ADVERTISEMENT

ಎಪಿಎಂಸಿ ಅಧ್ಯಕ್ಷರ ವಿರುದ್ಧ ‘ಅವಿಶ್ವಾಸ’

ಅವಧಿ ಕೊನೆಗೊಳ್ಳುವ ಮೊದಲೇ ಮತ್ತೊಂದು ಚುನಾವಣೆ?

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 5:39 IST
Last Updated 24 ಜೂನ್ 2021, 5:39 IST
ಹುಬ್ಬಳ್ಳಿ ಎಪಿಎಂಸಿಯ ಸದಸ್ಯರು ಬುಧವಾರ ಅವಿಶ್ವಾಸ ಸೂಚನೆಯ ಪತ್ರ ನೀಡಿದರು
ಹುಬ್ಬಳ್ಳಿ ಎಪಿಎಂಸಿಯ ಸದಸ್ಯರು ಬುಧವಾರ ಅವಿಶ್ವಾಸ ಸೂಚನೆಯ ಪತ್ರ ನೀಡಿದರು   

ಹುಬ್ಬಳ್ಳಿ: ಅಮರಗೋಳದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಅಧ್ಯಕ್ಷ ಸಹದೇವಪ್ಪ ಸುಡೇಕನವರ ವಿರುದ್ಧ ಉಪಾಧ್ಯಕ್ಷ ಬಸವರಾಜ ನಾಯ್ಕರ ಸೇರಿದಂತೆ 12 ಜನ ಸದಸ್ಯರು ಬುಧವಾರ ಅವಿಶ್ವಾಸ ಮಂಡನೆಗೆ ಕೋರಿ ಪತ್ರ ಸಲ್ಲಿಸಿದ್ದಾರೆ.

ಅಧ್ಯಕ್ಷರು ಸದಸ್ಯರೊಂದಿಗೆ ಸಾಮರಸ್ಯ ಹೊಂದಿಲ್ಲ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುತ್ತಿಲ್ಲ ಎನ್ನುವ ಕಾರಣ ನೀಡಿದ್ದಾರೆ. ಒಟ್ಟು 14 ಸದಸ್ಯರ ಬಲದ ಎಪಿಎಂಸಿಯಲ್ಲಿ ಜಗನ್ನಾಥಗೌಡ ಸಿದ್ಧನಗೌಡ ಅವರನ್ನು ಹೊರತುಪಡಿಸಿ ಉಳಿದ 12 ಜನ ಸದಸ್ಯರು ಎ‍ಪಿಎಂಸಿ ಸಹಾಯಕ ಕಾರ್ಯದರ್ಶಿ ಎ.ಪಿ. ಪಾಟೀಲ ಅವರಿಗೆ ಪತ್ರ ಕೊಟ್ಟಿದ್ದಾರೆ.

ಅವಿಶ್ವಾಸ ಮಂಡನೆಗೆ ಬೆಂಬಲ ಸೂಚಿಸಿ ಬಸವರಾಜ ನಾಯ್ಕರ, ಈಶ್ವರಪ್ಪ ಕಿತ್ತೂರ, ರಾಮಚಂದ್ರ ಜಾಧವ, ಶಂಕರಪ್ಪ ಬಿಜವಾಡ, ಗಿರಿಜಾ ಬೆಂಗೇರಿ, ಶಂಕರಗೌಡ ಪಾಟೀಲ, ನೀಲವ್ವ ರಾಯನಗೌಡ್ರ, ಸುರೇಶ ಕಿರೇಸೂರ, ಪರಸಪ್ಪ ಮುಳಗುಂದ, ಚನ್ನಬಸಪ್ಪ ಹೊಸಮನಿ, ಉದಯಕುಮಾರ ದೊಡ್ಡಮನಿ ಮತ್ತು ಶಿವಯೋಗಿ ಮಂಟೂರಶೆಟ್ಟರ್‌ ಸಹಿ ಹಾಕಿದ್ದಾರೆ.

ADVERTISEMENT

ಮೂರನೇ ಹಾಗೂ ಕೊನೆಯ ಅವಧಿಗೆ ಅಧ್ಯಕ್ಷರಾಗಿರುವ ಸುಡೇಕನವರ ಅವರ ಅಧಿಕಾರವಧಿ 2022ರ ಮಾರ್ಚ್‌ವರೆಗೆ ಇತ್ತು. ಕೊನೆಯ 20 ತಿಂಗಳ ಅವಧಿಗೆ ಸುಡೇಕನವರ 2020ರ ಆಗಸ್ಟ್‌ನಲ್ಲಿ ಅಧ್ಯಕ್ಷರಾಗಿದ್ದರು.

ಸದಸ್ಯ ಸುರೇಶ ಕಿರೇಸೂರ ಈ ಕುರಿತು ಪ್ರತಿಕ್ರಿಯಿಸಿ ‘ಅಭಿವೃದ್ಧಿ ಕಾರ್ಯ ಮಾಡಬೇಕು ಎಂದು ಬಯಸಿ ಅಧಿಕಾರಕ್ಕೆ ಬಂದೆವು. ಆದರೆ, ಅದು ಸಾಧ್ಯವಾಗಲಿಲ್ಲ. ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಬೇಕು ಎನ್ನುವುದಷ್ಟೇ ನಮ್ಮ ಗುರಿಯಾಗಿದೆ’ ಎಂದರು.

ಎಪಿಎಂಸಿ ಸಹಾಯಕ ಕಾರ್ಯದರ್ಶಿ ಎ.ಪಿ. ಪಾಟೀಲ ಪ್ರತಿಕ್ರಿಯಿಸಿ ‘ಅವಿಶ್ವಾಸ ಮಂಡನೆಗೆ ಕೋರಿದ 15 ದಿನಗಳಲ್ಲಿ ಅಧ್ಯಕ್ಷರು ಸಭೆ ಕರೆಯಬೇಕು ಎನ್ನುವುದು ನಿಯಮ. ಕೋವಿಡ್ ಕಾರಣದಿಂದಾಗಿ ಈಗ ಸಭೆ ಹಾಗೂ ಚುನಾವಣೆ ನಡೆಸುವಂತಿಲ್ಲ. ಇಲ್ಲಿನ ಸ್ಥಿತಿಯನ್ನು ಜಿಲ್ಲಾಧಿಕಾರಿಗೆ ತಿಳಿಸಿ ಅವರ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಸದ್ಯಕ್ಕೆ ಯಾವುದೇ ಚುನಾವಣೆ ನಡೆಸುವಂತಿಲ್ಲ ಎಂದು ಸರ್ಕಾರ ಆದೇಶಿಸಿದೆ. ಇಂಥ ಸಮಯದಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅವಕಾಶ ನೀಡುವುದು ಸರಿಯೇ?
ಸಹದೇವಪ್ಪ ಸುಡಕೇನವರ, ಅಧ್ಯಕ್ಷ, ಎಪಿಎಂಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.