ADVERTISEMENT

ಕಾರ್ಯಗತವಾಗದ ಡಿಜಿಟಲ್ ಮೀಟರ್ ಅಳವಡಿಕೆ ಯೋಜನೆ: ಆಟೊ ಅಟಾಟೋಪಕ್ಕಿಲ್ಲ ಕಡಿವಾಣ

ಗಣೇಶ ವೈದ್ಯ
Published 28 ನವೆಂಬರ್ 2025, 5:33 IST
Last Updated 28 ನವೆಂಬರ್ 2025, 5:33 IST
<div class="paragraphs"><p>ಹುಬ್ಬಳ್ಳಿಯಲ್ಲಿ ಕಾರ್ಯಾಚರಿಸುವ ಕೆಲವು ಆಟೊಗಳಿಗೆ ಡಿಜಿಟಲ್ ಮೀಟರ್‌ಗಳಿಲ್ಲ, ಮತ್ತೆ ಕೆಲವಕ್ಕೆ ಮೀಟರ್ ಇದ್ದರೂ ಅವು ನಿಷ್ಕ್ರಿಯವಾಗಿವೆ <br></p></div>

ಹುಬ್ಬಳ್ಳಿಯಲ್ಲಿ ಕಾರ್ಯಾಚರಿಸುವ ಕೆಲವು ಆಟೊಗಳಿಗೆ ಡಿಜಿಟಲ್ ಮೀಟರ್‌ಗಳಿಲ್ಲ, ಮತ್ತೆ ಕೆಲವಕ್ಕೆ ಮೀಟರ್ ಇದ್ದರೂ ಅವು ನಿಷ್ಕ್ರಿಯವಾಗಿವೆ

   

ಪ್ರಜಾವಾಣಿ ಚಿತ್ರ: ಗುರು ಹಬೀಬ

ADVERTISEMENT

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿತ್ಯ ಹತ್ತಾರು ಸಾವಿರ ಜನರು ಓಡಾಟಕ್ಕೆ ಆಟೊಗಳನ್ನು ಅವಲಂಬಿಸಿದ್ದಾರೆ. ಆದರೆ, ಬಾಡಿಗೆ ದರಕ್ಕಾಗಿ ಚಾಲಕರೊಂದಿಗೆ ಚೌಕಾಸಿ ಮಾಡುವುದು ಅವರಿಗೆ ಕಿರಿಕಿರಿ ಉಂಟುಮಾಡುತ್ತಿದೆ.

ವಾಣಿಜ್ಯ ಕೇಂದ್ರವಾದ ಕಾರಣ ಹುಬ್ಬಳ್ಳಿಗೆ ನಿತ್ಯವೂ ಸಾವಿರಾರು ಜನರು ಹೊರ ಊರು–ಜಿಲ್ಲೆಗಳಿಂದ ಬರುತ್ತಾರೆ. ಅವರು ರೈಲು ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಇಳಿದು ಮತ್ತೊಂದು ಸ್ಥಳಕ್ಕೆ ಹೋಗಲು ಆಟೊಗಳನ್ನು ಆಶ್ರಯಿಸುವುದು ಅನಿವಾರ್ಯ. ಆದರೆ, ಆಟೊಗಳ ಬಾಡಿಗೆ ದರ ಕೇಳಿ, ಇವರ ಸಹವಾಸವೇ ಬೇಡ ಎನ್ನುವಂತಾಗುತ್ತದೆ.

ಹೊರಗಿನಿಂದ ಬಂದವರು ಎಂಬುದು ಗೊತ್ತಾಗುತ್ತಿದ್ದಂತೆ ಆಟೊದವರು ದುಪ್ಪಟ್ಟು ಬಾಡಿಗೆ ಕೇಳುತ್ತಾರೆ. ಪ್ರಯಾಣಿಕರ ತುರ್ತು ಅಗತ್ಯವನ್ನು ಅರಿತು, ಶೋಷಣೆ ಮಾಡುತ್ತಾರೆ. ಕೆಲವೊಮ್ಮೆ ಹೇಳಿದ ಜಾಗಕ್ಕೆ ಬರುವುದೇ ಇಲ್ಲ. ಆ ಸ್ಥಳಕ್ಕೆ ಯಾರೂ ಹೋಗುವುದಿಲ್ಲ, ವಾಪಸ್ ಬರುವಾಗ ಬಾಡಿಗೆ ಸಿಗುವುದಿಲ್ಲ ಎಂಬ ಕಾರಣ ನೀಡಿ ಹೆಚ್ಚಿನ ಹಣ ಕೊಟ್ಟಾದರೂ ಹೋಗುವ ಅನಿವಾರ್ಯವನ್ನು ಸೃಷ್ಟಿಸುತ್ತಾರೆ.

ಆಟೊ ಚಾಲಕರ ಈ ಆಟಾಟೋಪವನ್ನು ಹತೋಟಿಗೆ ತರಲು ಡಿಜಿಟಲ್ ಮೀಟರ್ ಅಳವಡಿಕೆಯೊಂದೇ ದಾರಿ. ಈ ನಿಟ್ಟಿನಲ್ಲಿ ಹತ್ತಾರು ವರ್ಷಗಳಿಂದ ಬೆರಳೆಣಿಕೆಯಷ್ಟು ಪ್ರಯತ್ನಗಳು ನಡೆದಿದ್ದರೂ ಆಟೊ ಚಾಲಕರು ಅದಕ್ಕೆ ವ್ಯವಸ್ಥಿತ ಅಸಹಕಾರ ತೋರಿ ಯಶಸ್ವಿಯಾಗಿದ್ದಾರೆ.

‘ಮೀಟರ್ ಅಳವಡಿಕೆ ಸಾಧ್ಯವಾದರೆ ಮೀಟರ್‌ನಲ್ಲಿ ತೋರಿಸಿದಷ್ಟು ಹಣ ಕೊಟ್ಟು ನಮಗೆ ಬೇಕಾದ ಸ್ಥಳಕ್ಕೆ ಹೋಗಬಹುದು. ಈಗ ಆಟೊ ಚಾಲಕರು ಹೇಳಿದ್ದೇ ದರ. ನಮಗೆ ಅನಿವಾರ್ಯವಾಗಿದೆ. ಅಧಿಕಾರಿಗಳು ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ವೆಂಕಟೇಶ ಉಪಾಧ್ಯ ಆಗ್ರಹಿಸಿದರು.

ಅರ್ಧದಷ್ಟು ಅಕ್ರಮ?: ಅವಳಿ ನಗರ ವ್ಯಾಪ್ತಿಯಲ್ಲಿ 25 ಸಾವಿರಕ್ಕೂ ಅಧಿಕ ಆಟೊಗಳು ಕಾರ್ಯನಿರ್ವಹಿಸುತ್ತಿವೆ ಎಂಬುದು ಆಟೊ ಚಾಲಕ, ಮಾಲೀಕರ ಸಂಘದ ಅಂದಾಜು. ಆದರೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಮಾಹಿತಿ ಪ್ರಕಾರ ಈ ಸಂಖ್ಯೆ 13 ಸಾವಿರ. ಅಂದರೆ 12 ಸಾವಿರದಷ್ಟು ಆಟೊಗಳು ನೋಂದಣಿ, ಸಮರ್ಪಕ ದಾಖಲೆ ಇಲ್ಲದೇ ಕಾರ್ಯನಿರ್ವಹಿಸುತ್ತಿವೆ ಅಥವಾ ಬೇರೆ ತಾಲ್ಲೂಕುಗಳಲ್ಲಿ ನೋಂದಣಿ ಆಗಿ, ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿವೆ. ಸಾರಿಗೆ ಇಲಾಖೆ ನಿಯಮದ ಪ್ರಕಾರ ಇವೆಲ್ಲ ಅಕ್ರಮ.

‘ಆಟೊ ಮಾಲೀಕರ ಸಂಘದ ಮನವಿಯಂತೆ ಕೆಲವು ವರ್ಷಗಳಿಂದ ಹೊಸ ಆಟೊಗಳ ನೋಂದಣಿಗೆ ಅವಕಾಶ ನೀಡುತ್ತಿಲ್ಲ. ಆದರೆ ಕೆಲವರು ನಿಯಮ ಮೀರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈವರೆಗೆ ನೂರಕ್ಕೂ ಹೆಚ್ಚು ಆಟೊಗಳನ್ನು ವಶಪಡಿಸಿಕೊಂಡು ಗುಜರಿಗೆ ಹಾಕಲಾಗಿದೆ. ಕೆಲವೊಮ್ಮೆ ಪ್ರಕರಣ ದಾಖಲಿಸಿದರೂ ಆಟೊಗಳನ್ನು ಅಲ್ಲೇ ಬಿಟ್ಟು ಹೋಗಿಬಿಡುತ್ತಾರೆ. ಅವುಗಳನ್ನು ಬಿಡಿಸಿಕೊಳ್ಳಲೂ ಬರುವುದಿಲ್ಲ. ಅಂಥವನ್ನು ವಿಲೇವಾರಿ ಮಾಡುವುದೇ ತಲೆನೋವಾಗುತ್ತದೆ’ ಎಂದು ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಕಾಂತ ಬಡಿಗೇರ ತಿಳಿಸಿದರು.

ಮೀಟರ್ ಅಳವಡಿಕೆ ಕಡ್ಡಾಯ ಎಂಬ ನಿಯಮವಿದ್ದರೂ ‘ಅವೈಜ್ಞಾನಿಕ ಬೆಲೆ ನಿಗದಿ’, ‘ಮೀಟರ್ ದುರಸ್ತಿಗೆ ಹೆಚ್ಚಿನ ದರ ಕೇಳುವುದು’ ಹೀಗೆ ವಿವಿಧ ಆರೋಪಗಳು ಮುನ್ನೆಲೆಗೆ ಬಂದು, ಮೀಟರ್ ಅಳವಡಿಕೆ ವಿಚಾರ ಹಿನ್ನೆಲೆಗೆ ಸರಿದಿದೆ.

ಹೆಚ್ಚಿನ ಬಾಡಿಗೆ ಕೇಳುವುದು ವಿಪರೀತ ಹೊಗೆ ಉಗುಳುವಂಥ ಆಟೊಗಳ ಫೋಟೊ ತೆಗೆದು ಸಾರ್ವಜನಿಕರು 94495 45299 ಸಂಖ್ಯೆಗೆ ವಾಟ್ಸ್‌ಆ್ಯಪ್ ಮಾಡಿದರೆ ನಾವು ಕ್ರಮ ಕೈಗೊಳ್ಳುತ್ತೇವೆ
‍ಶ್ರೀಕಾಂತ ಬಡಿಗೇರ ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿ
ಆರ್‌ಟಿಒ ನೇತೃತ್ವದಲ್ಲಿ ಸಂಚಾರ ಪೊಲೀಸ್ ಪಾಲಿಕೆಯವರನ್ನು ಸೇರಿಸಿ ಸಮಿತಿ ರಚಿಸಿದ್ದೇನೆ. ಆಟೊ ಮಾಲೀಕರೊಂದಿಗೆ ಸಭೆ ನಡೆಸಿ ಎಲ್ಲ ಸಮಸ್ಯೆಗಳನ್ನು ಚರ್ಚಿಸಿ ಶೀಘ್ರವೇ ಪರಿಹಾರ ಕಂಡುಕೊಳ್ಳಲು ಸೂಚಿಸಿದ್ದೇನೆ
ದಿವ್ಯಪ್ರಭು ಧಾರವಾಡ ಜಿಲ್ಲಾಧಿಕಾರಿ
ದಿವ್ಯಪ್ರಭು
‘ಹೊಣೆ ನಿಭಾಯಿಸದ ಆಡಳಿತ’
‘ಸರ್ಕಾರದವರು ಎಲ್ಲೆಂದರಲ್ಲಿ ರಸ್ತೆ ಅಗೆದು ಸಂಚಾರಕ್ಕೆ ಅಡ್ಡಿ ಮಾಡುತ್ತಲೇ ಇರುತ್ತಾರೆ. ಸ್ಮಾರ್ಟ್ ಸಿಟಿ ಯೋಜನೆ ಅಡಿ ಸುಸಜ್ಜಿತ ಆಟೊ ನಿಲ್ದಾಣಗಳನ್ನು ನಿರ್ಮಿಸಿಕೊಡಬೇಕಿತ್ತು. ಅದೂ ಕಾರ್ಯಗತವಾಗಿಲ್ಲ. ಸರಿಯಾಗಿ ಸೌಕರ್ಯ ಕೊಡದೆ ನಮ್ಮನ್ನು ಮಾತ್ರ ನಿಯಂತ್ರಿಸಲು ಬಯಸುತ್ತಾರೆ’ ಎಂದು ಉತ್ತರ ಕರ್ನಾಟಕ ಆಟೊ ರಿಕ್ಷಾ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠ‍ಪತಿ ಹೇಳಿದರು. ‘ಹಿಂದೊಮ್ಮೆ ಮೀಟರ್ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಲಾಗಿತ್ತು. ಆದರೆ ಆ ಮೀಟರ್‌ನ ಒಂದು ಸಣ್ಣ ತಂತಿ– ಕೇಬಲ್ ಕಿತ್ತು ಹೋದರೂ ₹50ರಲ್ಲಿ ಆಗುವ ದುರಸ್ತಿ ಕೆಲಸಕ್ಕೆ ₹300–₹400 ಕೇಳುತ್ತಾರೆ. ಹೀಗೆ ಸಾಕಷ್ಟು ಸಮಸ್ಯೆಗಳಿರುವ ಕಾರಣಕ್ಕೇ ಈ ಯೋಜನೆಗೆ ಸಮರ್ಪಕ ಬೆಂಬಲ ದೊರೆತಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.