ADVERTISEMENT

ಅಪರಾಧ ಚಟುವಟಿಕೆಗೆ ಬೀಳದ ಕಡಿವಾಣ

ನಿರಂತರ ಘಟನೆಗಳಿಂದ ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

ನಾಗರಾಜ ಬಿ.ಎನ್‌.
Published 16 ಸೆಪ್ಟೆಂಬರ್ 2019, 19:45 IST
Last Updated 16 ಸೆಪ್ಟೆಂಬರ್ 2019, 19:45 IST
   

ಹುಬ್ಬಳ್ಳಿ: ‘ರೌಡಿಶೀಟರ್‌ಗಳ ಹೆಡೆಮುರಿ ಕಟ್ಟುತ್ತೇನೆ, ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುತ್ತೇನೆ, ಶಾಂತಿ ಸುವ್ಯವಸ್ಥೆ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇನೆ’

ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರೇಟ್‌ನ ನೂತನ ಕಮಿಷನರ್‌ ಆಗಿ ಅಧಿಕಾರ ಸ್ವೀಕರಿಸಿದ ಆರಂಭದಲ್ಲಿ ಆರ್‌. ದಿಲೀಪ್‌ ಅವರು ಸಾರ್ವಜನಿಕರಿಗೆ ನೀಡಿದ್ದ ಭರವಸೆ ಇದು. ಆದರೆ, ಅಧಿಕಾರ ಸ್ವೀಕರಿಸಿ ತಿಂಗಳು ಪೂರೈಸುವುದರ ಒಳಗೆ ವಾಣಿಜ್ಯ ನಗರಿಯಲ್ಲಿ ಮೇಲಿಂದ ಮೇಲೆ ಅಪರಾಧ ಚಟುವಟಿಕೆಗಳು ನಡೆಯುತ್ತಿವೆ.

ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ದಿನವೇ ಐದಾರು ಚಾಕು ಇರಿತ ಪ್ರಕರಣ ನಡೆದಿವೆ. ಪೊಲೀಸ್‌ ಇಲಾಖೆ ದುರ್ಗದಬೈಲ್‌ ಮತ್ತು ದಾಜೀಬಾನ್‌ ಪೇಟೆಯಲ್ಲಿ ನಡೆದ ಪ್ರಕರಣಗಳನ್ನು ಮಾತ್ರ ಚಾಕು ಇರಿತ ಎಂದು ದಾಖಲಿಸಿಕೊಂಡಿದೆ.

ADVERTISEMENT

ಆದರೆ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಶನಿವಾರ ಕಿಮ್ಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ’ಪೊಲೀಸರು ತಮ್ಮ ರಕ್ಷಣೆಗೋಸ್ಕರ ವೈದ್ಯರ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸುತ್ತಿದ್ದಾರೆ’ ಎಂದು ಹೇಳಿದ್ದರು. ಅಷ್ಟೇ ಅಲ್ಲ, ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್‌ ಇಲಾಖೆ ವೈಫಲವಾಗಿದೆ’ ಎಂದು ಆರೋಪಿಸಿದ್ದರು.

ಆರೋಪಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಕೆಲವರು ಗಾಂಜಾ ಸೇವಿಸಿ ಗಲಾಟೆ ಮಾಡಿರುವ ಕುರಿತು ಬಾಯ್ಬಿಟ್ಟಿರುವುದಾಗಿ ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

ನೂತನ ಕಮಿಷನರ್‌ ಆಗಿ ದಿಲೀಪ್‌ ಅಧಿಕಾರ ಸ್ವೀಕರಿಸಿದ ಎರಡೇ ದಿನದಲ್ಲಿ ವಿದ್ಯಾನಗರದ ಜಯನಗರ ಕ್ರಾಸ್‌ ಬಳಿ ಉಣಕಲ್‌ ನಿವಾಸಿ ಸುಭಾಷ ಮುಂಡಗೋಡ ಅವರಿಗೆ ಪುರುಷೋತ್ತಮ ಪೆನಗೊಂಡ ಹಾಗೂ ಅವರ ಸಹೋದರರು ಸೇರಿ ಚಾಕು ಇರಿದಿದ್ದರು. ಅದಾದ ಎರಡೇ ದಿನದಲ್ಲಿ ನೇಕಾರ ನಗರದ ಬ್ಯಾಹಟ್ಟಿ ಪ್ಲಾಟ್‌ನಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ ನಡೆದಿತ್ತು.

ಸಣ್ಣ ವಿಷಯಕ್ಕೂ ಚಾಕು, ಚೂರಿ:

ಹುಬ್ಬಳ್ಳಿಯಲ್ಲಿ ಹಾಡುಹಗಲೇ ಸುಲಿಗೆ, ಮನೆ ಕಳವು, ದರೋಡೆಯಂತಹ ಪ್ರಕರಣಗಳು ಸಹ ಒಂದರ ಹಿಂದೆ ಒಂದರಂತೆ ನಡೆಯುತ್ತಿವೆ. ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಪುಡಿ ರೌಡಿಗಳು ಸಹ ಪೊಲೀಸರ ಭಯವಿಲ್ಲದೆ ತಲ್ವಾರ್‌, ಚಾಕುಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುತ್ತಿದ್ದಾರೆ. ಇವೆಲ್ಲ ಪೊಲೀಸ್‌ ಇಲಾಖೆ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.