ADVERTISEMENT

ಬ್ಯಾಕ್‌ಲಾಗ್‌ ಹುದ್ದೆಗಳು ಭರ್ತಿಯಾಗಲಿ: ಶಾಸಕ ಪ್ರಸಾದ ಅಬ್ಬಯ್ಯ

ಅಖಿಲ ಭಾರತ ಬ್ಯಾಂಕ್ ಆಫ್ ಇಂಡಿಯಾ ಎಸ್‌ಸಿ, ಎಸ್‌ಟಿ, ಒಬಿಸಿ ನೌಕರರ ಸಂಘದ ಸಾಮಾನ್ಯಸಭೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 4:00 IST
Last Updated 1 ಮಾರ್ಚ್ 2026, 4:00 IST
ಹುಬ್ಬಳ್ಳಿಯಲ್ಲಿ ಶನಿವಾರ ಅಖಿಲ ಭಾರತ ಬ್ಯಾಂಕ್ ಆಫ್ ಇಂಡಿಯಾ ಎಸ್‌ಸಿ, ಎಸ್‌ಟಿ, ಒಬಿಸಿ ನೌಕರರ ಸಂಘದ ರಾಜ್ಯ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ತ್ರೈವಾರ್ಷಿಕ ಮಹಾಸಭೆ ಹಾಗೂ ಸಾಮಾನ್ಯಸಭೆಯಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿದರು
ಹುಬ್ಬಳ್ಳಿಯಲ್ಲಿ ಶನಿವಾರ ಅಖಿಲ ಭಾರತ ಬ್ಯಾಂಕ್ ಆಫ್ ಇಂಡಿಯಾ ಎಸ್‌ಸಿ, ಎಸ್‌ಟಿ, ಒಬಿಸಿ ನೌಕರರ ಸಂಘದ ರಾಜ್ಯ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ತ್ರೈವಾರ್ಷಿಕ ಮಹಾಸಭೆ ಹಾಗೂ ಸಾಮಾನ್ಯಸಭೆಯಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿದರು   

ಹುಬ್ಬಳ್ಳಿ: ‘ಸರ್ಕಾರದ ವಿವಿಧ ಇಲಾಖೆಗಳಲ್ಲಿ ಬ್ಯಾಕ್‌ಲಾಗ್‌ ಹುದ್ದೆಗಳು ಖಾಲಿಯಿವೆ. ಎಸ್‌ಸಿ, ಎಸ್‌ಟಿ, ಒಬಿಸಿ ನೌಕರರಿಗೆ ಸೇವಾ ಹಿರಿತನ, ಕಾರ್ಯಕ್ಷಮತೆ ಆಧರಿಸಿ ಮುಂಬಡ್ತಿ, ಸೌಲಭ್ಯಗಳೂ ಸಿಗುತ್ತಿಲ್ಲ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಅಖಿಲ ಭಾರತ ಬ್ಯಾಂಕ್ ಆಫ್ ಇಂಡಿಯಾ ಎಸ್‌ಸಿ, ಎಸ್‌ಟಿ, ಒಬಿಸಿ ನೌಕರರ ಸಂಘದ ರಾಜ್ಯ ಘಟಕದಿಂದ ನಡೆದ ತ್ರೈವಾರ್ಷಿಕ ಮಹಾಸಭೆ ಮತ್ತು ಸಾಮಾನ್ಯಸಭೆಯಲ್ಲಿ ಮಾತನಾಡಿದ ಅವರು, ‘ಸಂವಿಧಾನ ಜಾರಿಯಾಗಿ 75 ವರ್ಷಗಳಾದರೂ ಇಂದಿಗೂ ಸಮಾಜದಲ್ಲಿ ಜಾತಿವ್ಯವಸ್ಥೆ ತಾಂಡವವಾಡುತ್ತಿದೆ. ಪರಿಶಿಷ್ಟರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ’ ಎಂದರು.

‘ಶಾಲಾ ಹಂತದಲ್ಲಿ ಇರುವಾಗಲೇ ಮಕ್ಕಳ ಮನಸ್ಸಿನಲ್ಲಿ ಜಾತಿವ್ಯವಸ್ಥೆಯ ಬೀಜ ಬಿತ್ತಲಾಗುತ್ತಿದೆ. ಇದಕ್ಕೆ ನಮ್ಮ ಸಾಮಾಜಿಕ ಮನಸ್ಥಿತಿಯೂ ಕಾರಣ. ಇದರಿಂದ ಹೊರಬರಲು ಶಿಕ್ಷಣವೊಂದೇ ಮಾರ್ಗ. ಶೋಷಿತ ಸಮುದಾಯದವರು ಮಕ್ಕಳಿಗೆ ಕಡ್ಡಾಯವಾಗಿ ಉನ್ನತ ಶಿಕ್ಷಣ ಕೊಡಿಸಬೇಕು’ ಎಂದರು.

ADVERTISEMENT

‘ಸಾಮಾಜಿಕ ಸಮಾನತೆಗಾಗಿ ಸಂವಿಧಾನದಲ್ಲಿ ಎಲ್ಲಾ ಸಮುದಾಯ, ವರ್ಗದವರಿಗೂ ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ. ಮೀಸಲಾತಿ ಸೌಲಭ್ಯ ಅಗತ್ಯವೂ ಇದೆ. ಆದರೆ, ಕೆಲವರು ಪರಿಶಿಷ್ಟ ಸಮುದಾಯಕ್ಕೆ ನೀಡಿದ ಮೀಸಲಾತಿಯನ್ನು ಇಂದಿಗೂ ಪ್ರಶ್ನಿಸುತ್ತಿರುವುದು ಬೇಸರದ ಸಂಗತಿ’ ಎಂದರು.   

‘ದೇಶದಲ್ಲಿ ಸಮಾನತೆ ಬರಬೇಕಾದರೆ ಸರ್ವರಿಗೂ ಸಮಪಾಲು ಸಿಗಬೇಕಿದೆ. ಶೋಷಿತ ಸಮುದಾಯವೂ ಮುಖ್ಯವಾಹಿನಿಗೆ ಬರಬೇಕಿದೆ. ಆದರೆ, ಇದಾಗುತ್ತಿಲ್ಲ. ದಿನಬೆಳಗಾದರೆ ಶೋಷಿತರ ಮೇಲೆ ಹಲ್ಲೆ, ದೌರ್ಜನ್ಯ ಹಾಗೂ ಶೋಷಣೆಯಂತಹ ಪ್ರಕರಣಗಳು ನಡೆಯುತ್ತಲೇ ಇವೆ. ಇದಕ್ಕೆ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿನ ನೌಕರರು ಸಹ ಹೊರತಾಗಿಲ್ಲ‘ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಸಂಘದ ರಾಷ್ಟ್ರೀಯ ಘಟಕದ ಅಧ್ಯಕ್ಷ ರಂಜನ್‌ ಮಹಾದೇವ ಖಾಪರ್ಡೆ ಅವರು, ‘ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಎಸ್‌ಸಿ, ಎಸ್‌ಟಿ, ಒಬಿಸಿ ನೌಕರರಿಗೆ ಅವರ ಜೇಷ್ಠತೆ, ಕಾರ್ಯಕ್ಷಮತೆಯ ಆಧಾರದ ಮೇಲೆ ಸಂವಿಧಾನದ ಅನ್ವಯ ಮುಂಬಡ್ತಿ ಹಾಗೂ ಸೇವಾ ಸೌಲಭ್ಯಗಳು ದೊರೆಯಬೇಕು’ ಎಂದರು.

ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜೆ.ಕೆ.ಕಾಂಬಳೆ, ಅನಿತಾ ರಮೇಶ ನಾಯರ್, ಚಂದ್ರಕಾಂತ ಬಿ.ಜಿ., ತಾರಿಣಿ ಚರಣ್‌ ಸಾಹು, ರಾಜ್ಯ ಘಟಕದ ಅಧ್ಯಕ್ಷ ಬಿ.ಕೃಷ್ಣ, ಪ್ರಧಾನ ಕಾರ್ಯದರ್ಶಿ ಬಿ.ಪರಶುರಾಮ, ಯೋಗಿತಾ ಕೆ.ಎಸ್., ಮಹಾಲಕ್ಷ್ಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.