ADVERTISEMENT

ಕಲೆ ರಕ್ಷಣೆ ನಮ್ಮೆಲ್ಲರ ಹೊಣೆ: ಹನುಮಾಕ್ಷಿ ಗೋಗಿ

‘ಜಾನಪದ ಹಬ್ಬ’ ಕಾರ್ಯಕ್ರಮದಲ್ಲಿ ಹನುಮಾಕ್ಷಿ ಗೋಗಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 17:07 IST
Last Updated 5 ಮಾರ್ಚ್ 2021, 17:07 IST
ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆದ ಜಾನಪದ ಹಬ್ಬ ಕಾರ್ಯಕ್ರಮವನ್ನು ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕ ಡಾ. ಹನುಮಾಕ್ಷಿ ಗೋಗಿ ಉದ್ಘಾಟಿಸಿದರು
ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆದ ಜಾನಪದ ಹಬ್ಬ ಕಾರ್ಯಕ್ರಮವನ್ನು ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕ ಡಾ. ಹನುಮಾಕ್ಷಿ ಗೋಗಿ ಉದ್ಘಾಟಿಸಿದರು   

ಹುಬ್ಬಳ್ಳಿ: ‘ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿರುವ ಜಾನಪದ ಕಲೆಯನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕ ಡಾ. ಹನುಮಾಕ್ಷಿ ಗೋಗಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಜಾನಪದ ಮಂಟಪ, ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್.ಎಸ್. ಕೋತಂಬ್ರಿ ವಿಜ್ಞಾನ ಸಂಸ್ಥೆಯ ಕನ್ನಡ ವಿಭಾಗದ ಜಂಟಿ ಆಶ್ರಯದಲ್ಲಿ ಶುಕ್ರವಾರ ನಡೆದ ‘ಜಾನಪದ ಹಬ್ಬ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆಧುನಿಕ ಶೈಲಿಯ ಬದುಕು, ಕಂಪ್ಯೂಟರ್, ಮೊಬೈಲ್ ಮತ್ತು ಗೆಜೆಟ್‍ಗಳಿಂದ ನಮ್ಮ ಸಾಂಸ್ಕೃತಿಕ ಮತ್ತು ಜಾನಪದ ಕಲೆಗೆ ಹಿನ್ನಡೆಯಾಗುತ್ತಿದೆ. ಈಗಿನವರಿಗೆ ನಮ್ಮಂತೆ ಬಾಲ್ಯದ ದಿನಗಳನ್ನು ಕಳೆಯಲು ಸಾಧ್ಯವಾಗುತ್ತಿಲ್ಲ. ಧಾವಂತದ ಬದುಕು ನಮ್ಮನ್ನು ಅನಿವಾರ್ಯ ಸ್ಥಿತಿಗೆ ತಳ್ಳಿದ್ದರಿಂದ ಕಲೆ ಮತ್ತು ಸಂಸ್ಕೃತಿಯಿಂದ ದೂರ ಸರಿಯುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಜಾನಪದ ಮಂಟಪ ಮತ್ತು ತುಂಗಭದ್ರಾ ಮಹಿಳಾ ಮಂಡಳದ ಸದಸ್ಯರು ಜಾನಪದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕಲಾವತಿ ಹೂಗಾರ ತಂಡದವರು ‘ಶ್ರೀ ಕೃಷ್ಣ ಪಾರಿಜಾತದ ಗೊಲ್ಲತಿ ಭಾಗ’ ಮತ್ತು ಪ್ರೇಮಾ ಹಿರೇಮಠ ತಂಡದವರು ಬೀಸುವಕಲ್ಲು ಮತ್ತು ಸೋಬಾನೆ ಪದಗಳು ಹಾಗೂ ಸುನಂದಾ ನಿಂಬನಗೌಡರ ಅವರು ಉಂಡಿ ಹಾಡು, ಕೋಲಾಟ ಹಾಡುಗಳನ್ನು ಹಾಡಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶಿವಾನಂದ ಭಾವಿಕಟ್ಟಿ, ಪ್ರಾಚಾರ್ಯೆ ಡಾ. ಉಮಾ ವಿ. ನೇರ್ಲೆ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ವಿಜಯಶ್ರೀ ಜಿ. ಹಿರೇಮಠ, ಸುನಂದಾ ನಿಂಬನಗೌಡರ, ವಿದ್ಯಾವರ್ಧಕ ಸಂಘದ ಜಾನಪದ ಮಂಟಪದ ಸಂಚಾಲಕಿ ವಿಶ್ವೇಶ್ವರಿ ಬಿ. ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.