ADVERTISEMENT

ಅಯ್ಯಪ್ಪ ಸ್ವಾಮಿ ಹಾಡಿನ ಸಿ.ಡಿ. ಬಿಡುಗಡೆ ಇಂದು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 14:22 IST
Last Updated 18 ಡಿಸೆಂಬರ್ 2020, 14:22 IST

ಹುಬ್ಬಳ್ಳಿ: ಇಲ್ಲಿನ ಶಬರಿ ನಗರದ ಅಯ್ಯಪ್ಪಸ್ವಾಮಿ ದೇವಸ್ಥಾನದ ಧರ್ಮಾಧಿಕಾರಿ ಮೋಹನ್‌ ಗುರುಸ್ವಾಮಿ ಅವರು ಹಾಡಿರುವ ‘ಅಂತರಂಗದ ಜ್ಯೋತಿ ಅಯ್ಯ‍ಪ್ಪ’ ಭಕ್ತಿಗೀತೆಗಳ ಸಿ.ಡಿ ಬಿಡುಗಡೆ ಶನಿವಾರ ರಾತ್ರಿ 7.30ಕ್ಕೆ ದೇವಸ್ಥಾನದಲ್ಲಿ ನಡೆಯಲಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೋಹನ್‌ ಗುರುಸ್ವಾಮಿ ‘ಮೂರುಸಾವಿರ ಮಠದ ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ ಸಿ.ಡಿ. ಬಿಡುಗಡೆ ಮಾಡುವರು. ಅಯ್ಯಪ್ಪಸ್ವಾಮಿಗೆ ಸಂಬಂಧಿಸಿದ 18 ಕ್ಯಾಸೆಟ್‌ಗಳನ್ನು ಈಗಾಗಲೇ ಹೊರ ತರಲಾಗಿದೆ. ಒಟ್ಟು 250ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದೇನೆ. ಕಾರ್ಯಕ್ರಮಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದರು.

‘ಕೋವಿಡ್‌ ಪರಿಣಾಮದಿಂದ ಅಯ್ಯಪ್ಪಸ್ವಾಮಿ ಮಾಲೆ ಧರಿಸುವವರ ಪ್ರಮಾಣ ಈ ಬಾರಿ ಬಹಳಷ್ಟು ಕಡಿಮೆಯಿದೆ. ಹೋದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಶೇ 5ರಷ್ಟು ಮಾತ್ರ ಭಕ್ತರು ಮಾಲೆ ಧರಿಸಿದ್ದಾರೆ. ಶಬರಿ ಮಲೈಯಲ್ಲಿ ಸ್ವಾಮಿ ದರ್ಶನ ಪಡೆಯಲು ಆನ್‌ಲೈನ್ ಮೂಲಕ ಮುಂಗಡ ಟಿಕೆಟ್‌ ನೋಂದಣಿ ಮಾಡುವ ವ್ಯವಸ್ಥೆಯಿದೆ. ಆದ್ದರಿಂದ ಬಹಳಷ್ಟು ಭಕ್ತರು ತಮ್ಮ ಸಮೀಪದ ದೇವಸ್ಥಾನಗಳಲ್ಲಿ ಸಂಕ್ರಾಂತಿ ಬಳಿಕ ಮಾಲೆ ತೆಗೆದು ಪೂಜೆ ಸಲ್ಲಿಸುವರು’ ಎಂದು ಅಖಿಲ ಕರ್ನಾಟಕ ಅಯ್ಯಪ್ಪಸ್ವಾಮಿ ಸೇವಾ ಸೈನ್ಯದ ಅಧ್ಯಕ್ಷರೂ ಆದ ಮೋಹನ್‌ ಗುರಸ್ವಾಮಿ ಹೇಳಿದರು.

ADVERTISEMENT

ಪ್ರಮುಖರಾದ ಬಸವರಾಜ ನೆವಿನೂರು, ಮಹೇಶ ದಾಬಡೆ, ಗಣೇಶ ದ್ಯಾವನಕೊಂಡ, ಯಲ್ಲಪ್ಪ ಬಾಗಲಕೋಟೆ, ಅಮಿತ್‌ ಮತ್ತು ಸೈಮಂಡ್‌ ಡೇವಿಡ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.