ಹುಬ್ಬಳ್ಳಿ: ದೇವನಹಳ್ಳಿಯಲ್ಲಿ ಭೂಸ್ವಾಧೀನ ನಿರ್ಧಾರದಿಂದ ಹಿಂದೆ ಸರಿದ ರಾಜ್ಯ ಸರ್ಕಾರವು ಉದ್ದೇಶಿತ ಏರೊಸ್ಪೇಸ್ ಪಾರ್ಕ್ ಅನ್ನು ಹುಬ್ಬಳ್ಳಿ–ಧಾರವಾಡ ಅಥವಾ ಬೆಳಗಾವಿಯಲ್ಲಿ ನಿರ್ಮಾಣ ಮಾಡಬೇಕು ಎಂದು ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ (ಕೆಸಿಸಿಐ) ಸಂಸ್ಥೆ ಒತ್ತಾಯಿಸಿದೆ.
‘ಏರೊಸ್ಪೇಸ್ ಪಾರ್ಕ್ ಸ್ಥಾಪನೆಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ಸಾವಿರಾರು ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ದೊರೆಯುತ್ತವೆ. ವಸತಿ, ಮಾಲ್, ಹೋಟೆಲ್, ಗೋದಾಮು, ಸಾರಿಗೆ ಕ್ಷೇತ್ರದಲ್ಲಿ ಬೆಳವಣಿಗೆ ಕಾಣಬಹುದು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗೆ ಅವಕಾಶ ದೊರೆತು, ಸ್ಥಳೀಯ ಕೈಗಾರಿಕೆಗಳು ಅಂತರರಾಷ್ಟ್ರೀಯ ಮಟ್ಟದ ತಾಂತ್ರಿಕತೆಗೆ ತೆರೆದುಕೊಳ್ಳುತ್ತವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಸಿಸಿಐ ಪತ್ರ ಬರೆದಿದೆ.
‘ಹುಬ್ಬಳ್ಳಿ–ಧಾರವಾಡದಲ್ಲಿ ಭೂ ಬ್ಯಾಂಕ್ ಅಡಿ ಸಾಕಷ್ಟು ಸರ್ಕಾರಿ ಭೂಮಿ ಇದೆ. ಬೇಲೂರು ಕೈಗಾರಿಕಾ ವಲಯದ ಟಾಟಾ ಮಾರ್ಕೊಪೊಲೊ ಹತ್ತಿರ ಈ ಯೋಜನೆ ಸ್ಥಾಪನೆಗೆ ಅನುಕೂಲಕರ ವಾತಾವರಣವಿದೆ. ಈ ಭಾಗದ ಜನಪ್ರತಿನಿಧಿಗಳು ಈ ವಿಚಾರವಾಗಿ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಬೇಕು ಎಂದು ಗಮನ ಸೆಳೆಯಲಾಗಿದೆ’ ಎಂದು ಕೆಸಿಸಿಐ ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ ಹಾಗೂ ಜಂಟಿ ಗೌರವ ಕಾರ್ಯದರ್ಶಿ ಮಹೇಂದ್ರ ಸಿಂಘಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.