿ ಶಾಲೆ ಪಕ್ಕದಲ್ಲಿ ಸಾಗುವ ರಸ್ತೆಯಲ್ಲಿರುವ, ಕಂದಾಯ ಇಲಾಖೆಗೆ ಸೇರಿದ್ದ 5.2 ಎಕರೆ ಪ್ರದೇಶದಲ್ಲಿ ನಾಲ್ಕು ದಿನಗಳ ಹಿಂದೆ ದಿಢೀರನೇ ಜೋಪಡಿಗಳು ನಿರ್ಮಾಣಗೊಂಡಿದ್ದವು. ಬಹಳಷ್ಟು ಕುಟುಂಬಗಳು ಇಲ್ಲಿ ಸೂರು ಕಟ್ಟಿಕೊಂಡು ನೆಲೆಸಿದ್ದರು. ಮತ್ತೊಂದೆಡೆ, ಸಮತಾ ಸೇನಾ ಹೆಸರಿನ ಸಂಘಟನೆ ನಿರಾಶ್ರಿತರ ಪರವಾಗಿ ಪ್ರತಿಭಟನೆ ಆರಂಭಿಸಿ, ಮನೆ ನಿರ್ಮಿಸಿ ಕೊಡುವಂತೆ ಆಗ್ರಹಿಸಿತ್ತು.

ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಪ್ರಕಾಶ ಕುದರಿ ಹಾಗೂ ಕಂದಾಯ ನಿರೀಕ್ಷಕರು ಮನೆ ಕಟ್ಟುವ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ.

ADVERTISEMENT

ಈ ಕುರಿತಂತೆ ಪ್ರತಿಕ್ರಿಯಿಸಿದ ಸಮತಾ ಸೇನೆ ಮುಖಂಡ ದಿವಾನ್ ಬಳ್ಳಾರಿ, ‘ಇಲ್ಲಿ ಜೋಪಡಿ ಕಟ್ಟಿಕೊಂಡಿದ್ದವರಲ್ಲಿ ಜನ್ನತ್‌ನಗರ, ದಾಸನಕೊಪ್ಪ, ಇಟ್ಟಿಗಟ್ಟಿ, ರಾಜೀವ್‌ಗಾಂಧಿ ನಗರ ಸೇರಿದಂತೆ ಇನ್ನೂ ಹಲವು ಬಡಾವಣೆಗಳ ಬಡವರು ಇದ್ದಾರೆ. ಇವರಲ್ಲಿ ಯಾರಿಗೂ ಸ್ವಂತ ಸೂರಿಲ್ಲ. ಇತ್ತೀಚೆಗೆ ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಿಸಿ ಹಂಚಲಾದ ಮನೆಗಳಲ್ಲಿ, ಇದ್ದವರಿಗೇ ಮರು ಹಂಚಿಕೆ ಮಾಡಲಾಗಿದೆ. ಈ ಕುರಿತು ತನಿಖೆ ನಡೆಯಬೇಕು. ಇಲ್ಲಿ ಮನೆ ಕಟ್ಟಿಕೊಳ್ಳಲು ಮುಂದಾಗಿದ್ದ ಜನರಿಗೆ ಇದರಲ್ಲಿ ಮನೆ ನೀಡಬೇಕು ಇಲ್ಲವೇ ನಿವೇಶನ ಹಂಚಬೇಕು’ ಎಂದು ಆಗ್ರಹಿಸಿದರು.

‘ಇಲ್ಲಿ ಒಟ್ಟು 81.05 ಎಕರೆ ಜಮೀನು ವಸತಿ ಉದ್ದೇಶಕ್ಕಾಗಿ ಮೀಸಲಿಡಲಾಗಿದೆ. ಇದರಲ್ಲಿ ನಿರಾಶ್ರಿತರಿಗೆಂದು 5.20 ಎಕರೆ ಕೊಡಬೇಕು. ಒಟ್ಟು ಇಂಥ 2 ಸಾವಿರ ನಿರಾಶ್ರಿತ ಕುಟುಂಬಗಳಿಗೆ ಈ ನಿವೇಶನಗಳನ್ನು ಹಂಚಬೇಕು’ ಎಂದು ಆಗ್ರಹಿಸಿದರು.

ತಹಶೀಲ್ದಾರ್ ಪ್ರಕಾಶ ಕುದರಿ ಪ್ರತಿಕ್ರಿಯಿಸಿ, ‘ನಿರಾಶ್ರಿತರು ಎಂದು ಹೇಳಿಕೊಂಡವರು ಈ ಮೊದಲು ಆಶ್ರಯ ಮನೆಗಳಿಗೆ ಅರ್ಜಿ ಸಲ್ಲಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಈ ಜಾಗ ಕಂದಾಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಸುಪರ್ದಿಯಲ್ಲಿದೆ. ಸಮತಾ ಸೇನೆ ಕಾರ್ಯಕರ್ತರು ಹೇಳುತ್ತಿರುವಂತೆ ಅವ್ಯವಹಾರ ಆಗಿದ್ದರೆ ತನಿಖೆ ಮೂಲಕ ಸಾಬೀತಾಗಬೇಕು’ ಎಂದು ತಿಳಿಸಿದರು.

ಜೋಪಡಿಗಳನ್ನು ತೆರವುಗೊಳಿಸಲಾಗಿದೆ. ಈ ಬಗ್ಗೆ ಕೊಳಚೆ ನಿರ್ಮೂಲನಾ ಮಂಡಳಿಗೆ, ಜಿಲ್ಲಾಧಿಕಾರಿಗೆ ಹಾಗೂ ಪಾಲಿಕೆ ಆಯುಕ್ತರಿಗೆ ಈ ಕುರಿತು ಪತ್ರ ಬರೆಯಲಾಗಿದೆ’ ಎಂದರು.

ಇಲ್ಲಿ ಆಶ್ರಯ ಪಡೆಯಲು ಬಂದ ಕೆಲವರು ನಿವೇಶನಕ್ಕಾಗಿ ಹಣ ನೀಡಿದ್ದಾಗಿ ತಿಳಿಸಿದರು. ಆದರೆ, ಯಾರಿಗೆ ಹಾಗೂ ಎಷ್ಟು ಮೊತ್ತ ನೀಡಿದ್ದಾರೆ ಎಂಬ ಸಂಗತಿಯನ್ನು ಬಹಿರಂಗಪಡಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.