ಹುಬ್ಬಳ್ಳಿ: ಬಡವರ ಹಸಿವು ನೀಗಿಸಲು ರಾಜ್ಯ ಸರ್ಕಾರ ಜಾರಿಗೊಳಿಸಿದ ‘ಅನ್ನಭಾಗ್ಯ’ ಯೋಜನೆಯ ಅಕ್ಕಿಗೆ ಜಿಲ್ಲೆಯಲ್ಲಿ ಕನ್ನ ಹಾಕುವ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿವೆ.
ಅಕ್ಕಿ ಕೊರತೆ ಕಾರಣಕ್ಕೆ ಬಿಪಿಎಲ್ ಕಾರ್ಡ್‌ದಾರರಿಗೆ 5 ಕೆಜಿ ಅಕ್ಕಿ ಮತ್ತು ಉಳಿದ 5 ಕೆಜಿ ಅಕ್ಕಿ ಬದಲಿಗೆ ರಾಜ್ಯ ಸರ್ಕಾರ 2025ರ ಫೆಬ್ರುವರಿ ತನಕ ಹಣವನ್ನು ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತಿತ್ತು. ಫೆಬ್ರುವರಿ ತಿಂಗಳಿನಿಂದ ರೊಕ್ಕದ ಬದಲಿಗೆ 5 ಕೆ.ಜಿ ಅಕ್ಕಿಯನ್ನೇ ಸರ್ಕಾರ ವಿತರಿಸುತ್ತಿದೆ. ಹಾಗಾಗಿ ಮಾರ್ಚ್ ತಿಂಗಳಿನಿಂದ ಬಡವರಿಗೆ ಪಡಿತರ ಧಾನ್ಯ ವಿತರಣೆ ನಡೆಯುತ್ತಿದೆ.
ಸರ್ಕಾರ ವಿತರಿಸುತ್ತಿರುವ ಅಕ್ಕಿಯ ಪ್ರಮಾಣ ಹೆಚ್ಚಿದ ಬೆನ್ನಲ್ಲೇ ಕಾಳಸಂತೆಯಲ್ಲಿ ಪಡಿತರ ಅಕ್ಕಿಗೆ ಕನ್ನಹಾಕುವ ಚಟುವಟಿಕೆಗಳೂ ಬಿರುಸುಗೊಂಡಿವೆ. ಸರ್ಕಾರ ನೀಡುತ್ತಿರುವ ಅಕ್ಕಿ ಮಾರಿ, ಮತ್ತೆ ಹಣ ಪಡೆಯುವ ಘಟನೆಗಳು ನಡೆಯುತ್ತಿವೆ ಎನ್ನುತ್ತಾರೆ ಅಧಿಕಾರಿಗಳು.
‘ಪಡಿತರ ಧಾನ್ಯಗಳನ್ನು ಕಾಳಸಂತೆಯಲ್ಲಿ ಅಕ್ರಮ ಮಾರಾಟ, ಖರೀದಿ, ಸಾಗಣೆಗೆ ಸಂಬಂಧಿಸಿದಂತೆ 2024ರ ಏಪ್ರಿಲ್‌ನಿಂದ 2025ರ ಜುಲೈ ತನಕ ಒಟ್ಟು 13 ಪ್ರಕರಣಗಳು ದಾಖಲಾಗಿವೆ. ಬರೋಬ್ಬರಿ ₹46.09 ಲಕ್ಷ ಮೊತ್ತದ ಪಡಿತರ ಧಾನ್ಯಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಅವಧಿಯಲ್ಲಿ 1017 ಕ್ವಿಂಟಲ್ ಅಕ್ಕಿ, 10 ವಾಹನಗಳನ್ನು ಹಾಗೂ ಗೃಹ ಬಳಕೆಯ 1143 ಸಿಲಿಂಡರ್‌ಗಳನ್ನೂ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ವಾಹನಗಳ ಒಟ್ಟು ಮೌಲ್ಯ ₹71.08 ಲಕ್ಷ. ಈ ಸಂಬಂಧ 20 ಆರೋಪಿಗಳನ್ನು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಗತ್ಯ ವಸ್ತುಗಳ ಕಾಯ್ದೆ–1955ರಡಿ ಪ್ರಕರಣದಡಿ ಬಂಧಿಸಲಾಗಿದೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ವಿನೋದ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಪಡಿತರ ಧಾನ್ಯಗಳ ಅಕ್ರಮಕ್ಕೆ ಸಂಬಂಧಿಸಿದಂತೆ 2023–2024ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 5 ಪ್ರಕರಣಗಳು ವರದಿಯಾಗಿದ್ದವು. 7 ಆರೋಪಿಗಳನ್ನು ಬಂಧಿಸಲಾಗಿದೆ. ಆಗ 77.97 ಕ್ವಿಂಟಲ್ ಅಕ್ಕಿ, ಗೃಹ ಬಳಕೆಯ 248 ಸಿಲಿಂಡರ್‌ಗಳನ್ನೂ ಜಪ್ತಿ ಮಾಡಲಾಗಿತ್ತು. 2024–25ರಲ್ಲಿ 13 ಆರೋಪಿಗಳನ್ನು ಬಂಧಿಸಲಾಗಿದೆ. ಆಗ 939.47 ಕ್ವಿಂಟಲ್ ಅಕ್ಕಿ, ಗೃಹ ಬಳಕೆಯ 895 ಸಿಲಿಂಡರ್‌ಗಳನ್ನೂ ಜಪ್ತಿ ಮಾಡಲಾಗಿತ್ತು’ ಎಂದು ಹೇಳಿದರು.
ಹಣದ ಆಮಿಷ:
‘ದಲ್ಲಾಳಿಗಳು ಹಣದ ಆಮಿಷವೊಡ್ಡಿ ಬಡವರಿಂದ ಅಕ್ಕಿ ಖರೀದಿಸುತ್ತಿದ್ದಾರೆ. ಮನೆ–ಮನೆಗೆ ಹೋಗಿ ಕಡಿಮೆ ದುಡ್ಡಿಗೆ ಅಕ್ಕಿ ಸಂಗ್ರಹಿಸುವ ದಂಧೆಕೋರರು, ಅದನ್ನು ರಾಜ್ಯದ ಗಡಿಯಾಚೆ ಮಾರುತ್ತಿದ್ದಾರೆ. ಇನ್ನೊಂದೆಡೆ ಬಡವರೇ ಪಡಿತರ ಅಕ್ಕಿ ತಂದು ವಾರದ ಸಂತೆಯಲ್ಲಿ ಇಂಥ ವ್ಯಾಪಾರಿಗಳಿಗೆ ಮಾರುತ್ತಾರೆ. ಅದರಿಂದ ಬಂದ ಹಣದಲ್ಲಿ ಮನೆ ತರಕಾರಿ–ಸೊಪ್ಪು ಖರೀದಿಸುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.