ADVERTISEMENT

‘ಸಚಿವ ಸ್ಥಾನಕ್ಕೆ ಜೇಟ್ಲಿ ರಾಜೀನಾಮೆ ನೀಡಲಿ’

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 9:34 IST
Last Updated 20 ಫೆಬ್ರುವರಿ 2018, 9:34 IST

ಧಾರವಾಡ: ‘ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ವಂಚಿಸಿ ಪರಾರಿಯಾಗಿರುವ ನೀರವ್ ಮೋದಿ ಪ್ರಕರಣದ ನೈತಿಕ ಹೊಣೆ ಹೊತ್ತು ಕೇಂದ್ರ ಹಣಕಾಸು  ಸಚಿವ ಅರುಣ್ ಜೇಟ್ಲಿ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಜನ ಸಂಗ್ರಾಮ ಪರಿಷತ್ ಮುಖ್ಯಸ್ಥ ಎಸ್‌.ಆರ್‌.ಹಿರೇಮಠ ಅಗ್ರಹಿಸಿದರು.

ಜವಾಹರಲಾಲ್ ನೆಹರೂ ಅವರು, ಪ್ರಧಾನ ಮಂತ್ರಿಯಾಗಿದ್ದಾಗ ನಡೆದಿದ್ದ ಮುಂದ್ರಾ ಪ್ರಕರಣದ ಜವಾಬ್ದಾರಿ ಹೊತ್ತು ಅಂದಿನ ಹಣಕಾಸು ಸಚಿವ ಟಿ.ಟಿ.ಕೃಷ್ಣಮಾಚಾರಿ ರಾಜೀನಾಮೆ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಅರುಣ್ ಜೇಟ್ಲಿ ಮೌನ ಮುರಿಯಬೇಕು. ಜತೆಗೆ ಈ ಪ್ರಕರಣದ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ನೀರವ್ ಮೋದಿ ಮಾಡಿರುವ ಹಗರಣದ ಮೊತ್ತ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಹೀಗಾಗಿ ಈ ವಿಷಯ ಕುರಿತು 2014ರಿಂದ ಇಲ್ಲಿಯವರೆಗೆ ಬ್ಯಾಂಕ್‌ಗಳಿಗೆ ಆಗಿರುವ ವಂಚನೆ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್‌ ಅವರಿಂದ ಬರಬೇಕಾದ ₹11 ಸಾವಿರ ಕೋಟಿ ಮೊತ್ತವನ್ನು ಸಂಪೂರ್ಣವಾಗಿ ವಸೂಲು ಮಾಡಬೇಕು. ಈ ಜಾಲದಲ್ಲಿ ತೊಡಗಿರುವ ವ್ಯಕ್ತಿ ಎಷ್ಟೇ ಪ್ರಭಾವಿಯಾಗಿದ್ದರೂ ಆತನನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇಂಥ ಘಟನೆ ಮತ್ತೆ ಮರುಕಳಿಸದಂತೆ ಬ್ಯಾಂಕಿಂಗ್ ವ್ಯವಸ್ಥೆ ಬಲಪಡಿಸಬೇಕು. ಜತೆಗೆ ಇಂಥ ಪ್ರವೃತ್ತಿ ಇತರರಲ್ಲಿ ಬೆಳೆಯದಂತೆ ಎಚ್ಚರಿಕೆಯ ಸಂದೇಶ ರವಾನಿಸುವ ತುರ್ತು ಅಗತ್ಯ ಕೇಂದ್ರದ ಮೇಲಿದೆ’ ಎಂದು ಹಿರೇಮಠ ಹೇಳಿದರು.

‘ಫೆ. 24ರಿಂದ ಮಾರ್ಚ್ 1ರ ವರೆಗೆ ಕೂಡಲಸಂಗಮದಿಂದ ಶಿಶುವಿನಹಾಳ ಪ್ರವಾಸ ಕೈಗೊಳ್ಳಲಾಗುವುದು. ಈ ವೇಳೆ ಮಾರ್ಗದುದ್ದಕ್ಕೂ ಸರ್ಕಾರಗಳ ಅವ್ಯವಹಾರ ಹಾಗೂ ಹಗರಣಗಳ ಕುರಿತು ಜನರಿಗೆ ಮಾಹಿತಿ ನೀಡಲಾಗುವುದು. ಜನರಲ್ಲಿ ಜಾಗೃತಿ ಮೂಡಿಸಲಾಗುವುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.