ADVERTISEMENT

ಹುಬ್ಬಳ್ಳಿ | ಲಾಕ್‌ಡೌನ್‌ ಒತ್ತಡ ನಿರ್ವಹಣೆ: ‘ಸುಂದರ ನಗು ಹರಡಲು’ ಸಹಾಯವಾಣಿ

ಲಾಕ್‌ಡೌನ್‌ ಒತ್ತಡ ನಿರ್ವಹಣೆಗೆ ಮನೋ ಚಿಕಿತ್ಸಕರ ತಂಡ

ಪ್ರಮೋದ್
Published 25 ಏಪ್ರಿಲ್ 2020, 3:55 IST
Last Updated 25 ಏಪ್ರಿಲ್ 2020, 3:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ಲಾಕ್‌ಡೌನ್‌ ಇರುವ ಕಾರಣ ಜನ ಮನೆಯಲ್ಲಿ ಬಂದಿಯಾಗಿದ್ದಾರೆ. ಈ ಒಂದು ತಿಂಗಳ ಅವಧಿಯಲ್ಲಿ ಭಾವನಾತ್ಮಕ ಹಾಗೂ ಭವಿಷ್ಯದ ಬಗೆಗೆ ಚಿಂತಿಸಿ ಒತ್ತಡಕ್ಕೆ ಒಳಗಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಅವರಲ್ಲಿನ ನೋವು, ಆತಂಕ ದೂರ ಮಾಡಿ ಮೊಗದಲ್ಲಿ ಸುಂದರ ನಗು ಹರಡಲು ತಂಡವೊಂದು ಸದ್ದಿಲ್ಲದೆ ಕೆಲಸ ಮಾಡುತ್ತಿದೆ.

ಕೊರೊನಾ ಸೋಂಕು ತಗುಲುವ ಭೀತಿ ಇರುವ ಕಾರಣಕ್ಕಾಗಿ ಕೆಲವರು ಮನೆ ಬಿಟ್ಟು ಹೊರಬಂದಿಲ್ಲ. ಆಗಾಗ ಮಾರುಕಟ್ಟೆಗೆ ಹೋಗುತ್ತಿದ್ದ ಗೃಹಿಣಿಯರಿಗೂ ಈಗ ಅಡುಗೆ ಮನೆ ಬಿಟ್ಟು ಬರಲು ಆಗುತ್ತಿಲ್ಲ.ಹೋಮ್‌ ಕ್ವಾರಂಟೈನ್‌ಗಳಾದವರು, ಮನೆಯಲ್ಲಿದ್ದುಕೊಂಡೇ ಅಂತರ ಕಾಯ್ದುಕೊಂಡವರಿಗೆ ಒಂಟಿತನ, ಭವಿಷ್ಯದಸವಾಲು ಎದುರಿಸುವುದು ಹೇಗೆ? ಎನ್ನುವ ಆತಂಕ ಕಾಡುತ್ತಿದೆ. ಬಹಳಷ್ಟು ಯುವಜನತೆ ಖಿನ್ನತೆಗೆ ಒಳಗಾಗಿದ್ದಾರೆ.

ಅವರಿಗೆ ಈ ತಂಡದ ಸದಸ್ಯರು ಮನೋವೈಜ್ಞಾನದ ಆಧಾರದ ಮೇಲೆ ಸಮಸ್ಯೆ ಪರಿಹರಿಸುತ್ತಿದ್ದಾರೆ. ಇದಕ್ಕಾಗಿ ಆ ತಂಡವು ‘ಸುಂದರ ನಗು ಹರಡೋಣ’ ಎನ್ನುವ ಹೆಸರು ಹೊಂದಿದೆ. ಧಾರವಾಡ ಜಿಲ್ಲೆಯ ಕೊರೊನಾ ವಾರಿಯರ್ಸ್ ಪಡೆಗೂ ಈ ತಂಡಸ್ಥೈರ್ಯ ತುಂಬುವ ಕೆಲಸ ಮಾಡಿದೆ.

ADVERTISEMENT

ಅನುಭವಿ ಮನಶಾಸ್ತ್ರಜ್ಞರು, ಮಾನಸಿಕ ಚಿಕಿತ್ಸಕರು, ಮನೋವೈಜ್ಞಾನಿಕ ಸಮಾಲೋಚಕರು ಮತ್ತು ಮೂವರು ಸ್ವಯಂ ಪ್ರೇರಣೆಯಿಂದ ಕೆಲಸ ಮಾಡುವ ಸಿಬ್ಬಂದಿಯನ್ನು ಒಳಗೊಂಡ 11 ಸದಸ್ಯರ ತಂಡ ಕನ್ನಡ, ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯಲ್ಲಿ ಉಚಿತವಾಗಿ ಜನರ ಮೊಗದಲ್ಲಿ ನಗುಮೂಡಿಸುತ್ತಿದೆ.

ತಂಡದ ಮನೋ ವೈಜ್ಞಾನಿಕ ಸಮಾಲೋಚಕಿ ಡಾ. ಹೇಮಾ ಆಕಳವಾಡಿ ‘ಸಹಜ ದಿನಗಳಲ್ಲಿ ನಿತ್ಯದ ಕೆಲಸ ಮಾಡುತ್ತಿದ್ದರಿಂದ ಏನೂ ಅನ್ನಿಸುತ್ತಿರಲಿಲ್ಲ. ಈಗ ಮನೆಯಲ್ಲಿ ಆರಾಮವಾಗಿ ಇರುವುದೇ ಬಹಳಷ್ಟು ಜನರಲ್ಲಿ ಕಿರಿಕಿರಿ ಉಂಟು ಮಾಡುತ್ತಿದೆ. ಇದು ಮಾನಸಿಕ ಸಮಸ್ಯೆಗಳಿಗೂ ಕಾರಣವಾಗುತ್ತಿದೆ. ಆದ್ದರಿಂದ ಸಹಾಯವಾಣಿ ಆರಂಭಿಸಲಾಗಿದೆ. ಫೋನ್‌ ಮೂಲಕವೇ ಜನ ಸಮಸ್ಯೆ ಪರಿಹರಿಸಿಕೊಳ್ಳಬಹುದು’ ಎಂದರು.

ತಂಡದ ಸಿಬ್ಬಂದಿ ಫೋನಲ್‌ ಶರದ್‌ ಮಾತನಾಡಿ ‘ಈಗ ಭಾವನೆಗಳೇ ನಮ್ಮ ಶತ್ರುಗಳಾಗುತ್ತಿವೆ. ಇದರಿಂದ ಅನೇಕರು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಆದ್ದರಿಂದ ಅವರಲ್ಲಿನ ಖಿನ್ನತೆ ಮತ್ತು ಆತಂಕ ದೂರ ಮಾಡಿ ಇರುವ ಪರಿಸ್ಥಿತಿ ಒಪ್ಪಿಕೊಳ್ಳುವಂತೆ ಅವರನ್ನು ಬದಲಾಯಿಸಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.