ADVERTISEMENT

ಹುಬ್ಬಳ್ಳಿ | ಹಿಟ್ ಆ್ಯಂಡ್ ರನ್ ಕಾಯ್ದೆ ಹಿಂಪಡೆಯಿರಿ: ಆಟೊ ಚಾಲಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2024, 13:29 IST
Last Updated 26 ಫೆಬ್ರುವರಿ 2024, 13:29 IST
ಹುಬ್ಬಳ್ಳಿಯಲ್ಲಿ ಉತ್ತರ ಕರ್ನಾಟಕ ಆಟೊ ರಿಕ್ಷಾ ಚಾಲಕರ ಸುರಕ್ಷಾ ಸಂಘದ ಸದಸ್ಯರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು
ಹುಬ್ಬಳ್ಳಿಯಲ್ಲಿ ಉತ್ತರ ಕರ್ನಾಟಕ ಆಟೊ ರಿಕ್ಷಾ ಚಾಲಕರ ಸುರಕ್ಷಾ ಸಂಘದ ಸದಸ್ಯರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು   

ಹುಬ್ಬಳ್ಳಿ: ಅಪಘಾತ ಮಾಡಿ ಪರಾರಿಯಾದ (ಹಿಟ್ ಆ್ಯಂಡ್ ರನ್‌) ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉತ್ತರ ಕರ್ನಾಟಕ ಆಟೊ ರಿಕ್ಷಾ ಚಾಲಕರ ಸುರಕ್ಷಾ ಸಂಘದ ಸದಸ್ಯರು ನಗರದ ಮಿನಿವಿಧಾನಸೌಧದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಆಟೊ ಚಾಲಕರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. 

‘ಆಟೊ ಚಾಲಕರಿಗೆ ಕಾರ್ಮಿಕ ಕಾರ್ಡ್ ವಿತರಿಸಬೇಕು. ಹಳೆಯ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (ಎಚ್‌ಎಸ್‌ಆರ್‌ಪಿ) ಅಳವಡಿಸಲು ₹800 ವೆಚ್ಚಾಗುತ್ತಿದೆ. ಇದನ್ನು ಭರಿಸುವ ಶಕ್ತಿ ಎಲ್ಲ ಆಟೊ ಚಾಲಕರಿಗೆ ಇಲ್ಲ. ಉಚಿತವಾಗಿ ಅಳವಡಿಸಬೇಕು’ ಎಂದು ಚಾಲಕರು ಆಗ್ರಹಿಸಿದರು.

ADVERTISEMENT

‘ಆಟೊ ಚಾಲಕರಿಗೆ ಪ್ರತ್ಯೇಕ ನಿಗಮ‌ ಮಂಡಳಿ ಸ್ಥಾಪನೆ ಮಾಡಬೇಕು. ಅವರ ಮಕ್ಕಳ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ನೀಡಬೇಕು. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಆಟೊ ಚಾಲಕರಿಗೆ ಯಾವುದೇ ವಿಶೇಷ ಅನುದಾನ ನೀಡಿಲ್ಲ’ ಎಂದು ದೂರಿದರು.

‘ಆಟೊ ಚಾಲಕರು ಅಪಘಾತದಲ್ಲಿ ಮೃತಪಟ್ಟರೆ ಅವರ ಕುಟುಂಬದವರಿಗೆ ನೀಡುವ ಪರಿಹಾರದ ಮೊತ್ತವನ್ನು  ₹10 ಲಕ್ಷಕ್ಕೆ ಹೆಚ್ಚಿಸಬೇಕು. ಆಟೊಗಳ ವಿಮೆ ಕಡಿಮೆ ಮಾಡಬೇಕು. ಅವಳಿ ನಗರದಲ್ಲಿ ಅಧಿಕೃತ ಆಟೊ ನಿಲ್ದಾಣಗಳನ್ನು ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.

‘60 ವರ್ಷ ಮೀರಿದ ಆಟೊ ಚಾಲಕರಿಗೆ ಪಿಂಚಣಿ ನೀಡಬೇಕು. ಚಾಲಕರನ್ನು ಇಎಸ್‌ಐ ವ್ಯಾಪ್ತಿಗೆ ಸೇರಿಸಬೇಕು. ಚಾಲಕರ ಹೆಣ್ಣುಮಕ್ಕಳ ವಿವಾಹಕ್ಕೆ ಸಹಾಯಧನ ನೀಡಬೇಕು, ಆಟೊ ಚಾಲಕರ ದಿನಾಚರಣೆ ಮಾಡುವ ಬಗ್ಗೆ ಸರ್ಕಾರ ಘೋಷಣೆ ಮಾಡಬೇಕು. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಲೋಕಸಭಾ ಚುನಾವಣೆ ರಾಜಕೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಾಗುವುದು’ ಎಂದು ಎಚ್ಚರಿಕೆ ನೀಡದರು.

ದಿ. ಲಕ್ಷ್ಮಣ ಹಿರೇಕೆರೂರ ಆಟೊ ಚಾಲಕರ ಸಂಘದ ಸದಸ್ಯರು ಭಾಗವಹಿಸಿದ್ದರು. ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಪುಂಡಲೀಕ ಬಡಿಗೇರ, ಚಿದಾನಂದ ಸವದತ್ತಿ, ಹನುಮಂತ ಪವಾಡಿ, ಪ್ರಕಾಶ ಉಳ್ಳಾಗಡ್ಡಿ, ರಾಜು ಕಾಲವಾಡ, ಗಿಡ್ಡಪ್ಪ ಬಂಡಿವಡ್ಡರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.