ಹುಬ್ಬಳ್ಳಿ: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತ ಹೆಚ್ಚಾಗಿದ್ದು, ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿವೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಪೊಳ್ಳು ಭಾಷಣದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೈಯ್ಯುವುದೇ ಕಾಂಗ್ರೆಸ್‌ನವರಿಗೆ ಉದ್ಯೋಗವಾಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಟೀಕಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಧಾನಸೌಧದಲ್ಲಿ ನಾಸಿರ್ ಹುಸೇನ್ ಅವರ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಆದರೆ, ಈವರೆಗೂ ಅವರನ್ನು ಕರೆದು ವಿಚಾರಣೆ ನಡೆಸಿಲ್ಲ. ಹಳೇ ಹುಬ್ಬಳ್ಳಿ, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆಯ ಆರೋಪಿಗಳ ಮೇಲಿನ ಪ್ರಕರಣ ಹಿಂಪಡೆದ ರಾಜ್ಯ ಸರ್ಕಾರ, ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದೆ’ ಎಂದು ಹೇಳಿದರು.
‘ಬೆಳಗಾವಿ ಅಧಿವೇಶನದ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಸಿ.ಟಿ.ರವಿ ಅವರ ಮೇಲೆ ವಿನಾಕಾರಣ ಆರೋಪ ಮಾಡಿದರು. ಬಿ.ಕೆ. ಹರಿಪ್ರಸಾದ್ ಅವರು ಉಡುಪಿಯನ್ನು, ಮಧು ಬಂಗಾರಪ್ಪ ಅವರು ಶಿವಮೊಗ್ಗವನ್ನು ರಿಪಬ್ಲಿಕ್ ಮಾಡಿಕೊಂಡಿದ್ದು, ತಮಗೆ ಬೇಕಾದ ರೀತಿ ಆಡಳಿತ ನಡೆಸುತ್ತಿದ್ದಾರೆ’ ಎಂದು ದೂರಿದರು.
‘ಧಾರವಾಡ ಜಿಲ್ಲೆಯಲ್ಲಿ ಪೊಲೀಸರು ಹಣ ವಸೂಲಿ ಮಾಡುವುದು ಬಿಟ್ಟರೆ ಬೇರೆ ಏನೂ ಮಾಡುತ್ತಿಲ್ಲ. ಗೋಕುಲ ರಸ್ತೆಯಲ್ಲಿ 40 ಕಿ.ಮೀ. ವೇಗದಲ್ಲಿ ಸಂಚರಿಸಿದರೂ ನಿಲ್ಲಿಸಿ ದಂಡ ವಸೂಲಿ ಮಾಡುತ್ತಿದ್ದು, ಈ ಮೂಲಕ ಸವಾರರಿಗೆ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಗಮನ ಹರಿಸುತ್ತಿಲ್ಲ’ ಎಂದರು.
‘ಜನೌಷಧಿ ಕೇಂದ್ರಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಇನ್ನೂ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.