ADVERTISEMENT

ಕೆಸರೆರಚಾಟದಿಂದ ಮೀಸಲಾತಿ ಹೋರಾಟಕ್ಕೆ ಹಿನ್ನಡೆ: ಶಾಸಕ ಅರವಿಂದ ಬೆಲ್ಲದ

ಸಚಿವ ಮುರುಗೇಶ ನಿರಾಣಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಕ್‌ಸಮರಕ್ಕೆ ಶಾಸಕ ಬೆಲ್ಲದ ಬೇಸರ

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 6:59 IST
Last Updated 18 ಜನವರಿ 2023, 6:59 IST
ಅರವಿಂದ ಬೆಲ್ಲದ
ಅರವಿಂದ ಬೆಲ್ಲದ   

ಹುಬ್ಬಳ್ಳಿ: ‘ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ, ಸಮುದಾಯದ ನಾಯಕರಾದ ಸಚಿವ ಮುರುಗೇಶ ನಿರಾಣಿ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ ವೈಯಕ್ತಿಕವಾಗಿ ಪರಸ್ಪರ ಕೆಸರೆರಚಾಟ ನಿಲ್ಲಿಸಬೇಕು. ಇದರಿಂದ ಸಮುದಾಯದ ಹೋರಾಟಕ್ಕೆ ಹಿನ್ನಡೆಯಾಗುತ್ತದೆ’ ಎಂದು ಶಾಸಕ ಅರವಿಂದ ಬೆಲ್ಲದ ಎಚ್ಚರಿಕೆ ನೀಡಿದರು.

ನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಹಿಂದಿನ ಸರ್ಕಾರಗಳು ನಿರ್ಲಕ್ಷಿಸಿದ್ದ ಸಮುದಾಯದ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಒಂದು ಹೆಜ್ಜೆ ಮುಂದೆ ಇಟ್ಟಿದೆ’ ಎಂದರು.

‘ವೀರಶೈವ, ಲಿಂಗಾಯತ, ಒಕ್ಕಲಿಗ, ಮರಾಠ ಸೇರಿದಂತೆ ಯಾವ ಸಮುದಾಯಗಳಿಗೂ ಅನ್ಯಾಯವಾಗದಂತೆ ಸರ್ಕಾರ ನೋಡಿಕೊಳ್ಳಲಿದೆ. ಮೀಸಲಾತಿ ವಿಷಯ
ದಲ್ಲಿ ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಹೆಚ್ಚಿನ ಕಾಲಾವಕಾಶ ಬೇಕು. ಹೋರಾಟದ ನೇತೃತ್ವ ವಹಿಸಿರುವ ಬಸವಜಯ ಮೃತ್ಯುಂಜಯ ಶ್ರೀ ಅಲ್ಪಕಾಲದ ಗಡುವು ನೀಡುವುದು ಸರಿಯಲ್ಲ’ ಎಂದರು.

ADVERTISEMENT

‘ಸ್ವಾಮೀಜಿ ಅವರು ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಿದ್ದು ಸರಿಯಲ್ಲ. ಈ ಬಗ್ಗೆ ಸ್ವಾಮೀಜಿ ಅವರ ಜೊತೆಗೂ ಮಾತನಾಡಿದ್ದೇನೆ. ಕೆಲವೊಮ್ಮೆ ಬೇರೆಯ
ವರಿಂದಾಗಿಯೂ ಇಂತಹ ನಿರ್ಧಾರ ಕೈಗೊಂಡಿರುತ್ತಾರೆ. ಆದರೂ, ಸ್ವಾಮೀಜಿ ಹೋರಾಟ ಜೀವಿ. ಮೀಸಲಾತಿ ಹೋರಾಟದ ಸಂಪೂರ್ಣ ಶ್ರೇಯಸ್ಸು ಅವರಿಗೇ ಸಲ್ಲಬೇಕು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಟಿಕೆಟ್ ಖಚಿತ: ‘ನನ್ನ ಕ್ಷೇತ್ರದಲ್ಲಾಗಿರುವ ಕೆಲಸಗಳನ್ನು ಗಮನಿಸಿ ಪಕ್ಷ ಮತ್ತೆ ನನಗೆ ಟಿಕೆಟ್ ನೀಡುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಎಲ್ಲಾ ಸಮುದಾಯಗಳ ಜತೆಗೂ ಉತ್ತಮ ಬಾಂಧವ್ಯವಿದೆ. ಮುಸ್ಲಿಂ ಸಮುದಾಯದ ಹಿಂದುಳಿದ ಜನರಿಗೆ ಸೌಲಭ್ಯ ಕೊಡಿಸುವ ಪ್ರಯತ್ನ ಮಾಡಿದ್ದೇನೆ. ಪರಿಶಿಷ್ಟರಿಗೆ ಮೂರು ಸಾವಿರ ಮನೆ ನಿರ್ಮಾಣ ಸೇರಿದಂತೆ, ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.

‘ಮುಸ್ಲಿಮರ ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್’

‘ಬಿಆರ್‌ಟಿಎಸ್ ಮಾರ್ಗದಲ್ಲಿದ್ದ ಬೈರಿದೇವರಕೊಪ್ಪದ ದರ್ಗಾ ತೆರವಿನ ಹಿಂದೆ ಕೋಮು ರಾಜಕೀಯದ ಯಾವುದೇ ಉದ್ದೇಶವಿಲ್ಲ. ಈ ವಿಷಯದಲ್ಲಿ ಕಾಂಗ್ರೆಸ್ ಮುಸ್ಲಿಮರ ದಾರಿ ತಪ್ಪಿಸುತ್ತಿದೆ. ಯೋಜನೆಯ ನೀಲನಕ್ಷೆ ತಯಾರಾಗಿದ್ದು, ಕಾಮಗಾರಿ ನಡೆದಿದ್ದು, ತೆರವು ಮಾಡಬೇಕಾದ ಧಾರ್ಮಿಕ ಕೇಂದ್ರಗಳನ್ನು ಗುರುತಿಸಿದ್ದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ. ಅವರಿಗೆ ಅಷ್ಟೊಂದು ಕಾಳಜಿ ಇದ್ದಿದ್ದರೆ, ದರ್ಗಾ ಉಳಿಸಲು ಅಥವಾ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕಿತ್ತು’ ಎಂದು ಬೆಲ್ಲದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.