
ನವಲಗುಂದ: ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ನಡೆಯುತ್ತಿರುವ ನಿರಂತರ ಹೋರಾಟ ಸೋಮವಾರ 600ನೇ ದಿನಕ್ಕೆ ಕಾಲಿಟ್ಟಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಎಚ್ಚರಿಸಲು ರೈತ ಒಕ್ಕೂಟದ ಸದಸ್ಯರು ಅರ್ಧ ತಾಸು ಹುಬ್ಬಳ್ಳಿ–ವಿಜಯಪುರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಒಕ್ಕೂಟದ ಅಧ್ಯಕ್ಷ ಲೋಕನಾಥ ಹೆಬಸೂರ ಮಾತನಾಡಿ ಹೋರಾಟಗಾರರನ್ನು ರಾಜಕಾರಣಿಗಳು ಶತ್ರುಗಳಂತೆ ಕಾಣುತ್ತಿದ್ದಾರೆ, ಕುಂಟು ನೇಪ ಹೇಳುತ್ತಾ ಒಂದು ಪಕ್ಷದ ಮೇಲೆ ಇನ್ನೊಬ್ಬರು ಬೊಟ್ಟು ಮಾಡುತ್ತಾ ಹೋರಾಟವನ್ನು ಕಡೆಗಣಿಸುತ್ತಿದ್ದಾರೆಂದು ಆರೋಪಿಸಿದ ಅವರು ಕಳೆದ 600 ದಿನಗಳಿಂದ ಹೋರಾಟ ಮಾಡುತ್ತಾ ಬಂದಿದ್ದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಮುಂದೆ ನವಲಗುಂದದಲ್ಲಿ ಪ್ರತಿಭಟನೆ ಮಾಡುವುದನ್ನು ಬಿಟ್ಟು ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಮತ್ತು ಬೆಂಗಳೂರಿನಲ್ಲಿರುವ ರಾಜ್ಯ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುತ್ತೇವೆಂದು ಎಚ್ಚರಿಸಿದರು.
ರೈತ ಮುಖಂಡ ಸಿದ್ದು ತೇಜಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶಕ್ಕೆ ಪ್ರಧಾನಿಯೋ ಅಥವಾ ಉತ್ತರ ಪ್ರದೇಶಕ್ಕೆ ಮಾತ್ರ ಪ್ರಧಾನಿಯೋ ಎನ್ನುವುದು ತಿಳಿಯುತ್ತಿಲ್ಲ ಅಧಿಕಾರದ ಚುಕ್ಕಾಣಿ ಹಿಡಿಯಲು ಉತ್ತರ ಪ್ರದೇಶದ ರೈತರ ಸಾಲ ಮನ್ನಾ ಮಾಡುತ್ತೇವೆಂದು ಹೇಳಿರುವುದು ಶ್ಲಾಘನೀಯ. ಆದರೆ ಕರ್ನಾಟಕದ ರೈತರು ಏನು ಅನ್ಯಾಯ ಮಾಡಿದ್ದಾರೆ. ನಾವು ದೇಶದಲ್ಲಿದ್ದೇವೆಯೋ ಅಥವಾ ವಿದೇಶದಲ್ಲಿದ್ದೇವೆಯೋ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿಯವರು ತಿಳಿದುಕೊಂಡು ತಕ್ಷಣವೇ ನಮ್ಮ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದರು.
ರೈತ ಮುಖಂಡರಾದ ಸುಭಾಷಚಂದ್ರಗೌಡ ಪಾಟೀಲ, ಮಲ್ಲಿಕಾರ್ಜುನಗೌಡ ಪಾಟೀಲ, ರಮೇಶ ಹಲಗತ್ತಿ, ಬಸವರಾಜ ಬೀರಣ್ಣವರ, ಸಿದ್ದಲಿಂಗಪ್ಪ ಹಳ್ಳದ, ಸಂಗಪ್ಪ ನಿಡವಣಿ, ಫಕ್ಕೀರಪ್ಪ ಬ್ರೀಷ್ಟನವರ, ಡಿ.ವಿ.ಕುರಹಟ್ಟಿ, ಶಿವಾನಂದ ಬರದ್ವಾಡ, ರಂಗನಗೌಡ ಪಾಟೀಲ, ಬರಮಪ್ಪ ಕಾತರಕಿ
ಹುಬ್ಬಳ್ಳಿಯಲ್ಲಿಯೂ ಪ್ರತಿಭಟನೆ
ಹುಬ್ಬಳ್ಳಿ: ರೈತರ ಸಾಲ ಮನ್ನಾ ಹಾಗೂ ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ರತ್ನ ಭಾರತ ರೈತ ಸಮಾಜದ ನೇತೃತ್ವದಲ್ಲಿ ರೈತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನೆ ನಡೆಸಿದರು. ಬಳಿಕ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರನ್ನು ಕಡೆಗಣಿಸಿದೆ ಎಂದು ಆರೋಪಿಸಿ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
‘ಕಳಸಾ–ಬಂಡೂರಿ ಯೋಜನೆ ಜಾರಿಗೆ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕು. ಕುಡಿಯುವ ನೀರಿನ ವಿಚಾರದಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರುವ ಮೂಲಕ ರೈತರ ಸಹನೆಯನ್ನು ಕೆಣಕುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಸರ್ಕಾರಗಳ ವಿರುದ್ಧ ಮತ್ತೆ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯ’ ಎಂದು ರತ್ನ ಭಾರತ ರೈತ ಸಮಾಜ ರಾಜ್ಯ ಘಟಕ ಅಧ್ಯಕ್ಷ ಹೇಮನಗೌಡ ಬಸನಗೌಡ್ರ ಎಚ್ಚರಿಕೆ ನೀಡಿದರು.
‘ರೈತರ ಮೇಲಿನ ಎಲ್ಲ ವಿಧವಾದ ಸಾಲ ಮನ್ನಾ ಮಾಡಬೇಕು. ತೀವ್ರ ಬರಗಾಲದಿಂದ ತತ್ತರಿಸಿರುವ ರೈತರಿಗೆ ಬರ ಪರಿಹಾರ ಕಾಮಗಾರಿ ಪ್ರಾರಂಭಿಸಬೇಕು’ ಎಂದು ಒತ್ತಾಯಸಿದರು.
ರೈತ ಮುಖಂಡರಾದ ಮಹಾದೇವಪ್ಪ ಅಕ್ಕಿ, ನಿಂಗಪ್ಪ ಗಟೆಗಣ್ಣವರ, ಈರಣ್ಣ ಎಡವಣ್ಣವರ, ಬಸವರಾಜ ಹೆಬ್ಬಳ್ಳಿ, ಚೆನ್ನು ಹಿರೇಮಠ, ಶಿವಾನಂದ ಹುಬ್ಬಳ್ಳಿ, ಮೆಹಬೂಬಸಾಬ್ ನದಾಫ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.