ADVERTISEMENT

ಹುಬ್ಬಳ್ಳಿ: ಹೆಬಸೂರು ಶಾಲೆಗೆ 7 ಕೊಠಡಿ ಮಂಜೂರು

ಜಲಾವೃತವಾಗುವ ಜಾಗದಲ್ಲೇ ಹೊಸ ಕೊಠಡಿ ನಿರ್ಮಾಣಕ್ಕೆ ಯೋಜನೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2022, 8:26 IST
Last Updated 4 ನವೆಂಬರ್ 2022, 8:26 IST
ಮಳೆ ಹಾನಿಯಿಂದಾಗಿ ಶಿಥಿಲಾವಸ್ಥೆ ತಲುಪಿರುವ ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರ ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಕಿರಿಯ ಪ್ರಾಥಮಿಕ ಶಾಲೆ
ಮಳೆ ಹಾನಿಯಿಂದಾಗಿ ಶಿಥಿಲಾವಸ್ಥೆ ತಲುಪಿರುವ ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರ ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಕಿರಿಯ ಪ್ರಾಥಮಿಕ ಶಾಲೆ   

ಹುಬ್ಬಳ್ಳಿ: ಮಳೆಗೆ ಜಲಾವೃತಗೊಂಡು ಹಾನಿಗೊಂಡಿದ್ದ ತಾಲ್ಲೂಕಿನ ಹೆಬಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಗೆ ಏಳು ಕೊಠಡಿಗಳು ಮಂಜೂರಾಗಿವೆ. ಆದರೆ, ನೂತನ ಕೊಠಡಿಗಳನ್ನು ಸದ್ಯ ಜಲಾವೃತಗೊಳ್ಳುತ್ತಿರುವ ಜಾಗದಲ್ಲೇ ನಿರ್ಮಿಸಲಾಗುತ್ತಿದೆ.

ವಿಜಯಪುರ–ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಶಾಲೆಯ ಕೂಗಳತೆ ದೂರದಲ್ಲಿ ಬೆಣ್ಣೆಹಳ್ಳ ಮತ್ತು ನಿಗದಿ ಹಳ್ಳಗಳು ಹರಿಯುತ್ತಿವೆ. ಭಾರೀ ಮಳೆಯಾದರೆ ಹಳ್ಳಗಳ‌ ಪ್ರವಾಹದ ನೀರು ಶಾಲೆಯಂಗಳಕ್ಕೆ ಬರುತ್ತದೆ. ಒಂದೂವರೆ ತಿಂಗಳಲ್ಲಿ ಮೂರು ಸಲ ಶಾಲೆ ಜಲಾವೃತಗೊಂಡಿತ್ತು. ಕೊಠಡಿಗಳು ಹಾನಿಗೊಂಡಿದ್ದವು. ಏಳು ಕಂಬಗಳು ನೆಲಕ್ಕುರಳಿ, ಕಲಿಕಾ ಸಾಮಗ್ರಿ ಸೇರಿದಂತೆ ಹಲವು ವಸ್ತುಗಳು ನೀರು ಪಾಲಾಗಿದ್ದವು.

ಪ್ರತಿ ಸಲ ಶಾಲೆಗೆ ನೀರು ಬಂದಾಗಲೂ ಮಕ್ಕಳಿಗೆ ರಜೆ ಘೋಷಿಸುವ ಅಥವಾ ಬೇರೆ ಕಡೆ ತರಗತಿಗೆ ವ್ಯವಸ್ಥೆ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರಿಂದಾಗಿ, ಅವರ ಕಲಿಕೆಗೆ ತೊಂದರೆ ಆಗುತ್ತಿತ್ತು. ಶಿಕ್ಷಕರು ಆತಂಕದಲ್ಲೇ ಶಿಥಿಲ ಕೊಠಡಿಗಳಲ್ಲಿ ಪಾಠ ಮಾಡಬೇಕಿತ್ತು. ಹಾಗಾಗಿ, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಕೂಗು ತೀವ್ರವಾಗಿತ್ತು.

ADVERTISEMENT

ಸಿಎಸ್‌ಆರ್‌ ಸಾಥ್: ‘ಶಿಕ್ಷಣ ಇಲಾಖೆಯ ವಿವೇಕ ಶಿಕ್ಷಣ ಯೋಜನೆಯಡಿ 3 ಕೊಠಡಿ ಮತ್ತು ಕೋಲ್ ಇಂಡಿಯಾದಿಂದ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್‌) ನಾಲ್ಕು ಕೊಠಡಿಗಳು ಹೆಬಸೂರಿನಲ್ಲಿ ನಿರ್ಮಾಣವಾಗುತ್ತಿವೆ’ ಎಂದು ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಿಥಿಲ ಕೊಠಡಿಗಳನ್ನು ಕೆಡವಿ, ಆ ಜಾಗವನ್ನು ಸ್ವಲ್ಪ ಎತ್ತರಿಸಿ ಹೊಸ ಕೊಠಡಿಗಳನ್ನು ನಿರ್ಮಿಸಲಾಗುವುದು. ಶಾಲಾವರಣಕ್ಕೆ ನೀರು ಬಾರದಂತೆ ಸುತ್ತಲೂ ಕಾಂಪೌಂಡ್ ನಿರ್ಮಿಸಲಾಗುವುದು. ಲೋಕೋಪಯೋಗಿ ಇಲಾಖೆ ಪ್ರತಿ ಕೊಠಡಿಯನ್ನು ತಲಾ ₹13 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿದೆ’ ಎಂದು ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಲೆಯನ್ನು ಬೇರೆಡೆಗೆ ಸ್ಥಳಾಂತರಗೊಳಿಸುವ ಕುರಿತು ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರೊಂದಿಗೆ ಸಭೆ ಮಾಡಿದೆವು. ಆದರೆ, ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರಿ ಜಾಗವಿಲ್ಲ. ಸ್ಥಳೀಯರು ಜಮೀನು ಕೊಡಲು ಮುಂದೆ ಬರಲಿಲ್ಲ. ಹಾಗಾಗಿ, ಇರುವ ಜಾಗದಲ್ಲೇ ಕೊಠಡಿ ನಿರ್ಮಾಣಕ್ಕೆ ಮುಂದಾಗಿದ್ದೇವೆ’ ಎಂದು ಹೇಳಿದರು.

ರಾಜ್ಯದೆಲ್ಲೆಡೆ ಸಮಸ್ಯೆ: ‘ಗ್ರಾಮೀಣ ಪ್ರದೇಶದ ಹಲವು ಶಾಲೆಗಳ ಕೊಠಡಿಗಳು ಮಳೆಗೆ ಹಾನಿಯಾಗಿ ಶಿಥಿಲಾವಸ್ಥೆ ತಲುಪಿವೆ. ಅಪಾಯ ಸಂಭವಿಸುವುದಕ್ಕೆ ಮುಂಚೆ, ಎಲ್ಲಾ ಕಡೆ ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಶಾಲೆಯ ಶಿಕ್ಷಕ ಹಾಗೂ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ ಎಂ. ಸಜ್ಜನ ಒತ್ತಾಯಿಸಿದರು.

‘ಶಾಶ್ವತ ಪರಿಹಾರಕ್ಕೆ ಕ್ರಮ’

‘ಶಾಲೆ ಜಲಾವೃತವಾಗುವ ಸ್ಥಳದಲ್ಲೇ ಹೊಸ ಕೊಠಡಿಗಳನ್ನು ನಿರ್ಮಿಸಿದರೆ, ಮುಂದೆಯೂ ಪ್ರವಾಹ ಎದುರಿಸಬೇಕಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳೋಣ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹೇಳಿದ್ದೇನೆ’ ಎಂದು ಸ್ಥಳೀಯ ಶಾಸಕರೂ ಆಗಿರುವ ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಊರಿನ ಸುತ್ತಮುತ್ತ ಎರಡು ಎಕರೆ ಸರ್ಕಾರಿ ಜಾಗ ಗುರುತಿಸಿ. ಇಲ್ಲದಿದ್ದರೆ, ಶಾಲೆಗಾಗಿ ಜಾಗ ಕೊಡುವವರಿದ್ದರೆ ಹುಡುಕಿ. ಕೊಠಡಿ ನಿರ್ಮಾಣಕ್ಕೆ ಅನುದಾನ ಒದಗಿಸಲು ನಾನು ಸಿದ್ಧನಿದ್ದೇನೆ ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ. ಜಾಗ ಸಿಗದಿದ್ದರೆ, ಎರಡು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಯೋಜನೆ ಮಾಡಬಹುದು. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸುವೆ’ ಎಂದರು.

ಪಕ್ಕದ ಶಾಲೆಯಲ್ಲಿ ತರಗತಿ: ‘ಒಂದರಿಂದ ಏಳನೇ ತರಗತಿವರೆಗಿನ ಶಾಲೆಯಲ್ಲಿ ಒಟ್ಟು 10 ಕೊಠಡಿಗಳಿದ್ದು, ಐದು ಸಂಪೂರ್ಣ ಶಿಥಿಲವಾಗಿವೆ. ಸದ್ಯ ಪಕ್ಕದ ಗಂಡು ಮಕ್ಕಳ ಸರ್ಕಾರಿ ಶಾಲೆಯ ನಾಲ್ಕು ಕೊಠಡಿಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ತರಗತಿಗಳನ್ನು ನಡೆಸುತ್ತಿದ್ದೇವೆ’ ಎಂದು ಶಾಲೆಯ ಮುಖ್ಯ ಶಿಕ್ಷಕಿ ರತ್ನಾ ಗ್ರಾಮಪುರೋಹಿತ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.