ADVERTISEMENT

ಗುಡಗೇರಿ: ಸೋರುತಿದೆ ಶತಮಾನ ಕಂಡ ಶಾಲೆ

ದುರಸ್ತಿಗೆ ಕಾದಿರುವ ಗುಡಗೇರಿಯ ಸರ್ಕಾರಿ ಪ್ರಾಥಮಿಕ ಶಾಲೆ

ವಾಸುದೇವ ಮುರಗಿ
Published 25 ಜುಲೈ 2021, 4:33 IST
Last Updated 25 ಜುಲೈ 2021, 4:33 IST
ಗುಡಗೇರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆಡಳಿತ ಕಚೇರಿ ಮಳೆಯಿಂದಾಗಿ ಸೋರಿರುವುದು
ಗುಡಗೇರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆಡಳಿತ ಕಚೇರಿ ಮಳೆಯಿಂದಾಗಿ ಸೋರಿರುವುದು   

ಗುಡಗೇರಿ: ಗ್ರಾಮದ ಪೇಟೆ ಓಣಿಯಲ್ಲಿರುವ ಶತಮಾನದಷ್ಟು ಹಳೆಯದಾದ ಸರ್ಕಾರಿ ಪ್ರಾಥಮಿಕ ಶಾಲೆಯ ಚಾವಣಿ ಶಿಥಿಲಗೊಂಡಿದ್ದು, ಕೊಠಡಿಗಳು ಸೋರುತ್ತಿವೆ.

1884ರಲ್ಲಿ ದೇವಸ್ಥಾನದಲ್ಲಿ ಆರಂಭಗೊಂಡ ಶಾಲೆ ದಾನಿಗಳು ಹಾಗೂ ಸರ್ಕಾರದ ನೆರವಿನಿಂದ 1988 ಹೊಸ ಕಟ್ಟಡದಲ್ಲಿ ನಡೆಯಿತು. ಆಗ 12 ಕೊಠಡಿಗಳನ್ನು ನಿರ್ಮಿಸಲಾಗಿತ್ತು. ಈ ಶಾಲೆಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಈಗ ಸಮಾಜದ ವಿವಿಧ ರಂಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಆಗಿನ ಶಾಲಾ ಕೊಠಡಿಗಳನ್ನು ದಿವಂಗತ ಎಸ್‌.ಆರ್‌. ಬೊಮ್ಮಾಯಿ ಉದ್ಘಾಟಿಸಿದ್ದರು. 134 ವರ್ಷದ ಈ ಶಾಲೆಯ ಕೊಠಡಿಗಳು ಈಗ ಸೋರುತ್ತಿವೆ. ಈ ಕುರಿತು ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ದುರಸ್ತಿ ಭಾಗ್ಯ ಕಂಡಿಲ್ಲ.

ADVERTISEMENT

ಶಾಲೆಯ ಆಡಳಿತ ಕಚೇರಿಯ ಗೋಡೆಗಳು ಸುಸಜ್ಜಿತವಾಗಿದ್ದು, ಹೆಂಚು ಒಡೆದ ಪರಿಣಾಮ ಮಳೆಗಾಲದಲ್ಲಿ ಶಿಕ್ಷಕರು ಕಚೇರಿ ಒಳಗೆ ಕುಳಿತುಕೊಳ್ಳಲು ಪರದಾಡುವಂತಾಗಿದೆ. ದಾಖಲೆಗಳನ್ನು ಸುರಕ್ಷಿತವಾಗಿಡಲು ಜಾಗವಿಲ್ಲದಂತಾಗಿದೆ.

ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಫಕ್ಕೀರೇಶ ಬೂದಿಹಾಳ ಮಾತನಾಡಿ ‘ಶಾಲೆಯಲ್ಲಿ ಒಟ್ಟು 12 ಕೊಠಡಿಗಳಿದ್ದು, 7 ಕೊಠಡಿಗಳು ಹಾಗೂ ಆಡಳಿತ ಕಚೇರಿ ಚಾವಣಿ ಶಿಥಿಲಗೊಂಡಿದೆ. ಇದನ್ನು ದುರಸ್ತಿ ಮಾಡಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ತರಗತಿಗಳು ಪ್ರಾರಂಭವಾದರೆ ವಿದ್ಯಾರ್ಥಿಗಳನ್ನು ಒಳಗೆ ಕೂಡಿಸಲು ಭಯವಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

**

ಕುಂದಗೋಳ ತಾಲ್ಲೂಕಿನಲ್ಲಿ 30 ಶಾಲೆಗಳ 120 ಕೊಠಡಿಗಳು ಸೋರುತ್ತಿವೆ. ದುರಸ್ತಿಗಾಗಿ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
-ಜಿ.ಎನ್. ಮಠಪತಿ, ಕ್ಷೇತ್ರ ಶಿಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.