ADVERTISEMENT

ಅಂಬೇಡ್ಕರ್ ಮೂರ್ತಿ, ಬ್ಯಾರಿಕೇಡ್‌ ತೆರವಿಗೆ ಮೂರು ದಿನ ಗಡವು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2022, 15:34 IST
Last Updated 7 ಫೆಬ್ರುವರಿ 2022, 15:34 IST

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಸಿದ್ದಾರ್ಥ ಕಾಲೊನಿಯಲ್ಲಿ ಪಾಲಿಕೆ ಜಾಗದಲ್ಲಿ ಪ್ರತಿಷ್ಠಾಪಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿ ಹಾಗೂ ಅದರ ಸುತ್ತಲೂ ಅಳವಡಿಸಿಡಿರುವ ಬ್ಯಾರಿಕೇಡ್ ಅನ್ನು ಮೂರು ದಿನಗಳ ಒಳಗಾಗಿ ಸ್ವಯಂ ಪ್ರೇರಿತರಾಗಿ ತೆರವುಗೊಳಿಸಬೇಕು ಎಂದು ಗಡವು ನೀಡಲಾಗಿದೆ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಬಿ ಹೇಳಿದರು.

ಸೋಮವಾರ ಪಾಲಿಕೆಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದ ಹಾಗೂ ಅದನ್ನು ತೆರವುಗೊಳಿಸಿದ್ದ ಎರಡೂ ಬಣಗಳ ಮುಖಂಡರೊಂದಿಗೆ ಸಭೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮೂರ್ತಿ ಪ್ರತಿಷ್ಠಾಪನೆ ಮಾಡಿದವರು ಯಾರು ಎಂದು ಗೊತ್ತಾಗಿಲ್ಲ. ಆದರೆ, ಆ ಸ್ಥಳ ಪಾಲಿಕೆದ್ದಾಗಿದೆ. ಸರ್ಕಾರದ ಜಾಗದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶವಿದೆ. ಆದ್ದರಿಂದ ತೆರವುಗೊಳಿಸುವಂತೆ ಸೂಚಿಸಲಾಗಿದೆ ಎಂದರು.

ADVERTISEMENT

ಬ್ಯಾರಿಕೇಡ್ ಹಾಕಿದವರು ಅದನ್ನು ತೆರವುಗೊಳಿಸಲು ಒಪ್ಪಿದ್ದಾರೆ. ಮೂರ್ತಿಯನ್ನು ಯಾರು ಪ್ರತಿಷ್ಠಾಪಿಸಿದ್ದಾರೆ ಅವರೂ ಸಹ ಸ್ವಯಂ ಪ್ರೇರಿತರಾಗಿ ತೆರವುಗೊಳಿಸಬೇಕು ಇಲ್ಲದಿದ್ದರೆ, ಕಾನೂನಿನ ಪ್ರಕಾರ ಪಾಲಿಕೆ ಅಧಿಕಾರಿಗಳು ಕ್ರಮಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಮೂರ್ತಿ ಪ್ರತಿಷ್ಠಾಪನೆ ಮಾಡಿದವರು ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದರು.

ಘಟನೆ ಹಿನ್ನೆಲೆ: ಹಳೇ ಹುಬ್ಬಳ್ಳಿ ಸಿದ್ದಾರ್ಥ ಕಾಲೊನಿಯ ಪಾಲಿಕೆ ಜಾಗದಲ್ಲಿ ಶನಿವಾರ ರಾತ್ರಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿ ಸ್ಥಾಪಿಸಿದ್ದರು. ಇದನ್ನು ವಿರೋಧಿಸಿ ಬೇರೆ ಸಮುದಾಯದವರು ಭಾನುವಾರ ಮೂರ್ತಿ ತೆರವುಗೊಳಿಸಿದ್ದರಿಂದ ಎರಡೂ ಸಮುದಾಯಗಳ ನಡುವೆ ಜಗಳ ಪ್ರಾರಂಭವಾಗಿತ್ತು. ನಂತರ ವಿವಿಧ ಪರಿಶಿಷ್ಟ ಸಂಘಟನೆಗಳ ಸದಸ್ಯರು ಮತ್ತೆ ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.