ADVERTISEMENT

ಹುಬ್ಬಳ್ಳಿ | ನಕಲಿ ಕಾರ್ಮಿಕರ ಕಾರ್ಡ್‌ಗಳ ರದ್ದು: ಅರ್ಹರ ಪರದಾಟ

ಗೋವರ್ಧನ ಎಸ್‌.ಎನ್‌.
Published 5 ಡಿಸೆಂಬರ್ 2024, 7:01 IST
Last Updated 5 ಡಿಸೆಂಬರ್ 2024, 7:01 IST
<div class="paragraphs"><p>ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಚಿಹ್ನೆ</p></div>

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಚಿಹ್ನೆ

   

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ರಾಜ್ಯದಲ್ಲಿ ವಿತರಣೆಯಾಗಿದ್ದ ಲಕ್ಷಾಂತರ ನಕಲಿ ಕಾರ್ಮಿಕರ ಕಾರ್ಡ್‌ಗಳನ್ನು ರದ್ದುಗೊಳಿಸಿದೆ. ಇದರಲ್ಲಿ ಅಸಲಿ ಕಾರ್ಮಿಕರ ಕಾರ್ಡ್‌ಗಳು ಸಹ ರದ್ದಾಗಿರುವುದರಿಂದ ಅವರು ಪರದಾಡುವಂತಾಗಿದೆ.

ಕಾರ್ಮಿಕರಲ್ಲದವರೂ ಸುಳ್ಳು ದಾಖಲೆ ನೀಡಿ, ಪ್ರಭಾವ ಬಳಸಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸ್ಮಾರ್ಟ್‌ ಕಾರ್ಡ್‌ ಪಡೆದಿದ್ದು ಪತ್ತೆಯಾಗಿತ್ತು. ಮಂಡಳಿಯು ಕಾರ್ಯಾಚರಣೆ ಕೈಗೊಂಡು, ಲಕ್ಷಾಂತರ ಕಾರ್ಡ್‌ಗಳನ್ನು ರದ್ದುಗೊಳಿಸಿದೆ. ಧಾರವಾಡ ಜಿಲ್ಲೆಯಲ್ಲೇ ಒಟ್ಟು 13,407 ಕಾರ್ಡ್‌ಗಳನ್ನು ರದ್ದಪಡಿಸಲಾಗಿದೆ.

ADVERTISEMENT

‘ಮನಸೋಇಚ್ಛೆ ಕಾರ್ಡ್‌ಗಳನ್ನು ವಿತರಿಸಿದ್ದ ಸರ್ಕಾರವೇ ಈಗ ರದ್ದುಮಾಡುತ್ತಿದೆ. ಕಾರ್ಡ್‌ ರದ್ದು ಮಾಡುವ ಭರದಲ್ಲಿ ಅಸಲಿ ಹಾಗೂ ನಕಲಿ ಕಾರ್ಮಿಕರನ್ನು ಗುರುತಿಸುವಲ್ಲಿ ವಿಫಲವಾಗುತ್ತಿದೆ. ಇದರಿಂದ ಅಸಲಿ ಕಾರ್ಮಿಕರಿಗೆ ಸೌಲಭ್ಯಗಳು ಕೈತಪ್ಪುತ್ತಿವೆ’ ಎನ್ನುತ್ತಾರೆ ಸಿಐಟಿಯು ರಾಜ್ಯ ಘಟಕದ ಕಾರ್ಯದರ್ಶಿ ಮಹೇಶ ಪತ್ತಾರ.

‘ಲಕ್ಷಾಂತರ ಕಾರ್ಮಿಕರು ಇನ್ನೂ ಮಂಡಳಿಯ ಸದಸ್ಯರಾಗಿಲ್ಲ. ನಕಲಿ ಕಾರ್ಡ್‌ ಹಾವಳಿಯಿಂದ ಮಂಡಳಿಗೆ ಹಣಕಾಸಿನ ಹೊರೆಯಾಗಿ, ಸೌಲಭ್ಯಗಳನ್ನು ಕಡಿತ ಮಾಡುತ್ತಿದೆ. ಕೇಂದ್ರೀಯ ಸಂಘಟನೆಗಳು, ಪಿಡಿಒ, ನಿರ್ಮಾಣ ಕಂಪನಿಗಳು ನೀಡಬೇಕಿರುವ ಉದ್ಯೋಗ ಪ್ರಮಾಣ ಪತ್ರವನ್ನು ವ್ಯಕ್ತಿಗತ ಸಂಘಟನೆಗಳು, ಸೈಬರ್‌ ಕೇಂದ್ರಗಳು ನೀಡಿದ್ದರಿಂದಲೇ ಈ ಎಲ್ಲ ಸಮಸ್ಯೆ ಉಂಟಾಗಿದೆ’ ಎಂದರು.

ಕಠಿಣ ಷರತ್ತು: ‘ಕಾರ್ಮಿಕ ಕಾರ್ಡ್‌ಗೆ ವೇತನಪತ್ರ, ಹಾಜರಾತಿ ಪಟ್ಟಿ, ಕಟ್ಟಡ ಪರವಾನಗಿ, ವಾಸಸ್ಥಳ ದೃಢೀಕರಣದಂತಹ ದಾಖಲೆ ಒದಗಿಸಬೇಕಿದ್ದು, ವಲಸೆ ಕಾರ್ಮಿಕರಿಗೆ ಈ ಎಲ್ಲ ದಾಖಲೆ ಒದಗಿಸುವುದು ಕಷ್ಟವಾಗುತ್ತಿದೆ. ಬಹುತೇಕ ಕಾರ್ಮಿಕರು ಅಸಂಘಟಿತ ವಲಯದವರು. ಹಾಗಾಗಿ, ಹಲವಾರು ಕಾರ್ಮಿಕರಿಗೆ ಕಾರ್ಡ್‌ ಪಡೆಯಲು ಸಾಧ್ಯವಾಗುತ್ತಿಲ್ಲ ಹಾಗೂ ಕಾರ್ಡ್‌ ರದ್ದಾದವರಿಗೆ ಮರು ಪಡೆಯಲಾಗುತ್ತಿಲ್ಲ’ ಎಂದು ಸಿಐಟಿಯು–ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್‌ ವಿವರಿಸಿದರು.

‘ಕಾರ್ಡ್‌ ರದ್ದಾದರೆ ಮೂರು ತಿಂಗಳ ನಂತರ ಮತ್ತೆ ಅರ್ಜಿ ಸಲ್ಲಿಸಬೇಕಿದೆ. ನೆರವಿನ ಪ್ರಮಾಣವನ್ನು ಕಡಿತಗೊಳಿಸಿರುವುದರಿಂದ, ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವ ಕಾರ್ಮಿಕರ ಸಂಖ್ಯೆ ಕಡಿಮೆಯಾಗುತ್ತಿದೆ. ಇಲಾಖೆಯ ಹೊಸ ಪ್ರಯೋಗಗಳಿಂದ ಕಾರ್ಮಿಕರಿಗೆ ನಷ್ಟವಾಗುತ್ತಿದೆ. ಈ ಕುರಿತು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ’ ಎಂದರು.

ಕಾರ್ಡ್‌ ರದ್ದಾದರೆ ಮೇಲ್ಮನವಿ ಸಲ್ಲಿಸಬಹುದು. ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಸಿಬ್ಬಂದಿ ಕೊರತೆ ಇರುವ ಕಾರಣ ಹೊರಗುತ್ತಿಗೆ ಸಿಬ್ಬಂದಿ ಮೂಲಕ ಪರಿಶೀಲನೆ ನಡೆಸಲಾಗುತ್ತದೆ
ಶ್ವೇತಾ ಎಸ್. ಸಹಾಯಕ ಕಾರ್ಮಿಕ ಆಯುಕ್ತೆ 
ಹಲವು ವರ್ಷಗಳಿಂದ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿರುವೆ. ಏಕಾಏಕಿ ಕಾರ್ಡ್‌ ರದ್ದು ಮಾಡಲಾಗಿದೆ. ಯಾವುದೇ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲಾಗುತ್ತಿಲ್ಲ
ನಯೀಂ ಅಶ್ರಫ್‌ ಜೋಗೂರ ಹಾಗೂ ಮೊಹಮ್ಮದ್‌ ಇಸಾಕ್‌ ಗೋಳನದಿ ಹುಬ್ಬಳ್ಳಿ
‘ಅನರ್ಹರಿಂದ ಸೌಲಭ್ಯ ಹಿಂಪಡೆಯಲಿ’
‘ಮಂಡಳಿಯ ನಿಯಮದ ಪ್ರಕಾರ ವರ್ಷದಲ್ಲಿ ಕನಿಷ್ಠ 90 ದಿನ ನಿರ್ಮಾಣ ಕೆಲಸದಲ್ಲಿ ಕಾರ್ಮಿಕ ತೊಡಗಿದ್ದರೆ ಕಾರ್ಡ್‌ ನೀಡಬಹುದು. ಆನಂತರ ಕೆಲವರು ಬೇರೆ ಕೆಲಸದಲ್ಲಿ ತೊಡಗಿದ್ದನ್ನು ಪರಿಗಣಿಸಿ ಕಾರ್ಡ್‌ ರದ್ದು ಮಾಡಲಾಗಿದೆ. ಅಧಿಕಾರಿಗಳು ಯಾರನ್ನೋ ಕೇಳಿ ಕಾರ್ಡ್‌ ರದ್ದು ಮಾಡಿದ ಉದಾಹರಣೆಗಳೂ ಇವೆ. ನಮ್ಮ ಗಮನಕ್ಕೆ ಬಂದ ಇಂತಹ ಪ್ರಕರಣಗಳಲ್ಲಿ ಕಾರ್ಮಿಕರಿಂದ ಮರು ಅರ್ಜಿ ಸಲ್ಲಿಸಿ ಕಾರ್ಡ್‌ ಕೊಡಿಸಿದ್ದೇವೆ’ ಎಂದು ಎಐಯುಟಿಯುಸಿ–ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ ಬಡಿಗೇರ ಹೇಳಿದರು.   ‘ಕಾರ್ಮಿಕರು ಇರುವಲ್ಲಿಯೇ ಪರಿಶೀಲನೆ ನಡೆಸಿ ಕಾರ್ಡ್‌ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.  ಅಧಿಕಾರಿಗಳು ಹೋದಾಗ ಕಾರ್ಮಿಕ ಅಲ್ಲಿ ಇರಲಿಲ್ಲವೆಂದರೆ ಮತ್ತೆ ಸಮಸ್ಯೆಯಾಗುತ್ತದೆ. ಕಾರ್ಮಿಕ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವ ಸಾಫ್ಟ್‌ವೇರ್‌ನಲ್ಲಿನ ತಾಂತ್ರಿಕ ದೋಷ ನಿವಾರಣೆ ಸೇರಿದಂತೆ ನಕಲಿ ಕಾರ್ಡ್‌ದಾರರು ಪಡೆದ ಸೌಲಭ್ಯವನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.