ADVERTISEMENT

ಕಾಂಗ್ರೆಸ್ ತೆಕ್ಕೆಗೆ ಅಳ್ನಾವರ ಪಟ್ಟಣ ಪಂಚಾಯ್ತಿ

ಮಧು ಅಧ್ಯಕ್ಷ, ಅಮೋಲ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2024, 14:19 IST
Last Updated 27 ಆಗಸ್ಟ್ 2024, 14:19 IST
ಅಳ್ನಾವರ ಪಟ್ಟಣ ಪಂಚಾಯ್ತಿಯ ನೂತನ ಅಧ್ಯಕ್ಷ ಮಧು ಬಡಸ್ಕರ್, ಉಪಾಧ್ಯಕ್ಷ ಅಮೋಲ ಗುಂಜೀಕರ ಅವರನ್ನು ಸತ್ಕರಿಸಲಾಯಿತು 
ಅಳ್ನಾವರ ಪಟ್ಟಣ ಪಂಚಾಯ್ತಿಯ ನೂತನ ಅಧ್ಯಕ್ಷ ಮಧು ಬಡಸ್ಕರ್, ಉಪಾಧ್ಯಕ್ಷ ಅಮೋಲ ಗುಂಜೀಕರ ಅವರನ್ನು ಸತ್ಕರಿಸಲಾಯಿತು    

ಅಳ್ನಾವರ: ಇಲ್ಲಿನ ಪಟ್ಟಣ ಪಂಚಾಯ್ತಿಯ ಎರಡನೇ ಅವಧಿಯ ಅಧ್ಯಕ್ಷರಾಗಿ ಮಧು ಬಡಸ್ಕರ್ ಹಾಗೂ ಉಪಾಧ್ಯಕ್ಷರಾಗಿ ಅಮೋಲ ಗುಂಜೀಕರ ಮಂಗಳವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್‌ಗೆ ಅಧಿಕಾರದ ಗದ್ದುಗೆ ದೊರೆಯಿತು.

ಎರಡು ಸ್ಥಾನಕ್ಕೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಚುನಾವಣಾಧಿಕಾರಿ ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಆಯ್ಕೆಯನ್ನು ಘೋಷಿಸಿದರು.
ಆಯ್ಕೆ ಪ್ರಕ್ರಿಯೇ ಮುಗಿದ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸತ್ಕರಿಸಲಾಯಿತು.

ಪ್ರಥಮ ಅವಧಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಜೊತೆಯಾಗಿ ಅಧಿಕಾರ ಅವಧಿ ಚಲಾಯಿಸಿದ್ದರು. ಹಿಂದಿನ ಶಾಸಕ ನಿಂಬಣ್ಣವರ ಅವರ ಅವಧಿಯಲ್ಲಿ ನಡೆದ ಈ ಅಧಿಕಾರದ ಗದ್ದುಗೆ ಗುದ್ದಾಟಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೂಡಾ ಆಗಮಿಸಿ ಮತ ಚಲಾಯಿಸಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಳೆದ ಹಲವು ತಿಂಗಳು ಹಿಂದೆ ಜೆಡಿಎಸ್‌ನ ಆರು ಸದಸ್ಯರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರಿಂದ ಒಟ್ಟು 18 ಜನ ಸದಸ್ಯ ಬಲಾಬಲದ ಪಟ್ಟಣ ಪಂಚಾಯ್ತಿಯಲ್ಲಿ ಕಾಂಗ್ರೆಸ್ 15 ಸ್ಥಾನದೊಂದಿಗೆ ಬಲಾಢ್ಯ ಪಕ್ಷಾಗಿದೆ.
ಕಾಂಗ್ರೆಸ್ ಪಕ್ಷದ ನಾಲ್ವರು ಹಿರಿಯ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಗಳಾಗಿದ್ದರು. ಕಳೆದ ಹಲವು ದಿನದಿಂದ ನಡೆದ ಸಾಲು ಸಾಲು ಸಂಧಾನ ಸಭೆಗಳು ವಿಫಲವಾಗಿದ್ದವು.

ADVERTISEMENT

ಹಿರಿಯ ಸದಸ್ಯರಾದ ಛಗನಲಾಲ ಪಟೇಲ, ರೂಪೇಶ ಗುಂಡಕಲ್, ಮಧು ಬಡಸ್ಕರ್ ಮತ್ತು ಅಮೋಲ ಗುಂಜೀಕರ ಅವರು ಹೆಸರು ಅಧ್ಯಕ್ಷ ಸ್ಥಾನಕ್ಕೆ ಬಲವಾಗಿ ಕೇಳಿ ಬಂದಿದ್ದವು. ಮಂಗಳವಾರ ಬೆಳಿಗ್ಗೆ ಪಟ್ಟಣಕ್ಕೆ ಆಗಮಿಸಿದ ಸಚಿವ ಸಂತೋಷ್ ಲಾಡ್ ಅವರ ಸಮ್ಮುಖದಲ್ಲಿ ಸಭೆ ನಡೆದು ನೂತನ ಅಧ್ಯಕ, ಉಪಾಧ್ಯಕ್ಷರ ಆಯ್ಕೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.