
ಹುಬ್ಬಳ್ಳಿ: ‘ಅಖಿಲ ಭಾರತ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಮುದಾಯಗಳ ನೌಕರರ ಒಕ್ಕೂಟ (ಬಾಮ್‌ಸೆಫ್) ಮತ್ತು ಯುನಿಟಿ ಆಫ್ ಮೂಲನಿವಾಸಿ ಸಮಾಜದಿಂದ ಇದೇ ಜೂನ್ 7ರಿಂದ 9ರವರೆಗೂ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ 40ನೇ ರಾಷ್ಟ್ರೀಯ ಅಧಿವೇಶನ ಏರ್ಪಡಿಸಲಾಗಿದೆ‘ ಎಂದು ಬಾಮ್‌ಸೆಫ್ ರಾಷ್ಟ್ರೀಯ ಘಟಕದ ಉಪಾಧ್ಯಕ್ಷ ಸುಭಾಷ ಶೀಲವಂತ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಹು ಮಹಾರಾಜರ 150ನೇ ಜಯಂತ್ಯುತ್ಸವದ ಅಂಗವಾಗಿ ಈ ಅಧಿವೇಶನ ಆಯೋಜಿಸಿದ್ದು, ತೀರ್ಥಹಳ್ಳಿಯ ಆರ್ಯ ಈಡಿಗ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದೆ’ ಎಂದರು.
ಚಲನಚಿತ್ರ ನಟ ಚೇತನ ಅಹಿಂಸಾ ಅವರು 7ರಂದು ಅಧಿವೇಶನ ಉದ್ಘಾಟಿಸುವರು. ಬಾಮ್‌ಸೆಫ್ ರಾಷ್ಟ್ರೀಯ ಘಟಕದ ಅಧ್ಯಕ್ಷ ಕಮಲಾಕಾಂತ ಅಶೋಕ ಕಾಳೆ ಪ್ರಾಸ್ತಾವಿಕವಾಗಿ ಮಾತನಾಡುವರು. ನಿವೃತ್ತ ಐಎಎಸ್ ಅಧಿಕಾರಿ ಕವಿತಾ ಸಿಂಗ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. 8ರಂದು ನಡೆಯುವ ಅಧಿವೇಶನದಲ್ಲಿ ಹೈದರಾಬಾದ್ ಹೈಕೋರ್ಟ್ ವಕೀಲ ಶ್ರೀಕಾಂತಾ ಚಿಂತಾಲಾ, ಮಹಾರಾಷ್ಟ್ರದ ರಾಜೇಂದ್ರ ಗಾಯಕವಾಡ, ಬಾಮ್‌ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಬಾಬುರಾವ್ ಚಿಮಕೋಡ, ಕೋಲ್ಕತ್ತಾದ ವಿಜ್ಞಾನಿ ಸಂಜಯ ಗಜಬೈ, ಬೆಳಗಾವಿಯ ಪತ್ರಕರ್ತ ಜಕ್ಬಾಲ್ ಜಕಾತಿ, ಡಿಆರ್‌ಡಿಓ ಉಪವಿಜ್ಞಾನಿ ರಾಜೇಂದ್ರ ಯಾದವ್, ಕಲಬುರಗಿಯ ಮಾರುತಿ ಗಂಜಗಿರಿ ಅವರು ’ದೇಶದ ಏಕತೆ ಮತ್ತು ವ್ಯವಸ್ಥೆಯ ಪರಿವರ್ತನೆಯಲ್ಲಿ ಆಳುವ ವರ್ಗದಿಂದ ಆಪಾಯವಿದೆಯೇ’ ಎನ್ನುವ ಕುರಿತು ವಿಷಯ ಮಂಡಿಸುವರು. ಸಂಜೆ 7ರವರೆಗೂ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.
9ರಂದು ‘ವ್ಯವಸ್ಥೆಯ ಪರಿವರ್ತನೆಯಲ್ಲಿ ಸಂಘಟನೆಯ ಉದ್ದೇಶಗಳು’ ವಿಷಯದ ಮಂಡನೆ ಹಾಗೂ ಚರ್ಚೆಗಳು ನಡೆಯಲಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.