ADVERTISEMENT

ಪ್ರಗತಿ ಪರಿಶೀಲನಾ ಸಭೆ: ಅಳ್ನಾವರದ ಸಮಗ್ರ ಅಭಿವೃದ್ಧಿಗೆ ಬದ್ದ ಎಂದ ಸಂತೋಷ್ ಲಾಡ್

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 4:38 IST
Last Updated 5 ಅಕ್ಟೋಬರ್ 2025, 4:38 IST
ಅಳ್ನಾವರ ಪಟ್ಟಣ ಪಂಚಾಯಿತಿ ಸಭಾ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು
ಅಳ್ನಾವರ ಪಟ್ಟಣ ಪಂಚಾಯಿತಿ ಸಭಾ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು   

ಅಳ್ನಾವರ: ರಾಜ್ಯದಲ್ಲಿಯೇ ಅತೀ ಚಿಕ್ಕ ನೂತನ ತಾಲ್ಲೂಕು ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಅಳ್ನಾವರದ ಸಮಗ್ರ ಅಭಿವೃದ್ಧಿಗೆ ತಾವು ಸದಾ ಬದ್ದವಾಗಿದ್ದು, ಹಂತ ಹಂತವಾಗಿ ಈ ಭಾಗದ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲಾಗುವುದು ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.

ಇಲ್ಲಿನ ಪಟ್ಟಣ ಪಂಚಾಯಿತಿ ಸಭಾ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನಪ್ರತಿನಿಧಿಗಳ ಅಹವಾಲು ಆಲಿಸಿ ಅವರು ಮಾತನಾಡಿದರು.

ಹೊಸ ತಾಲ್ಲೂಕು ಕೇಂದ್ರಕ್ಕೆ ಅವಶ್ಯವಿರುವ ಕಚೇರಿಗಳನ್ನು ಆರಂಭಿಸಲು ಹಾಗೂ ಹೊಸ ಕಟ್ಟಡ ಕಟ್ಟಲು ನಿವೇಶನ ಗುರ್ತಿಸುವ ಕಾರ್ಯ ನಡೆದಿದೆ. ಪಟ್ಟಣದ ಬಹು ವರ್ಷಗಳ ಬೇಡಿಕೆಯಾದ ಒಳ ಚರಂಡಿ ವ್ಯವಸ್ಥೆಗೆ ಬೇಕಾದ ಸರ್ಕಾರದ ಅನುದಾನ ತರಲು ಆದ್ಯತೆ ನೀಡಲಾಗುವುದು. ಪಟ್ಟಣದ ಸಂಪೂರ್ಣ ರಸ್ತೆಗಳನ್ನು ಡಾಂಬರೀಕರಣ ಹಾಗೂ ಅವಶ್ಯವಿರುವ ಕಡೆ ಕಾಂಕ್ರೀಟ್ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಪಟ್ಟಣದ ಸುಮಾರು 30 ಕಿಮೀ ರಸ್ತೆ ನಿರ್ಮಾಣದ ಬೇಡಿಕೆ ಬೇಗ ಈಡೇರಿಸಲಾಗುವುದು ಎಂದರು.

ADVERTISEMENT

ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಕಡಬಗಟ್ಟಿ ಕ್ರಾಸ್‌ನಿಂದ ಪದವಿ ಕಾಲೇಜುವರೆಗಿನ ರಸ್ತೆ ಅಭಿವೃದ್ದಿ ಪಡಿಸಲಾಗವುದು. ಪಟ್ಟಣ ಪಂಚಾಯಿತಿ ಆವರಣದಲ್ಲಿ ₹3 ಕೋಟಿ ವೆಚ್ಚದ ಅಧುನಿಕ ಶೈಲಿಯ ಸಭಾ ಭವನ ನಿರ್ಮಿಸಲಾಗುವದು. ವಿದ್ಯಾನಗರ ಬಡಾವಣೆಯ ಉದ್ಯಾನವನ ಅಭಿವೃದ್ದಿ ಪಡಿಸಲಾಗುವುದು, ಕಡಬಗಟ್ಟಿ ಕ್ರಾಸ್ ಬಳಿ ಸ್ವಾಗತ ಮಹಾದ್ವಾರ ನಿರ್ಮಿಸಲಾಗುವದು. ಬಸ್ ನಿಲ್ದಾಣವನ್ನು ಅಧುನಿಕರಣ ಮಾಡಲಾಗುವುದು ಎಂದರು.

ಪಟ್ಟಣಕ್ಕೆ ಮಂಜೂರಾದ ಸರ್ಕಾರಿ ಪಿಯು ಕಾಲೇಜಿಗ ಬೇಕಾದ ನಿವೇಶನ ಒದಗಿಸಿ ಸುಂದರ ಕಟ್ಟಡ ಕಟ್ಟಲಾಗುವುದು. ಸರ್ಕಾರಿ ಪದವಿ ಕಾಲೇಜಿನಲ್ಲಿ ಕೂಡಾ ಸಕಲ ಅಧುನಿಕ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಭಾಗದ ಜನ ಪ್ರತಿನಿದಿಗಳು, ಸಾರ್ವಜನಿಕರು ತಮ್ಮ ಮಕ್ಕಳನ್ನು ಸರ್ಕಾರಿ ಕಾಲೇಜಿನಲ್ಲಿ ಓದಿಸಲು ಮುಂದೆ ಬರಬೇಕು ಎಂದು ಒತ್ತಿ ಹೇಳಿದರು.

ಹೊಸ ತಾಲ್ಲೂಕು ಕೇಂದ್ರದ ಕೋರ್ಟ್ ಕಚೇರಿ ನಿರ್ಮಾಣ ಸಧ್ಯದಲಿಯೇ ಆರಂಭವಾಗುವುದು. ಈ ಬಾಗಕ್ಕೆ ಅಗ್ನಿಶಾಮಕ ಠಾಣೆ ಮಂಜೂರಾಗಿದ್ದು, ನಿವೇಶನ ಗುರ್ತಿಸಿ ಹೊಸ ಕಚೇರಿ ಕಟ್ಟಲಾಗುವುದು. ಪಟ್ಟಣದ ಮಧ್ಯ ಭಾಗದಲ್ಲಿ ಹಾಯ್ದು ಹೋಗುವ ರಾಜ್ಯ ಹೆದ್ದಾರಿಯಲ್ಲಿ ಗುಣ ಮಟ್ಟದ ರಸ್ತೆ, ಚರಂಡಿ ನಿರ್ಮಿಸಲಾಗುವುದು. ಪಟ್ಟಣದ ಕೊಳಚೆ ಪ್ರದೇಶದ ಅಭಿವೃದ್ದಿಗೆ ₹80 ಲಕ್ಷದಲ್ಲಿ ಅಭಿವೃದ್ದಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು, ಖಾಲಿ ಇರುವ ಪೌರ ಕಾರ್ಮಿಕರ ಹುದ್ದೆಯನ್ನು ಭರ್ತಿ ಮಾಡಲಾಗುವದು ಎಂದರು.

ಮನವಿ: ಪಟ್ಟಣವನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಬೇಕು. ಆಶ್ರಯ ಕಾಲೊನಿಯಲ್ಲಿ ಸಮುದಾಯ ಭವನ ನಿರ್ಮಿಸಬೇಕು. ಪಟ್ಟಣದಲ್ಲಿ ಅರಣ್ಯ ಕಾಲೇಜು ಆರಂಭಿಸಬೇಕು. ಕೈಗಾರಿಕಾ ವಲಯಕ್ಕೆ ಬೇಕಾದ ಅವಶ್ಯ ನಿವೇಶನ ಒದಗಿಸಬೇಕು. ಆಶ್ರಯ ಯೋಜನೆಯಡಿ ಬಡವರಿಗೆ ಮನೆ ನೀಡಬೇಕು. ಈ ಬಾಗದ ಹಳ್ಳ, ಕೆರೆಗಳಿಗೆ ಬಾಂದಾರ ನಿರ್ಮಿಸಬೇಕು. ಕುಂಬಾರಕೊಪ್ಪ ರೈಲ್ವೆ ಸೇತುವೆ ಕಾಮಗಾರಿ ಶೀಘ್ರ ಮುಗಿಸಬೇಕು. ಮಾನಕಾಪೂರ, ವಿದ್ಯಾನಗರ ಬಡಾವಣೆಯ ನಿವಾಸಿಗಳ ಸಮಸ್ಯೆ ಬಗೆ ಹರಿಸಬೇಕು ಎಂದು ಮನವಿ ಮಾಡಲಾಯಿತು.

ಪಟ್ಟಣ ಪಂಚಾಯಿತಿ ವತಿಯಿಂದ ಸಚಿವ ಲಾಡ್ ಅವರಿಗೆ ಪೌರ ಸನ್ಮಾನ ಮಾಡಲಾಯಿತು. ಸಾರ್ವಜನಿಕರು ಅಹವಾಲು ಸಲ್ಲಿಸಿದರು. ಈಚೆಗೆ ಧಾರವಾಡದಲ್ಲಿ ಮಾಜಿ ಸೈನಿಕರ ಮೇಲೆ ನಡೆದ ಹಲ್ಯೆಗೆ ಕಾರಣರಾದವರ ಮೇಲೆ ಕ್ರಮ ಜರುಗಿಸಬೇಕು ಎಂದು ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಮೋಲ ಗುಂಜೀಕರ, ಉಪಾಧ್ಯಕ್ಷ ಛಗನಲಾಲ ಪಟೇಲ, ಸ್ಥಾಯಿ ಸಮಿತಿ ಅಧ್ಯಕ್ಷ ಜೈಲಾನಿ ಸುದರ್ಜಿ, ಜಿಲ್ಲಾ ಪಂಚಾಯಿತಿ ಸಿಇಓ ಭುವನೇಶ್ವರ ಪಾಟೀಲ, ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ, ಉಪ ವಿಭಾಗಾಧಿಕಾರಿ ಶಾಲೆಮ್ ಹುಸೇನ್, ತಾಲ್ಲೂಕ ಪಂಚಾಯಿತಿ ಇಓ ಪ್ರಶಾಂತ ತುರ್ಕಾಣಿ, ಪಟ್ಟಣ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.