ADVERTISEMENT

ಹೂವಿನಲ್ಲಿ ಅರಳಿದ ಕಲಾಕೃತಿ

ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 6:44 IST
Last Updated 21 ಅಕ್ಟೋಬರ್ 2022, 6:44 IST
ಧಾರವಾಡದ ಸ್ಟೇಷನ್ ರಸ್ತೆಯಲ್ಲಿರುವ ತೋಟಗಾರಿಕಾ ಇಲಾಖೆಯಲ್ಲಿ ಗುರುವಾರದಿಂದ ಆರಂಭಗೊಂಡ ಫಲಪುಷ್ಪ ಪ್ರದರ್ಶನದಲ್ಲಿ ತರಹೇವಾರಿ ಹೂಗಳೊಂದಿಗೆ ಮಹಿಳೆಯರು
ಧಾರವಾಡದ ಸ್ಟೇಷನ್ ರಸ್ತೆಯಲ್ಲಿರುವ ತೋಟಗಾರಿಕಾ ಇಲಾಖೆಯಲ್ಲಿ ಗುರುವಾರದಿಂದ ಆರಂಭಗೊಂಡ ಫಲಪುಷ್ಪ ಪ್ರದರ್ಶನದಲ್ಲಿ ತರಹೇವಾರಿ ಹೂಗಳೊಂದಿಗೆ ಮಹಿಳೆಯರು   

ಧಾರವಾಡ: ಅಶ್ವಾರೂಢ ಕಿತ್ತೂರು ರಾಣಿ ಚನ್ನಮ್ಮ ಹಾಗೂ ವೀರ ಸಂಗೊಳ್ಳಿ ರಾಯಣ್ಣ ಹೂವಿನಲ್ಲಿ ಅರಳಿದ್ದಾರೆ. ಅಕಾಲಿಕವಾಗಿ ಅಗಲಿದ ಪುನೀತ್ ರಾಜ್‌ಕುಮಾರ್ ಹಾಗೂ ಡಾ. ರಾಜ್‌ಕುಮಾರ್ ‘ಹೂ’ನಗೆ ಬೀರಿದ್ದಾರೆ.

ಕಲಾವಿದರ ಕೈಚಳಕದಲ್ಲಿ ಅರಳಿದ ಇಂಥ ಹಲವಾರು ಕಲಾಕೃತಿಗಳು ಕಂಡುಬಂದಿದ್ದು ನಗರದ ಸ್ಟೇಷನ್ ರಸ್ತೆಯಲ್ಲಿರುವ ತೋಟಗಾರಿಕಾ ಇಲಾಖೆ ಆವರಣದಲ್ಲಿ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ, ತೋಟಗಾರಿಕಾ ಇಲಾಖೆ, ಉದ್ಯಾನ ಹಾಗೂ ಫಲಪುಷ್ಪ ಪ್ರದರ್ಶನ ಸಮಿತಿ, ಹಾಪ್‌ಕಾಮ್ಸ್‌, ಕರ್ನಾಟಕ ರೈತ ಸಂಘ ಮತ್ತು ಕೆವಿಜಿ ಬ್ಯಾಂಕ್‌ ಆಶ್ರಯದಲ್ಲಿ ಗುರುವಾರದಿಂದ ಮೂರು ದಿನಗಳ ಫಲಪುಷ್ಪ ಪ್ರದರ್ಶನ ಆರಂಭವಾಗಿದೆ.

ADVERTISEMENT

ತರಹೇವಾರಿ ಹೂವುಗಳನ್ನು ಬಳಸಿ ರಚಿಸಲಾಗಿರುವ ಕಲಾಕೃತಿಗಳು ಒಂದಕ್ಕಿಂತ ಒಂದು ಆಕರ್ಷಿಸುತ್ತಿವೆ. ಜತೆಗೆ ವಿವಿಧ ರೀತಿಯ ಫಲಗಳ ಪ್ರದರ್ಶನವೂ ಆಯೋಜನೆಗೊಂಡಿದೆ.

ಪ್ರದರ್ಶನಕ್ಕೆ ಚಾಲನೆ ನೀಡಿದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ‘ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ರೈತರ ಆದಾಯ ಕಾಪಾಡುವ ಪ್ರಮುಖ ಬೆಳೆಗಳಾಗಿವೆ. ಜನರಿಗೆ ಹತ್ತಿರವಾಗುವ ಇಂಥ ಕಾರ್ಯಕ್ರಮಗಳನ್ನು ತೋಟಗಾರಿಕಾ ಇಲಾಖೆ ಆಗಾಗ ಆಯೋಜಿಸುತ್ತಿರಬೇಕು’ ಎಂದರು.

ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಸುರೇಶ ಇಟ್ನಾಳ ಅವರು ಬಗೆಬಗೆಯ ಹೂವುಗಳಿಂದಅಲಂಕಾರಗೊಂಡ ಕಲಾಕೃತಿಗಳನ್ನು ಹಾಗೂ ಪ್ರತಿಮೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಹಾಫ್ ಕಾಮ್ಸ್ ಅಧ್ಯಕ್ಷ ಈಶ್ವರಚಂದ್ರ ಹೊಸಮನಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕಾಶಿನಾಥ ಭದ್ರಣ್ಣನವರ, ಹಿರಿಯ ಸಹಾಯಕ ನಿರ್ದೇಶಕ ಸಂಗಮೇಶ ಗೋಲಪ್ಪನವರ, ಶಿವಾನಂದ ಪಾಟೀಲ, ಸಂಜಯಕುಮಾರ ಗುಡಿಮನಿ, ಮಹಾಂತೇಶ ಪಟ್ಟಣಶೆಟ್ಟಿ, ವಿಜಯಕುಮಾರ ರ‍್ಯಾಗಿ, ಸಹಾಯಕ ನಿರ್ದೇಶಕ ಶಿವಾನಂದ ಪಾಟೀಲ, ಪ್ರಶಾಂತ ದೇವರಮನಿ, ಕಾರ್ಯಕಾರಿ ಸಮಿತಿ ಸಂಚಾಲಕ ಎ.ಜಿ. ದೇಶಪಾಂಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.