ಧಾರವಾಡ: ನಗರದ ಹೋಟೆಲ್ ಮತ್ತು ಬೇಕರಿ ಒಡೆಯರ ಸಂಘದ ವತಿಯಿಂದ ಫೆ. 21ರಂದು ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ಸಂಭ್ರಮೋತ್ಸವ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಮಹೇಶ ಎಂ. ಶೆಟ್ಟಿ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಕಾಲೇಜು ಮೈದಾನದಲ್ಲಿ ಸಂಜೆ 5.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟನೆ ನೆರವೇರಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಪಾಲ್ಗೊಳ್ಳುವರು’ ಎಂದು ತಿಳಿಸಿದರು.
ಆಳ್ವಾಸ್ ಸಂಸ್ಥೆಯ 350 ಕಲಾವಿದರು ಬಡಗುತಿಟ್ಟು ಯಕ್ಷಗಾನ, ಶಾಸ್ತ್ರೀಯ ನೃತ್ಯ, ಕಲಾತ್ಮಕ ಯೋಗ, ಪುರುಲಿಯಾ ಸಿಂಹ ನೃತ್ಯ, ಬೊಂಬೆ ವಿನೋದಾವಳಿ, ಗುಜರಾತ್‌ನ ಗರ್ಭಾ ಮತ್ತು ದಾಂಡಿಯಾ, ಮಣಿಪುರಿ ಸ್ಟಿಕ್ ಡ್ಯಾನ್ಸ್ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸುವರು. ಕಾರ್ಯಕ್ರಮಕ್ಕೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ ಎಂದರು.
21ರಂದು ಬೆಳಿಗ್ಗೆ 11 ಗಂಟೆಗೆ ಹೋಟೆಲ್ ಮಾಲೀಕರ ಸಂಘದ ವಿಭಾಗಮಟ್ಟದ ಸಭೆ ನಡೆಯಲಿದೆ. ಹೋಟೆಲ್ ವೃತ್ತಿಯನ್ನು ಕೈಗಾರಿಕೆಯಾಗಿ ಪರಿಗಣಿಸಬೇಕು. ಪರವಾನಗಿ ನವೀಕರಣ ಸರಳೀಕರಣಗೊಳಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದರು.
‘ಕಾರ್ಯಕ್ರಮದ ಭದ್ರತಾ ಕಾರ್ಯಕ್ಕೆ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ. ಆದರೆ, ಅವರು ಒಬ್ಬರು ಪೊಲೀಸ್ ನಿಯೋಜನೆಗೆ ₹ 5 ಸಾವಿರ ಪಾವತಿಸಬೇಕು ಎಂದು ಹೇಳಿದ್ಧಾರೆ. ಇದು ಜಾಸ್ತಿಯಾಯಿತು. ಖಾಸಗಿಯಾಗಿ ಭದ್ರತಾ ಸಿಬ್ಬಂದಿ ವ್ಯವಸ್ಥೆಗೆ ಚಿಂತನೆ ನಡೆಸಿದ್ದೇವೆ’ ಎಂದರು.
ಮಹೇಶ ಹೊಂಬಾಳ್, ಸುರೇಶ ಹೆಗ್ಡೆ, ಪ್ರದೀಪ ಟಿ.ಪಕ್ಕಳ, ಗೋವರ್ಧನ ಭಟ್, ವಿಜಯಾನಂದ ಶೆಟ್ಟಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.