ಹುಬ್ಬಳ್ಳಿ: ಸರ್ಕಾರಿ ಸೌಲಭ್ಯ ಪಡೆಯಲು ರಾಜ್ಯದ ರಾಷ್ಟ್ರೀಕೃತ ಮತ್ತು ಖಾಸಗಿ ವಲಯದ ವಿವಿಧ ಬ್ಯಾಂಕ್‌ಗಳಲ್ಲಿ ಜನರು ತೆರೆದಿದ್ದ 3,305 ಖಾತೆಗಳು ಈಗ ವಾರಸುದಾರರಿಲ್ಲದೆ ನಿಷ್ಕ್ರಿಯವಾಗಿವೆ. ಈ ಖಾತೆಗಳಲ್ಲಿ ಇರುವ ₹55.78 ಕೋಟಿ ಹಣವನ್ನು ಮರಳಿಸಲು ಬ್ಯಾಂಕ್‌ನವರು ವಾರಸು ದಾರರಿಗೆ ಮತ್ತು ಕಾನೂನುಬದ್ಧ ಅವಲಂಬಿತರಿಗೆ ಹುಡುಕಾಟ ನಡೆಸಿದ್ದಾರೆ.
ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ₹45.14 ಕೋಟಿ ಮತ್ತು ಖಾಸಗಿ ವಲಯದ ಬ್ಯಾಂಕ್ ಗಳಲ್ಲಿ ₹7.03 ಕೋಟಿ ಹಣವು ರಾಜ್ಯ ಸರ್ಕಾರದ ಠೇವಣಿಯಾಗಿದ್ದು, ಯಾರ ಬಳಕೆಗೂ ಬಾರದೆ ಹಾಗೆಯೇ ಉಳಿದಿದೆ.
ವಾರಸುದಾರರಿಲ್ಲದ ಅತಿ ಹೆಚ್ಚು 190 ಖಾತೆಗಳು ಮೈಸೂರು ಜಿಲ್ಲೆಯಲ್ಲಿದ್ದು, ₹5.17 ಕೋಟಿ ಠೇವಣಿ ಸಂಗ್ರಹವಾಗಿದೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 120 ಖಾತೆಗಳಿದ್ದು, ₹ 6.38 ಕೋಟಿ ಇದೆ. ಅತಿ ಕಡಿಮೆ 34 ಖಾತೆಗಳು ಬಾಗಲಕೋಟೆ ಜಿಲ್ಲೆಯ ಲ್ಲಿದ್ದು, ₹1.04 ಕೋಟಿ ಠೇವಣಿ ಇದೆ. ಕೊಡಗು ಜಿಲ್ಲೆಯಲ್ಲಿ ಅತಿ ಕಡಿಮೆ ₹3.37 ಲಕ್ಷ ಠೇವಣಿಯಿದ್ದು, 99 ಖಾತೆಗಳಿವೆ.
ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ರಾಷ್ಟ್ರೀಕೃತ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಲು ಸಾರ್ವಜನಿಕರಿಗೆ ಸೂಚಿಸಲಾಗುತ್ತದೆ. ಹೀಗೆ ತೆರೆಯ ಲಾದ ಖಾತೆಗಳಲ್ಲಿ ಸೌಲಭ್ಯದ ಹಣ ಜಮಾ ಆಗುತ್ತದೆ. ಆದರೆ, ಕೆಲವರು ಆ ಹಣವನ್ನು ಪಡೆಯದೇ ಹಾಗೆಯೇ ಇಟ್ಟಿರುತ್ತಾರೆ. ಮತ್ತೆ ಕೆಲ ಫಲಾನುಭವಿ ಗಳು ಮೃತಪಟ್ಟಿರುತ್ತಾರೆ. ಕೆಲವು ಖಾತೆ ಗಳಿಗೆ ಅವಲಂಬಿತರ ಹೆಸರೇ ಇಲ್ಲ. ಹೀಗಾಗಿ ಸರ್ಕಾರದ ಹಣ ಅನೇಕ ವರ್ಷಗಳಿಂದ ಅಲ್ಲಿಯೇ ಇದೆ.
‘ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ, ಶಿಷ್ಯವೇತನ ಸೇರಿ ಇತರ ಸೌಲಭ್ಯಗಳಿಗೆ ತೆರೆಯ ಲಾದ ಖಾತೆಗಳ ಪಟ್ಟಿಯನ್ನು 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ನಿಷ್ಕ್ರಿಯಗೊಳಿಸಿದ ಪಟ್ಟಿಯನ್ನು ಬ್ಯಾಂಕ್‌ಗಳು ತಮ್ಮ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲು ಅಥವಾ ನವೀಕರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲ ಬ್ಯಾಂಕ್‌ಗಳಿಗೆ ಸಲಹೆ ನೀಡಿದೆ. ಅದರನ್ವಯ ಬ್ಯಾಂಕ್‌ಗಳು ಖಾತೆಯನ್ನು ಮರುಸಕ್ರಿಯಗೊಳಿಸಲು ಅಥವಾ ಮುಕ್ತಾಯಗೊಳಿಸಲು ಮುಂದಾಗಿವೆ’ ಎಂದು ಧಾರವಾಡ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ ಎನ್.ಜಿ. ತಿಳಿಸಿದರು.
ಇಂತಹ ಖಾತೆಗಳಲ್ಲಿ ಇರುವ ಹಣವನ್ನು ಸುಲಭವಾಗಿ ಪತ್ತೆ ಮಾಡಲು ಮತ್ತು ವಾರಸುದಾರರಿಗೆ ತಲುಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರೀಕೃತ ವೆಬ್ ಪೋರ್ಟಲ್ (UDGAM-unclame diposits gateway to access information) ಪರಿಚಯಿಸಿದೆ. ಪೋರ್ಟಲ್‌ನಲ್ಲಿ ಹೆಸರು, ಜನ್ಮದಿನಾಂಕ, ಆಧಾರ್ ಕಾರ್ಡ್ ನಂಬರ್ ಸ್ಪಷ್ಟವಾಗಿ ನಮೂದಿಸಿದರೆ, ಅವರ ಹೆಸರಲ್ಲಿ ಯಾವ ಬ್ಯಾಂಕ್‌ನಲ್ಲಿ ನಿಷ್ಕ್ರಿಯವಾಗಿರುವ ಖಾತೆಯಿದೆ, ಮೊತ್ತ ಎಷ್ಟಿದೆ ಎನ್ನುವುದು ತಿಳಿಯುತ್ತದೆ.
ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಹಣ ನಿರ್ವಹಣೆ ಮಾಡದ ಖಾತೆಗಳು ಸಾಕಷ್ಟಿವೆ. ಸರ್ಕಾರದ ಅನುದಾನ ಜಮಾ ಆದ ಶಿಷ್ಯವೇತನ ಮತ್ತು ರೈತರ ಸಹಾಯಧನ ಖಾತೆಗಳು ಇವೆ.–ಪ್ರಭುದೇವ ಎನ್.ಜಿ., ವ್ಯವಸ್ಥಾಪಕ ಧಾರವಾಡ ಜಿಲ್ಲಾ ಲೀಡ್ ಬ್ಯಾಂಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.