ADVERTISEMENT

ಕೋಮು ಗಲಭೆ ಸೃಷ್ಟಿಸಿ ರಾಜಕಾರಣ: ವಿನಯ ವಿಷಾದ

​ಪ್ರಜಾವಾಣಿ ವಾರ್ತೆ
Published 27 ಜನವರಿ 2018, 10:05 IST
Last Updated 27 ಜನವರಿ 2018, 10:05 IST

ಧಾರವಾಡ: ದಿನನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬರನ್ನು ಒಬ್ಬರು ದ್ವೇಷಿಸುವ ಕೋಮು ಗಲಭೆಯನ್ನು ಸೃಷ್ಟಿಸಿ ರಾಜಕಾರಣ ಮಾಡುವುದು ದುಃಖದ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.

ಕಲಾಭವನದ ಆವರಣದಲ್ಲಿ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಆಯೊಜಿಸಿದ್ದ ಡ್ರೀಮ್ ಫೌಂಡೇಷನ್‌ ಶಾಂತಿಗಾಗಿ ಸದ್ಭಾವನಾ ಪಾದಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕಳಸಾ ಬಂಡೂರಿ ಸಮಸ್ಯೆಯನ್ನು ಪ್ರಧಾನಿ ಮೋದಿ ಅವರು ಮಧ್ಯಸ್ಥಿಕೆ ವಹಿಸಿ ವಿವಾದ ಬಗೆಹರಿಸಬೇಕು. ಹಿಂದೆ ವಾಜಪೇಯಿ ಅವರು, ಪ್ರಧಾನಮಂತ್ರಿ ಆಗಿದ್ದಾಗ ಸಮಸ್ಯೆ ಬಗೆಹರಿಸಿದ್ದನ್ನು ಕಂಡಿದ್ದೇವೆ’ ಎಂದರು.

ADVERTISEMENT

ಬಸವಣ್ಣನವರು 900 ವರ್ಷಗಳ ಹಿಂದೆ ಜಾತಿ ಮತ ಭೇದವನ್ನು ಮರೆತು ಒಗ್ಗಟ್ಟಿನಿಂದ ಬಾಳಲು ಸಂದೇಶ ನೀಡಿದ್ದು, ವಿವಿಧ ಸಂಸ್ಕೃತಿಯ ಜನರನ್ನು ಒಳಗೊಂಡಿದ್ದು, ಅದರಲ್ಲಿ ಏಕತೆಯನ್ನು ಕಾಣುವುದೆ ಎಲ್ಲರ ಕರ್ತವ್ಯ. ಈಗಿನ ಪ್ರಸ್ತುತ ಸಂದರ್ಭದಲ್ಲಿ ಇಂಥಹ ಕಾರ್ಯಕ್ರಮಗಳ ಒಗ್ಗಟ್ಟು ಮೂಡಿಸುವಲ್ಲಿ ಅವಶ್ಯವಾಗದೆ’ ಎಂದು ತಿಳಿಸಿದರು.

ವಿಜಯಪುರದ ಹಾಶೀಮ್‌ಪೀರ್ ದರ್ಗಾದ ಸಜ್ಜಾದ ಮುರ್ತುಜಾ ಹುಸೇನಿ ಹಾಶಮಿ ಮಾತನಾಡಿ, ದೇಶದಲ್ಲಿ ಹಿಂದೂ, ಮುಸ್ಲಿಂ ನಡುವೆ ಸಹೋದರರೆಯ ಅವಶ್ಯಕತೆ ತುಂಬಾ ಅವಶ್ಯಕತೆಯಿದೆ. ಇದರಿಂದ ಶಾಂತಿ ನೆಲೆಸುವುದರಲ್ಲಿ ಸಂಶಯವಿಲ್ಲ ಎಂದರು.

ಮುಂಡರಗಿಯ ತೋಂಟದಾರ್ಯ ನಿಜಗುಣಪ್ರಭು ಸ್ವಾಮೀಜಿ ಮಾತನಾಡಿ, ಧರ್ಮಕ್ಕಿಂತ ದೇಶ ದೊಡ್ಡದು, ದೇಶ ಉಳಿದರೆ ಧರ್ಮ ಉಳಿಯುತ್ತೆ. ಕೂಡಿ ಬದುಕುವುದು, ಜತೆಯಾಗಿ ಊಟ ಮಾಡುವುದರಿಂದ ಶಾಂತಿ ನೆಲೆಸಲು ಸಾಧ್ಯ ಎಂದರು.

ಸೆಡ್ರಿಕ್ ಜಾಕೂಬ್, ರಾಣು ಸಿಂಗ್, ಡಾ. ಖದಿರ ಸರಗೀರೊ, ಎಂ.ಎಂ. ದರಗದ, ಪಾಲಿಕೆ ಸದಸ್ಯರಾದ ಸುಭಾಸ ಸಿಂಧೆ, ದೀಪಕ ಚಿಂಚೊರೆ, ಅಬ್ದುಲ್ ಅಜೀಜ್ ದಾಸಕೊಪ್ಪ, ನಜೀರ್ ಹುಸೇನ್‌ ಮನಿಯಾರ, ವಿ.ಡಿ.ಕಾಮರಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.