ADVERTISEMENT

‘ಏರೋಸ್ಪೇಸ್‌ ಪಾರ್ಕ್‌: ಹುಬ್ಬಳ್ಳಿ–ಧಾರವಾಡದಲ್ಲಿ ಸ್ಥಾಪನೆಯಾಗಲಿ’

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 3:16 IST
Last Updated 30 ಜುಲೈ 2025, 3:16 IST
ನರೇಂದ್ರ ಕುಲಕರ್ಣಿ
ನರೇಂದ್ರ ಕುಲಕರ್ಣಿ   

ಹುಬ್ಬಳ್ಳಿ: ‘ರಾಜ್ಯ ಸರ್ಕಾರವು ದೇವನಹಳ್ಳಿ ತಾಲ್ಲೂಕಿನಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಏರೋಸ್ಪೇಸ್ ಪಾರ್ಕ್‌ಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಟ್ಟಿದ್ದು, ಉದ್ದೇಶಿತ ಈ ಯೋಜನೆಯನ್ನು ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿ–ಧಾರವಾಡದಲ್ಲಿ ಸ್ಥಾಪಿಸಬೇಕು’ ಎಂದು ರಾಜ್ಯ ಬಿಜೆಪಿ ಕೈಗಾರಿಕಾ ಪ್ರಕೋಷ್ಠದ ಸಹ ಸಂಚಾಲಕ ನರೇಂದ್ರ ಕುಲಕರ್ಣಿ ಆಗ್ರಹಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಏರೋಸ್ಪೇಸ್ ಪಾರ್ಕ್‌ ಸ್ಥಾಪನೆಯಿಂದ ಸಾವಿರಾರು ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ದೊರೆಯಲಿದೆ. ಎಂಜಿನಿಯರಿಂಗ್‌, ತಾಂತ್ರಿಕ ಕ್ಷೇತ್ರದಲ್ಲಿಯೂ ಅವಕಾಶಗಳು ತೆರೆದುಕೊಳ್ಳಲಿವೆ’ ಎಂದರು.

‘ಏರೋಸ್ಪೇಸ್ ಪಾರ್ಕ್‌ ಸ್ಥಾಪನೆಯಿಂದಾಗಿ ಸುತ್ತಲಿನ ಪ್ರದೇಶದಲ್ಲಿ ವಸತಿ, ಮಾಲ್, ಹೋಟೆಲ್, ಗೋದಾಮು, ಸಾರಿಗೆ ವ್ಯವಸ್ಥೆ ಅಭಿವೃದ್ಧಿ ಆಗುವುದರ ಜತೆಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕಗೆಳಿಗೂ ಸಾಕಷ್ಟು ಅವಕಾಶ ದೊರಕುತ್ತವೆ. ಅಂತರರಾಷ್ಟ್ರೀಯ ಕಂಪನಿಗಳು ಸಹ ಹೂಡಿಕೆಗೆ ಆಸಕ್ತಿ ತೋರಲಿವೆ’ ಎಂದು ಹೇಳಿದರು.

ADVERTISEMENT

‘ಮಹತ್ತರವಾದ ಕೈಗಾರಿಕಾ ಅವಕಾಶಗಳನ್ನು ಪಕ್ಕದ ರಾಜ್ಯಗಳು ತಮ್ಮ ರಾಜ್ಯಗಳತ್ತ ಸೆಳೆಯಲು ಕಸರತ್ತು ಆರಂಭಿಸಿವೆ. ಈ ಯೋಜನೆ ಬೇರೆ ರಾಜ್ಯಗಳಿಗೆ ಸ್ಥಳಾಂತರವಾಗಲು ಬಿಡದೆ ಹುಬ್ಬಳ್ಳಿ–ಧಾರವಾಡದಲ್ಲಿ ಸ್ಥಾಪನೆಯಾಗುವಂತೆ ಕ್ರಮ ಕೈಗೊಳ್ಳಬೇಕು. ಪಕ್ಕದ ಬೆಳಗಾವಿಯಲ್ಲಿ ಭಾರತೀಯ ಭೂಸೇನೆ ಹಾಗೂ ವಾಯುಸೇನೆಯ ಪ್ರಮುಖ ಕೇಂದ್ರಗಳು ಇರುವುದರಿಂದ ಏರೋಸ್ಪೇಸ್‌ ಪಾರ್ಕ್‌ ನಿರ್ಮಾಣವಾದರೆ ಸಾಕಷ್ಟು ಬಿಡಿ ಭಾಗಗಳ ಉತ್ಪಾನಾ ಕೈಗಾರಿಕೆಗಳಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ’ ಎಂದರು.

‘ಉತ್ತರ ಕರ್ನಾಟಕ ಭಾಗದ ಪ್ರಾದೇಶಿಕ ಸಮತೋಲನ, ಉದ್ಯೋಗಾವಕಾಶ, ಶಿಕ್ಷಣ ಮಟ್ಟದ ಏರಿಕೆಗೂ ಇದರಿಂದ ಸಹಾಯವಾಗಲಿದೆ.  ಬೆಲೂರು ಕೈಗಾರಿಕಾ ಪ್ರದೇಶದಲ್ಲಿ ಈ ಯೋಜನೆ ಸ್ಥಾಪನೆ ಮಾಡಲು ಅನುಕೂಲಕರ ವಾತಾವರಣವಿದೆ. ಈ ಹಿನ್ನೆಲೆಯಲ್ಲಿ  ಭಾಗದ ಎಲ್ಲ ಶಾಸಕರು ಪಕ್ಷಾತೀತವಾಗಿ ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ಬಿಜೆಪಿ ಕೈಗಾರಿಕಾ ಪ್ರಕೋಷ್ಠದ ಶ್ರೀಮಂತ ಧನಗಾರ, ಚಂದ್ರಕಾಂತ ಗಡಕರಿ, ಉದ್ಯಮಿಗಳಾದ ಮೃತ್ಯುಂಜಯ ಮರೋಳ, ಮಹಾಂತೇಶ ಬತ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.