ADVERTISEMENT

ನಿಂದಿಸಿದವರನ್ನು ಬಂಧಿಸುವಂತೆ ವಕೀಲರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2020, 13:38 IST
Last Updated 11 ಮಾರ್ಚ್ 2020, 13:38 IST
ಧಾರವಾಡದ ಉಪನಗರ ಠಾಣೆ ಎದುರು ಬುಧವಾರ ಧರಣಿ ನಡೆಸಿದ ವಕೀಲರೊಂದಿಗೆ ಪೊಲೀಸ್ ಅಧಿಕಾರಿಗಳು ಮಾತುಕತೆ ನಡೆಸಿದರು
ಧಾರವಾಡದ ಉಪನಗರ ಠಾಣೆ ಎದುರು ಬುಧವಾರ ಧರಣಿ ನಡೆಸಿದ ವಕೀಲರೊಂದಿಗೆ ಪೊಲೀಸ್ ಅಧಿಕಾರಿಗಳು ಮಾತುಕತೆ ನಡೆಸಿದರು   

ಧಾರವಾಡ: ಗ್ರಾಮೀಣ ಠಾಣೆ ಪೊಲೀಸರು ವಕೀಲರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಬುಧವಾರವೂ ವಕೀಲರ ಸಂಘದ ಸದಸ್ಯರು ಇಲ್ಲಿನ ಉಪನಗರ ಠಾಣೆ ಎದುರು ಧರಣಿ ನಡೆಸಿದರು.

ಮಾರ್ಚ್ 9ರಂದು ಗ್ರಾಮೀಣ ಠಾಣೆಗೆ ಭೇಟಿ ನೀಡಿದ್ದ ಸರ್ಕಾರಿ ವಕೀಲ ಸುನೀಲ ಗುಡಿ ಎಂಬುವವರೊಂದಿಗೆ ಠಾಣೆಯ ಪೊಲೀಸರು ಅನುಚಿತವಾಗಿ ವರ್ತಿಸಿದ್ದರು ಎಂದು ಆರೋಪಿಸಿ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಕೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ತಪ್ಪು ಎಸಗಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸೋಮವಾರ ಕೋರ್ಟ್ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದರು.

ಇದಾದ ನಂತರ ಕಾನ್‌ಸ್ಟೆಬಲ್ ಬಾಬುರಾವ್ ಕಾಂಬಳೆ ಅವರನ್ನು ಅಮಾನತು ಮಾಡಲಾಗಿತ್ತು. ನಂತರ ವಕೀಲಸುನೀಲ ಗುಡಿ ಹಾಗೂ ಅಮ್ಮಿನಭಾವಿ ಗ್ರಾಮದ ಯಲ್ಲಪ್ಪ ಕೋಡಬಳಿ ಎಂಬುವವರ ವಿರುದ್ಧ ಜಾತಿನಿಂದನೆ ಪ್ರಕರಣವನ್ನು ಕಾಂಬಳೆ ಅವರೂ ದಾಖಲಿಸಿದ್ದರು.

ADVERTISEMENT

ಇದಕ್ಕೆ ಆಕ್ರೋಶಗೊಂಡ ವಕೀಲರು, ಕಾನ್‌ಸ್ಟೆಬಲ್‌ಗಳಾದ ಗಣೇಶ ಕಾಂಬಳೆ, ದೇವರಾಜ, ಪಿಎಸ್‌ಐ ಮಹೇಂದ್ರ ಕುಮಾರ ನಾಯಕ, ಸಿಪಿಐ ಸಿದ್ಧನಗೌಡ ಪಾಟೀಲರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನಾ ರ‍್ಯಾಲಿ ನಡೆಸಿದರು. ಆರೋಪಿಗಳನ್ನು ಬಂಧಿಸುವವರೆಗೂ ನಿರಂತರ ಧರಣಿ ನಡೆಸುತ್ತಲೇ ಇರುವ ಎಚ್ಚರಿಕೆಯನ್ನು ವಕೀಲರು ನೀಡಿದರು. ನಂತರ ಮಧ್ಯಪ್ರವೇಶಿಸಿದ ಪೊಲೀಸ್ ಅಧಿಕಾರಿಗಳು ವಕೀಲರೊಂದಿಗೆ ಚರ್ಚಿಸಿ, ಧರಣಿ ಕೈಬಿಡುವಂತೆ ಮನವಿ ಮಾಡಿಕೊಂಡರು.

ಧಾರವಾಡ ವಕೀಲರ ಸಂಘದ ಅಧ್ಯಕ್ಷ ಬಿ.ಎಸ್.ಘೋಡ್ಸೆ, ಉಪಾಧ್ಯಕ್ಷ ರಾಜು ಕೋಟಿ, ಕಾರ್ಯದರ್ಶಿ ಎನ್.ಆರ್.ಮಟ್ಟಿ, ಸದಸ್ಯರಾದ ರಾಜು ಅವಲಕ್ಕಿ, ಪ್ರಕಾಶ ಉಡಿಕೇರಿ,ಕೆ.ಎಚ್.ಪಾಟೀಲ, ರೂಪಾ ಕೆಂಗಾನೂರ, ಅಶೋಕ ದೊಡ್ಡಮನಿ, ಕರಿಯಪ್ಪ ಅಮ್ಮಿನಬಾವಿ, ಆನಂದಗೌಡ ಬಾಡಿಯವರ, ಕೃಷ್ಣ ಪವಾರ, ರಾಹುಲ ಅರವಡೆ, ಸಂತೋಷ ಭಾವಿಹಾಳ, ವೀಣಾ ನಾಗಮ್ಮನವರ, ಜ್ಯೋತಿ ಪೂಜಾರ, ಸಂತೋಷ ಕಮತರ, ರೇಣುಕಾ ಪಾಟೀಲ, ಸುನೀಲ ಗುಡಿ, ವೀಣಾ ಗೌರಪ್ಪನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.