ADVERTISEMENT

800ನೇ ದಿನಕ್ಕೆ ಕಾಲಿಟ್ಟ ಮಹದಾಯಿ ಹೋರಾಟ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 6:51 IST
Last Updated 4 ಅಕ್ಟೋಬರ್ 2017, 6:51 IST

ನವಲಗುಂದ: ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಜಾರಿಗಾಗಿ ಒತ್ತಾಯಿಸಿ ನಡೆಯುತ್ತಿರುವ ನಿರಂತರ ಧರಣಿ ಸತ್ಯಾಗ್ರಹ ಮಂಗಳವಾರ 800 ದಿನ ಪೂರೈಸಿತು. ಎರಡೂವರೆ ವರ್ಷಗಳಾದರೂ, ಬೇಡಿಕೆ ಈಡೇರದ ಕಾರಣ ಆಕ್ರೋಶಗೊಂಡ ಹೋರಾಟಗಾರರು ಮಧ್ಯಾಹ್ನ ಒಂದು ತಾಸು ಹುಬ್ಬಳ್ಳಿ ವಿಜಯಪುರ –ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ರೈತ ಭವನದಿಂದ ಬಂದ ಹೋರಾಟಗಾರರು ನೀಲಮ್ಮನ ಕೆರೆಯ ಮುಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನೋಡ ನೋಡುತ್ತಿದ್ದಂತೆಯೇ ನೂರಾರು ವಾಹನಗಳ ದಟ್ಟಣೆಯಾಗಿ ಸಂಚಾರಕ್ಕೆ ಅಡ್ಡಿಯಾಯಿತು.

ಇದೇ ಸಂದರ್ಭದಲ್ಲಿ ರೋಗಿಯೊಬರನ್ನು ಆಸ್ಪತ್ರೆಗೆ ದಾಖಲಿಸಲು ಹುಬ್ಬಳ್ಳಿಗೆ ಕರೆದುಕೊಂಡು ತೆರಳುತ್ತಿದ್ದ ಆಂಬುಲನ್ಸ್‌ ಪ್ರತಿಭಟನಾಕಾರರ ನಡುವೆ ಸಿಲುಕಿ ಪರದಾಡಬೇಕಾಯಿತು.

ADVERTISEMENT

ಪಕ್ಷಾತೀತ ಹೋರಾಟ ಸಮಿತಿಯ ಅಧ್ಯಕ್ಷ ಲೋಕನಾಥ ಹೆಬಸೂರ,‘800 ದಿನದಿಂದ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಆಮರಣ ಉಪವಾಸ ಕೈಗೊಂಡಿದ್ದೇವೆ. ರಕ್ತದಲ್ಲಿ ಪತ್ರ ಬರೆದಿದ್ದೇವೆ. ಬಾರುಕೋಲು ಚಳವಳಿ ಮಾಡಿದ್ದೇವೆ, ಕೊನೆಗೆ ಪೊಲೀಸರ ಬೂಟಿನೇಟು ತಿಂದು ಜೈಲಿಗೂ ಹೋಗಿ ಬಂದಿದ್ದೇವೆ. ಆದರೂ ನಮ್ಮ ಹೋರಾಟಕ್ಕೆ ಫಲ ದೊರೆತಿಲ್ಲ’ ಎಂದರು.

‘ಕಳೆದ ಸರ್ವಪಕ್ಷ ಸಭೆಯಲ್ಲಿ ಗೋವಾ ಮುಖ್ಯಮಂತ್ರಿ ಮನವೊಲಿಸುವುದಾಗಿ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಭರವಸೆ ನೀಡಿದ್ದರು. ಆದರೆ ಇವತ್ತಿನವರೆಗೂ ಗೋವಾ ಮುಖ್ಯಮಂತ್ರಿಯ ಮನವೊಲಿಸಲು ವಿಫಲರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಪ್ರಧಾನಿ ನರೇಂದ್ರ ಮೋದಿ ಮೇಲೆ ಒತ್ತಡ ಹಾಕುತ್ತಿಲ್ಲ,  ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ಸ್ಥಳೀಯ ಶಾಸಕರು ನೀಡಿದ ಭರವಸೆ ಈಡೇರಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸೆಪ್ಟೆಂಬರ್‌ 10 ರಂದು ಏಳು ರೈತರು ಆಮರಣ ಉಪವಾಸ ಕೈಗೊಂಡು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದರು. ಸೆ.12 ರಂದು ಆರು ಜನ ಸತ್ಯಾಗ್ರಹಿಗಳ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಅವರಿಗೆ ಸ್ಥಳದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು.

ಪರಿಸ್ಥಿತಿಯ ಗಂಭೀರತೆ ಅರಿತ ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ ಒಂದು ವಾರದಲ್ಲಿ ರೈತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರಿಂದ ಆಮರಣ ಉಪವಾಸ ಅಂತ್ಯಗೊಳಿಸಲಾಗಿತ್ತು.  ಇವತ್ತಿನವರೆಗೂ ಒಂದು ಸಭೆಗೂ ನಮ್ಮನ್ನು ಆಹ್ವಾನಿಸದೆ, ಅವಮಾನಿಸಿದ್ದಾರೆ.  ಬಿಜೆಪಿಯ ಸಂಸದರಂತೂ ಕೇವಲ ಮತ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಹೆಬಸೂರ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.