ADVERTISEMENT

ಎಐ ಬಳಕೆ, ಡಿಜಿಟಲ್‌ ಜ್ಞಾನ ಅವಶ್ಯ: ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ

ರಾಜ್ಯ ಕಾನೂನು ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 4:51 IST
Last Updated 6 ನವೆಂಬರ್ 2025, 4:51 IST
ಧಾರವಾಡದಲ್ಲಿ ನಡೆದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಏಳನೇ ಘಟಿಕೋತ್ಸವದಲ್ಲಿ ನ್ಯಾ. ಶಿವರಾಜ ವಿ.ಪಾಟೀಲ ಮಾತನಾಡಿದರು.
ಧಾರವಾಡದಲ್ಲಿ ನಡೆದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಏಳನೇ ಘಟಿಕೋತ್ಸವದಲ್ಲಿ ನ್ಯಾ. ಶಿವರಾಜ ವಿ.ಪಾಟೀಲ ಮಾತನಾಡಿದರು.    

ಧಾರವಾಡ: ‘ಕಾನೂನು ವಿದ್ಯಾರ್ಥಿಗಳಿಗೆ ಎಐ ತಂತ್ರಜ್ಞಾನ, ಡಿಜಿಟಲ್‌ ಜ್ಞಾನ ತಿಳಿದಿರಬೇಕು. ವಾದ ಮಂಡಿಸುವುದು ಮಾತ್ರವಲ್ಲ ನೀತಿ ನಿರೂ‌ಪಣೆ, ಹಕ್ಕುಗಳ ರಕ್ಷಣೆ ಮತ್ತು ಜಾಗತಿಕ ಸವಾಲುಗಳನ್ನು (ಸೈಬರ್‌ ಕ್ರೈಂ, ಹವಾಮಾನ ವೈಪರೀತ್ಯ...) ತಿಳಿದುಕೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ಗಡಿ ಮತ್ತು ನದಿ ಸಂರಕ್ಷಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಹೇಳಿದರು

ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದ ಸಭಾಂಗಣದಲ್ಲಿ ಬುಧವಾರ ನಡೆದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಏಳನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು. ಅಂತರ್‌ಶಿಸ್ತೀಯ ತರಬೇತಿ ಪಡೆಯಬೇಕು. ವಿಮರ್ಶಾತ್ಮಕ ಆಲೋಚನಾ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ನಿರಂತರ ಕಲಿಕಾರ್ಥಿಯಾಗಿರಬೇಕು. ಕಳೆದ ನಾಲ್ಕು ದಶಕಗಳಲ್ಲಿ ಕಾನೂನು ಅಧ್ಯಯನ ಕೋರ್ಸ್‌ಗಳಿಗೆ ಪ್ರಾಮುಖ್ಯತೆ ಮತ್ತು ಬೇಡಿಕೆ ಹೆಚ್ಚಾಗಿದೆ. ರಾಷ್ಟ್ರೀಯ ಕಾನೂನು ಶಾಲೆಗಳಿಗೆ ದಾಖಲಾಗಲು ಸ್ಪರ್ಧೆ ಹೆಚ್ಚಿದೆ. ವೈದ್ಯರು, ಎಂಜಿನಿಯರ್‌ಗಳು, ಅಧಿಕಾರಿಗಳು ಕಾನೂನು ಶಿಕ್ಷಣ ಪಡೆಯಲು ಆಸಕ್ತಿ ತೋರುತ್ತಿದ್ದಾರೆ’ ಎಂದರು.

‘ನ್ಯಾಯ ಪ್ರಕ್ರಿಯೆ ವೈಯಕ್ತಿಕ ಹಕ್ಕುಗಳ ಹೋರಾಟಕ್ಕೆ ಮಾತ್ರ ಸೀಮಿತವಾಗಿಲ್ಲ. ಸಾಮೂಹಿಕ ಹಕ್ಕುಗಳ ರಕ್ಷಣೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಬಲವರ್ಧನೆ ಮಾಡುತ್ತಿದೆ. ಕಾನೂನು ವೃತ್ತಿಯು ಪರಿವರ್ತನೆಯ ಚಕ್ರಹಾದಿಯಲ್ಲಿದೆ. ಕೃತಕ ಬುದ್ಧಿಮತ್ತೆ, ಡಿಜಿಟಲ್ ಮಾಧ್ಯಮ, ದತ್ತಾಂಶ ಸಂರಕ್ಷಣೆ, ಪರಿಸರ ಕಾಳಜಿ ಮತ್ತು ಜಾಗತಿಕ ಮಾನವ ಹಕ್ಕುಗಳ ಚಳವಳಿಗಳು ಕಾನೂನು ಪ್ರಪಂಚವನ್ನು ಮರುನಿರೂಪಿಸುತ್ತಿವೆ. ತಂತ್ರಜ್ಞಾನವು ನ್ಯಾಯದ ಸಾಧನವಾಗಿರಬೇಕೇ ಹೊರತು ಅದೇ ಪರ್ಯಾಯವಾಗಬಾರದು. ಈ ನಿಟ್ಟಿನಲ್ಲಿ ಯುವಪೀಳಿಗೆಯ ಜವಾಬ್ದಾರಿ ಹೆಚ್ಚಿದೆ’ ಎಂದರು.

ADVERTISEMENT

‘ಕಾನೂನು ಸಂಶೋಧನೆ, ದಾಖಲೆ ನಿರ್ವಹಣೆ, ತೀರ್ಪು ಅನುವಾದ ಮೊದಲಾದ ಪ್ರಕ್ರಿಯೆಗಳಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಕೆಯು ಅವಕಾಶಗಳ ಜತೆಗೆ ಹಲವು ಸವಾಲುಗಳನ್ನು ತೆರೆದಿಡುತ್ತದೆ. ಕಾನೂನು ಶಿಕ್ಷಣ ಪಠ್ಯಕ್ರಮದಲ್ಲಿ ಬದಲಾವಣೆ ಆಗಬೇಕು. ಸಂಹಿತೆಗಳ ಅಧ್ಯಯನವಷ್ಟೇ ಅಲ್ಲದೆ ಡಿಜಿಟಲ್ ಶಿಕ್ಷಣ ಮತ್ತು ಕೃತಕ ಬುದ್ಧಿಮತ್ತೆ ಬಳಕೆ ವಿಷಯವನ್ನು ಅಳವಡಿಸಬೇಕು.

ತಂತ್ರಜ್ಞಾನದ ಪರಿಣಾಮ ಪ್ರಜಾತಂತ್ರದ ಮೌಲ್ಯಗಳ ಮೇಲೆ ಸಕಾರಾತ್ಮಕವಾಗಿರುವಂತೆ ವಕೀಲರು ನಿಗಾ ವಹಿಸಬೇಕು’ ಎಂದರು.

ಕಾನೂನು ಕೋರ್ಸ್‌ಗಳಲ್ಲಿ ರ‍್ಯಾಂಕ್‌ ಮತ್ತು ನಗದು ಬಹುಮಾನ ಪಡೆದವರಿಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಪ್ರಮಾಣಪತ್ರ ವಿತರಿಸಿದರು.

ಕಾನೂನು ವಿ.ವಿ ಕುಲಪತಿ ಪ್ರೊ.ಸಿ. ಬಸವರಾಜು, ಆಡಳಿತಾಂಗ ಕುಲಸಚಿವೆ ಗೀತಾ ಕೌಲಗಿ, , ಪರೀಕ್ಷಾಂಗ ಕುಲಸಚಿವೆ ಪ್ರೊ.ರತ್ನಾ ಆರ್‌.ಭರಮಗೌಡರ್‌ ಉಪಸ್ಥಿತರಿದ್ದರು.ಕಾನೂನು ಸಮಾಜದ ಆತ್ಮ. ಸಮಾಜವನ್ನು ಶಿಸ್ತುಬದ್ಧ ಸಮತೋಲಿತ ಮತ್ತು ನ್ಯಾಯಯುತವಾಗಿಡುವ ಮಾರ್ಗದರ್ಶಿ ಶಕ್ತಿ. ಕಾನೂನು ವಿದ್ಯಾರ್ಥಿಗಳು ಕಾನೂನಿನ ಜ್ಞಾನ ಪಡೆಯುವ ಜತೆಗೆ ಸಮಕಾಲೀನ ತಾಂತ್ರಿಕ ಜಾಗತಿಕ ಸವಾಲುಗಳನ್ನು ಅರ್ಥಮಾಡಿಕೊಳ್ಳಬೇಕು ಥಾವರಚಂದ್‌ ಗೆಹಲೋತ್‌ ರಾಜ್ಯಪಾಲ

ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು
ಘಟಿಕೋತ್ಸವದಲ್ಲಿ ನಟಿ ಸುಧಾರಾಣಿ ಪಾಲ್ಗೊಂಡಿದ್ದರು
ನ್ಯಾಯಾಂಗ ವ್ಯವಸ್ಥೆಯಲ್ಲಿ ಕಾರ್ಯಕ್ಷಮತೆ ವೃದ್ಧಿಗೆ ಆದ್ಯತೆ ನೀಡಲಾಗಿದೆ. ವ್ಯಾಜ್ಯಪೂರ್ವ ಸಂಧಾನ ಪ್ರಕರಣ ನಿರ್ವಹಣೆ 24 ತಿಂಗಳೊಳಗೆ ಪ್ರಕರಣ ಇತ್ಯರ್ಥ ಕೋರ್ಟ್‌ಗಳ ವಿಸ್ತರಣೆ ರೈತರು ಮಹಿಳೆಯರು ದುರ್ಬಲರಿಗೆ ತ್ವರಿತ ಕೋರ್ಟ್‌ ಸೌಕರ್ಯ ಕಲ್ಪಿಸಲಾಗಿದೆ
ಎಚ್‌.ಕೆ. ಪಾಟೀಲ ಕಾನೂನು ಸಚಿವ
ಕಾನೂನು ಸಮಾಜದ ಆತ್ಮ. ಸಮಾಜವನ್ನು ಶಿಸ್ತುಬದ್ಧ ಸಮತೋಲಿತ ಮತ್ತು ನ್ಯಾಯಯುತವಾಗಿಡುವ ಮಾರ್ಗದರ್ಶಿ ಶಕ್ತಿ. ಕಾನೂನು ವಿದ್ಯಾರ್ಥಿಗಳು ಕಾನೂನಿನ ಜ್ಞಾನ ಪಡೆಯುವ ಜತೆಗೆ ಸಮಕಾಲೀನ ತಾಂತ್ರಿಕ ಜಾಗತಿಕ ಸವಾಲುಗಳನ್ನು ಅರ್ಥಮಾಡಿಕೊಳ್ಳಬೇಕು
ಥಾವರಚಂದ್‌ ಗೆಹಲೋತ್‌ ರಾಜ್ಯಪಾಲ
ಕಾನೂನು ಕೋರ್ಸ್‌ ಪೂರೈಸಿದವರಿಗೆ ಬೇಡಿಕೆ ಇದೆ. ಭಾರತದಲ್ಲಿ ಪ್ರತಿವರ್ಷ ಶೇ 20ರಷ್ಟು ಬೇಡಿಕೆ ವೃದ್ಧಿಸುತ್ತಿದೆ ಎಂದು ಅಧ್ಯಯನವೊಂದು ಹೇಳಿದೆ. ವಕೀಲರು ಉತ್ತಮ ಸಂವಹನ ಮತ್ತು ವಿಶ್ಲೇಷಣಾ ಕೌಶಲ ಬೆಳೆಸಿಕೊಳ್ಳಬೇಕು. ನೈತಿಕತೆ ಕಾನೂನು ವೃತ್ತಿಯ ಅವಿಭಾಜ್ಯ ಮೌಲ್ಯ
ಎಸ್‌.ಅಬ್ದುಲ್‌ ನಜೀರ್‌ ಗೌರವ ಡಾಕ್ಟರೇಟ್‌ ಪುರಸ್ಕೃತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.