ADVERTISEMENT

ಧಾರವಾಡ ಜಿಲ್ಲಾ ಅಥ್ಲೆಟಿಕ್ಸ್‌ನಲ್ಲಿ ಎರಡೂವರೆ ದಶಕದ ಬಳಿಕ ಬದಲಾವಣೆ

ಕಾರ್ಯದರ್ಶಿಯಾಗಿ ವಿಲಾಸ್‌ ನೇಮಕ

ಪ್ರಮೋದ
Published 15 ನವೆಂಬರ್ 2021, 4:55 IST
Last Updated 15 ನವೆಂಬರ್ 2021, 4:55 IST
ವಿಲಾಸ್ ನೀಲಗುಂದ
ವಿಲಾಸ್ ನೀಲಗುಂದ   

ಹುಬ್ಬಳ್ಳಿ: ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆಯಲ್ಲಿ ಎರಡೂವರೆ ದಶಕದ ಬಳಿಕ ಬದಲಾವಣೆಯ ಗಾಳಿ ಬೀಸಿದ್ದು, ಅಂತರರಾಷ್ಟ್ರೀಯ ಮಾಜಿ ಅಥ್ಲೀಟ್‌ ವಿಲಾಸ್ ನೀಲಗುಂದ ಸಂಸ್ಥೆಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಇದು ಜಿಲ್ಲೆಯ ಅಥ್ಲೆಟಿಕ್‌ ವಲಯದಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಹಿರಿಯ ಅಥ್ಲೆಟಿಕ್‌ ಕೋಚ್‌ ಧಾರವಾಡದ ಕೆ.ಎಸ್‌. ಭೀಮಣ್ಣನವರ ಅವರು ಒಟ್ಟು 25 ವರ್ಷಗಳ ಕಾಲ ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಕಾರ್ಯದರ್ಶಿಯಾಗಿದ್ದರು. ಈಗ ಹೊಸಬರಿಗೆ ಅವಕಾಶ ನೀಡುವ ದೃಷ್ಟಿಯಿಂದ ವಿಲಾಸ್‌ಗೆ ಈ ಜವಾಬ್ದಾರಿ ವಹಿಸಿದ್ದಾರೆ. ಸಕ್ಕರೆ ಖಾತೆ ಸಚಿವ ಶಂಕರಪಾಟೀಲ ಮುನೇನಕೊಪ್ಪ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.

ಮೂಲತಃ ಗದಗ ಜಿಲ್ಲೆಯ ವಿಲಾಸ್‌ 2004ರಲ್ಲಿ ಪಾಕಿಸ್ತಾನದಲ್ಲಿ ನಡೆದಿದ್ದ ಸ್ಯಾಫ್‌ ಕ್ರೀಡಾಕೂಟದ 100 ಮೀಟರ್‌ ಓಟದಲ್ಲಿ ಬೆಳ್ಳಿ, 4X100 ಮೀ. ರಿಲೆಯಲ್ಲಿ ಚಿನ್ನ, 2009ರಲ್ಲಿ ಪುಣೆಯಲ್ಲಿ ವಿಶ್ವ ರೈಲ್ವೆ ಕ್ರೀಡಾಕೂಟದ 4X100 ಮೀ. ರಿಲೆಯಲ್ಲಿ ಚಿನ್ನದ ಪದಕಗಳನ್ನು ಜಯಿಸಿದ್ದಾರೆ. 2002ರಿಂದ 2010ರ ಅವಧಿಯಲ್ಲಿ 15 ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಆರು ಪದಕಗಳನ್ನು ಜಯಿಸಿದ್ದಾರೆ. ರಾಷ್ಟ್ರೀಯ ಟೂರ್ನಿಗಳಲ್ಲಿ 20ಕ್ಕೂ ಹೆಚ್ಚು ಪದಕಗಳು ಬಂದಿವೆ. ಹುಬ್ಬಳ್ಳಿಯಲ್ಲಿ ಈಗ ನೈರುತ್ಯ ರೈಲ್ವೆಯ ಕ್ರೀಡಾ ಸಂಯೋಜಕರಾಗಿದ್ದಾರೆ.

ADVERTISEMENT

ಅಥ್ಲೆಟಿಕ್ಸ್‌ನಲ್ಲಿ ಸಾಧನೆ ಮಾಡಿದವರೇ ಈಗ ಆಡಳಿತದ ಚುಕ್ಕಾಣಿ ಹಿಡಿದಿರುವುದು ಜಿಲ್ಲೆಯ ಅಥ್ಲೀಟ್‌ಗಳನ್ನು ಹೊಸ ಆಶಾಭಾವ ಮೂಡಿಸಿದೆ.

ತಮ್ಮ ಆಯ್ಕೆ ಬಗ್ಗೆ ‘ಪ್ರಜಾವಾಣಿ’ ಜೊತೆ ಖುಷಿ ಹಂಚಿಕೊಂಡ ವಿಲಾಸ್‌ ‘ಜಿಲ್ಲೆಯ ಅಥ್ಲೆಟಿಕ್ಸ್‌ಗೆ ದೊಡ್ಡ ಇತಿಹಾಸವಿದೆ. ಅದನ್ನು ಹಿರಿಯರು ಮುಂದುವರಿಸಿಕೊಂಡು ಬಂದಿದ್ದಾರೆ. ಈಗಿನ ಸ್ಪರ್ಧಾತ್ಮಕತೆಗೆ ತಕ್ಕಂತೆ ಅಥ್ಲೀಟ್‌ಗಳನ್ನು ರೂಪಿಸಲು ಮತ್ತು ಜಿಲ್ಲೆಯಲ್ಲಿ ಹೆಚ್ಚು ಕ್ರೀಡಾಕೂಟ ಆಯೋಜಿಸಲು ಆದ್ಯತೆ ಕೊಡುತ್ತೇನೆ’ ಎಂದರು.

‘ಅಂತರ ಕ್ಲಬ್‌ ಮಾದರಿಯಲ್ಲಿ 12 ವರ್ಷದೊಳಗಿನವರ ವಿಭಾಗದಿಂದ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಇದಕ್ಕೂ ಮೊದಲು ಜಿಲ್ಲೆಯಲ್ಲಿ ರಾಷ್ಟ್ರೀಯ ಮಟ್ಟದ ಟೂರ್ನಿ ಹಮ್ಮಿಕೊಳ್ಳಲಾಗುವುದು. ಆಗ ನಮ್ಮ ಅಥ್ಲೀಟ್‌ಗಳಿಗೆ ಆಸಕ್ತಿ ಹೆಚ್ಚಾಗುತ್ತದೆ. ಬದಲಾದ ಕ್ರೀಡಾ ಕೌಶಲಗಳ ಅಗತ್ಯಕ್ಕೆ ತಕ್ಕಂತೆ ಅಥ್ಲೀಟ್‌ಗಳಿಗೆ ತರಬೇತಿ ನೀಡುತ್ತೇನೆ’ ಎಂದು ಭರವಸೆ ವ್ಯಕ್ತಪಡಿಸಿದರು.

* ವಿಲಾಸ್‌ ಪ್ರತಿಭಾನ್ವಿತ. ಅವರ ಮುಂದಾಳತ್ವದಲ್ಲಿ ಜಿಲ್ಲೆಯಿಂದ ಹೆಚ್ಚು ಅಥ್ಲೀಟ್‌ಗಳು ಹೊರಬರಬೇಕು. ದೇಶವನ್ನು ಪ್ರತಿನಿಧಿಸುವಂತಾಗಬೇಕು.

-ಕೆ.ಎಸ್‌. ಭೀಮಣ್ಣನವರ, ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆ ನಿರ್ಗಮಿತ ಕಾರ್ಯದರ್ಶಿ

* ಜಿಲ್ಲೆಯಲ್ಲಿ ಅಥ್ಲೆಟಿಕ್ ಕ್ರೀಡಾಕೂಟಗಳನ್ನು ಮೇಲಿಂದ ಮೇಲೆ ಆಯೋಜಿಸಬೇಕು. ಈ ಭಾಗದ ಮಕ್ಕಳ ನೈಜ ಸಾಮರ್ಥ್ಯ ಹೊರಬರಬೇಕು.

-ಪಿ. ಮಂಜುನಾಥ, ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆ ಮಾಜಿ ಅಧ್ಯಕ್ಷ

* ಅಥ್ಲೆಟಿಕ್ಸ್‌ನಲ್ಲಿ ಸಾಧನೆ ಮಾಡಿದವರೇ ಕಾರ್ಯದರ್ಶಿಯಾಗಿದ್ದು ಖುಷಿಯಾಗಿದೆ. ಜಿಲ್ಲೆಯಲ್ಲಿ ಬದಲಾವಣೆಯ ನಿರೀಕ್ಷೆ ಮೂಡಿದೆ.

-ಸುನೀಲ್‌ ಎನ್‌.ಡಿ., ಅಥ್ಲೀಟ್‌, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.