ನವಲಗುಂದ: ಪಟ್ಟಣದಲ್ಲಿರುವ ಪಂಚಗೃಹ ಹಿರೇಮಠದ ನೂತನ ಪಟ್ಟಾಧಿಕಾರಿ ನೇಮಿಸುವ ಕುರಿತು ಭಾನುವಾರ ಪೀಠಾಧಿಪತಿ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಪೂರ್ವಭಾವಿ ಸಭೆ ಜರುಗಿತು.
ಹಲವರು ಪಟ್ಟಾಧಿಕಾರಕ್ಕೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಮಾತನಾಡಿ, ‘ಪಂಚಗೃಹ ಹಿರೇಮಠದಲ್ಲಿ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾಕಷ್ಟು ಸಮಾಜಮುಖಿ ಕಾರ್ಯಗಳ ಮೂಲಕ ರಾಜ್ಯದ ಹಲವೆಡೆ ಭಕ್ತ ಸಮೂಹದ ಪ್ರೀತಿ, ಗೌರವ, ಭಕ್ತಿಗೆ ಪಾತ್ರರಾಗಿದ್ದಾರೆ. ನೂತನ ಶ್ರೀಗಳ ನೇಮಿಸುವ ಕುರಿತು ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳನ್ನು ಭೇಟಿ ಮಾಡಿ ಚರ್ಚಿಸಿ ಶ್ರೀಗಳ ತೀರ್ಮಾನದಂತೆ ಅಂತಿಮ ನಿರ್ಣಯ ಕೈಗೊಳ್ಳುವ ಕುರಿತು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಶಿರಕೋಳದ ಗುರುಸಿದ್ಧೇಶ್ವರ ಸ್ವಾಮೀಜಿ, ಮಣಕವಾಡ ಅನ್ನದಾನೀಶ್ವರ ದೇವಮಂದಿರ ಮಹಾಮಠದ ಅಭಿನವ ಮೃತ್ಯುಂಜಯ ಸ್ವಾಮೀಜಿ, ಮೊರಬ ಜಡೆಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಹುಬ್ಬಳ್ಳಿ ತಾಲ್ಲೂಕು ಸುಳ್ಳದ ಪಂಚಗೃಹ ಹಿರೇಮಠದ ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ, ಶಾಸಕ ಎನ್.ಎಚ್.ಕೋನರಡ್ಡಿ ಹಾಗೂ ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಅಂದಾನಯ್ಯ ಹಿರೇಮಠ, ರಾಯನಗೌಡ ಪಾಟೀಲ, ಈರಣ್ಣ ಚವಡಿ ಮುಂತಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.