ಹುಬ್ಬಳ್ಳಿ: ‘ಗೋವಾ ರಾಜ್ಯದ ಒತ್ತಡಕ್ಕೆ ಮಣಿದು ಕೇಂದ್ರ ಪರಿಸರ ಇಲಾಖೆ ಕಳಸಾ ಬಂಡೂರಿ ಯೋಜನೆ ಜಾರಿಗೆ ತಡೆ ನೀಡುವ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡಿದೆ’ ಎಂದು ರೈತ ಸೇನಾ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಆರೋಪಿಸಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ‘ರಾಜಿ ಸಂಧಾನದ ಮೂಲಕ ಬಗೆಹರಿಸುವ ಎಲ್ಲ ಸಾಧ್ಯತೆಗಳಿದ್ದಾಗಲೂ ಪ್ರಧಾನಿ ನರೇಂದ್ರ ಮೋದಿ ಅವರು ಇಚ್ಚಾಶಕ್ತಿ ತೋರಲಿಲ್ಲ. ನ್ಯಾಯಮಂಡಳಿ ನೀರು ಹಂಚಿಕೆ ಮಾಡಿದ ನಂತರವೂ ಗೋವಾ ಪರ ಒಲವು ತೋರಿಸುತ್ತಿರುವು ಯಾವ ನ್ಯಾಯ? ಅವರು ದೇಶಕ್ಕೆ ಪ್ರಧಾನಿಯೇ? ಗೋವಾಕ್ಕೆ ಪ್ರಧಾನಿಯೇ’ ಎಂದು ಪ್ರಶ್ನಿಸಿದ್ದಾರೆ.
‘ಕೇಂದ್ರ ಸರ್ಕಾರವು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದೆ. ರಾಜ್ಯದ ಜನಪ್ರತಿನಿಧಿಗಳು ರಾಜ್ಯದ ವಿರೋಧಿಗಳಾಗಿದ್ದಾರೆ. ಗೋವಾರ ರಾಜ್ಯದ ಜನಪ್ರತಿನಿಧಿಗಳು ಅವರ ರಕ್ಷಣೆ ಮಾಡುತ್ತಿದ್ದಾರೆ. ರಾಜ್ಯದ ರಾಜ್ಯಪಾಲರು ಮನವಿ ಸಲ್ಲಿಸಲು ಹೋದರೆ, ಮನವಿ ಸ್ವೀಕರಿಸಿದೆ ವಾಪಸ್ ಕಳುಹಿಸಿದ್ದರು’ ಎಂದು ದೂರಿದರು.
‘ರಾಜ್ಯದ ಸಂಸದರು, ರಾಜ್ಯ ಸರ್ಕಾರಕ್ಕೆ ಯೋಜನೆ ಜಾರಿ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ. ರೈತರು ಜಾಗೃತರಾಗಿ ಒಂದಾಗಬೇಕು. ನೀರು ತರುವವರೆಗೂ ಹೋರಾಟ ಮುಂದುವರೆಯಲಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.