ಬಕ್ರೀದ್ ಅಂಗವಾಗಿ ಹುಬ್ಬಳ್ಳಿಯ ನ್ಯೂ ಮ್ಯಾದಾರ ಓಣಿಯಲ್ಲಿ ಮುಸ್ಲಿಮರು ಟಗರುಗಳನ್ನು ಖರೀದಿಸಿ ಕೊಂಡೊಯ್ದರು
ಪ್ರಜಾವಾಣಿ ಚಿತ್ರಗಳು: ಗೋವಿಂದರಾಜ ಜವಳಿ
ಹುಬ್ಬಳ್ಳಿ: ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್ ಅನ್ನು ನಗರದಲ್ಲಿ ಸೋಮವಾರ ಶ್ರದ್ಧಾ–ಭಕ್ತಿಯಿಂದ ಆಚರಿಸಲು ಮುಸ್ಲಿಮರು ಸಜ್ಜಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಭಾನುವಾರ ಇಲ್ಲಿನ ಚನ್ನಮ್ಮ ವೃತ್ತದ ಈದ್ಗಾ ಮೈದಾನ ಹಾಗೂ ಮಸೀದಿಗಳನ್ನು ಸ್ವಚ್ಛಗೊಳಿಸಿ, ಸೋಮವಾರ ಬೆಳಗಿನ ಸಾಮೂಹಿಕ ಪ್ರಾರ್ಥನೆಗೆ ವ್ಯವಸ್ಥೆ ಮಾಡಲಾಗಿದೆ.
ಶಾಂತಿ ಮತ್ತು ಸುವ್ಯವಸ್ಥೆಯಿಂದ ಹಬ್ಬ ಆಚರಣೆಗೆ ಹಾಗೂ ಅಹಿತಕಾರಿ ಘಟನೆಗಳು ನಡೆಯದಂತೆ ಈದ್ಗಾ ಮೈದಾನ, ಮಸೀದಿಗಳ ಸುತ್ತಮುತ್ತ ಹಾಗೂ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಪ್ರಾಣಿ ಬಲಿ (ಕುರ್ಬಾನಿ) ಬಕ್ರೀದ್ ಜೀವಾಳ. ಕುರ್ಬಾನಿ ಎಂದರೆ ಅತ್ಯಾಪ್ತ ವಸ್ತುವನ್ನು ಅಲ್ಲಾಹುವಿಗೆ ಸಮರ್ಪಿಸುವುದು ಎಂದರ್ಥ. ಹೀಗಾಗಿ ಹಿಂದಿನಿಂದಲೂ ಕುರಿ, ಟಗರು, ಮೇಕೆ, ಹೋತ, ಬಲಿ ನೀಡಿ ಬಕ್ರೀದ್ ಆಚರಿಸಲಾಗುತ್ತಿದೆ. ಈ ಮೂಲಕ ಅಲ್ಲಾಹುವಿನ ಕೃಪೆ, ಅನುಗ್ರಹಕ್ಕೆ ಪಾತ್ರರಾಗುವುದು ಈ ಆಚರಣೆಯ ಹಿಂದಿನ ಉದ್ದೇಶ.
‘ಪ್ರವಾದಿಯವರ ಆಣತಿಯಂತೆ ಬಕ್ರೀದ್ ಆಚರಣೆ ವೇಳೆ ಬಲಿದಾನ ನೀಡುವುದು, ಬಡವರಿಗೆ ಹಬ್ಬದ ಊಟ ಕೊಡುವುದು ಆಚರಣೆಯ ಪ್ರಮುಖ ಅಂಶ. ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ಬಳಿಕ ಕಬರಸ್ತಾನಕ್ಕೆ ತೆರಳಿ ಪೂರ್ವಜರನ್ನು ಸ್ಮರಿಸಲಾಗುತ್ತದೆ. ಸ್ಥಿತಿವಂತರು ಮನೆಯಲ್ಲಿ ಕುರಿ, ಮೇಕೆ ರೂಪದಲ್ಲಿ ಬಲಿದಾನ ಅರ್ಪಿಸುತ್ತಾರೆ. ಅದನ್ನು ಮೂರು ಪಾಲು ಮಾಡಿ ಬಡವರಿಗೆ, ನೆರೆಹೊರೆಯವರಿಗೆ ಹಂಚಿಕೆ ಮಾಡಲಾಗುತ್ತದೆ’ ಎನ್ನುತ್ತಾರೆ ಮುಸ್ಲಿಂ ಸಮುದಾಯದ ನಾಯಕರಾದ ಅಲ್ತಾಫ ಕಿತ್ತೂರ.
‘ಬಲಿ ಕರ್ಮ (ಕುರ್ಬಾನಿ) ನಿರ್ವಹಿಸಲು ಮೂರ್ನಾಲ್ಕು ತಿಂಗಳ ಮೊದಲೇ ಬಲಿ ಕೊಡಲು ಮೇಕೆ, ಆಡು, ಹೋತ, ಕುರಿ ಖರೀದಿಸಿ, ಅದನ್ನು ಸಾಕಿ, ಪ್ರೀತಿ, ವಾತ್ಸಲ್ಯ ಇರುವ ಹಂತದಲ್ಲಿ ಅದನ್ನು ಬಲಿ ಕೊಡುವುದು ಕುರ್ಬಾನಿಯ ಉತ್ತಮ ವಿಧಾನ. ಆದರೆ ಬಹುತೇಕರು, ಬಕ್ರೀದ್‌ಗಿಂತ ಎರಡು–ಮೂರು ದಿನ ಮೊದಲು ಸಾಕುಪ್ರಾಣಿಗಳನ್ನು ಖರೀದಿಸಿ ಬಲಿ ನೀಡುತ್ತಾರೆ’ ಎನ್ನುತ್ತಾರೆ ಸದ್ದಾಂ ನದಾಫ.
ಆಚರಣೆ ಹೇಗಿರಲಿದೆ?
* ನಸುಕಿನ ಜಾವ ಬೇಗ ಎದ್ದು ನಮಾಜ್ ಮಾಡುವುದು* ಹೊಸ ಬಟ್ಟೆ ತೊಟ್ಟು, ವಿಶ್ವ ಶಾಂತಿ, ಸೌಹಾರ್ದಕ್ಕಾಗಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ* ಪರಸ್ಪರ ಹಸ್ತಲಾಘವ, ಆಲಿಂಗನದ ಮೂಲಕ ಶುಭಾಶಯ ವಿನಿಮಯ* ಕಬರಸ್ತಾನ್‌ಗೆ ತೆರಳಿ ಮೃತರಿಗಾಗಿ ದುವಾ ಮಾಡುವುದು* ಕುರ್ಬಾನಿ ನಿರ್ವಹಿಸಿ, ಬಡವರು, ನೆರೆಹೊರೆಯವರು, ಸಂಬಂಧಿಕರಿಗೆ ಮಾಂಸ ಹಂಚುವುದು* ಮನೆಯಲ್ಲಿ ಕುಟುಂಬಸ್ಥರೊಂದಿಗೆ ಹಬ್ಬದ ಊಟ ಸೇವನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.