ADVERTISEMENT

ಕಾಂಗ್ರೆಸ್‌ ಪಕ್ಷ ನಿಷೇಧಿಸಿ: ನಳಿನ್‌ ಕುಮಾರ್ ಕಟೀಲ್

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 2:38 IST
Last Updated 30 ಸೆಪ್ಟೆಂಬರ್ 2022, 2:38 IST
ನಳಿನ್‌ಕುಮಾರ್ ಕಟೀಲ್ 
ನಳಿನ್‌ಕುಮಾರ್ ಕಟೀಲ್    

ಹುಬ್ಬಳ್ಳಿ: ದೇಶದಲ್ಲಿ ಭಯೋತ್ಪಾದನೆ, ನಕ್ಸಲ್‌ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಕಾಂಗ್ರೆಸ್‌ ಅನ್ನು ನಿಷೇಧ ಮಾಡಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಆಗ್ರಹಿಸಿದರು.

ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರಕಾಂಗ್ರೆಸ್‌ ಅನ್ನು ವಿಸರ್ಜನೆ ಮಾಡಬೇಕು ಎಂದು ಗಾಂಧೀಜಿ ಹೇಳಿದ್ದರು. ಭಯೋತ್ಪಾದನೆಗೆ ಬೆಂಗಾವಲಾಗಿ ನಿಂತಿರುವುದಲ್ಲದೇ, ದೇಶ, ಧರ್ಮ ಹಾಗೂ ಹಿಂದೂ- ಮುಸ್ಲಿಮರನ್ನು ಒಡೆದಿರುವುದು ಕಾಂಗ್ರೆಸ್‌ ಎಂದು ಹೇಳಿದರು.

‘ಪಿಎಫ್‌ಐ ನಿಷೇಧ ಮಾಡಿರುವುದನ್ನು ಕಾಂಗ್ರೆಸ್‌ನ ಕೆಲವರು ವಿರೋಧಿಸುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕು. ಹಿಂದೂಗಳನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು’ ಎಂದರು.

‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಪಿಎಫ್‌ಐ, ಕೆಎಫ್‌ಡಿ ಸಂಘಟನೆಗಳ 2 ಸಾವಿರ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ವಾಪಸ್‌ ಪಡೆದರು. ಅದೇ ಮತಾಂಧ ಶಕ್ತಿಗಳುವಿಧ್ವಂಸಕ ಕೃತ್ಯಗಳಲ್ಲಿ ತೊಡಗಿವೆ’ ಎಂದು ಹೇಳಿದರು.

‘ರಾಹುಲ್‌ ಗಾಂಧಿ ಅವರ ಭಾರತ ಜೋಡೊ ಯಾತ್ರೆ ಗುಂಡ್ಲುಪೇಟೆ ಮೂಲಕ ರಾಜ್ಯ ಪ್ರವೇಶಿಸುತ್ತಿದೆ. ಸಿದ್ದರಾಮಯ್ಯ ಅವರು ಟಿಪ್ಪು ಜಯಂತಿ ಆಚರಿಸಿ ಸಮಾಜವನ್ನು ಒಡೆದರು. ರಾಜ್ಯವನ್ನು ಲೂಟಿ ಮಾಡಿ ತಿಹಾರ್‌ ಜೈಲಿಗೆ ಹೋಗಿ ಬಂದಿರುವ, ಈಗಲೂ ವಿಚಾರಣೆ ಎದುರಿಸುತ್ತಿರುವ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುವ ಮೂಲಕ ರಾಜ್ಯಕ್ಕೆ ಯಾವ ಸಂದೇಶ ನೀಡುತ್ತೀರಿ’ ಎಂದು ರಾಹುಲ್‌ ಗಾಂಧಿ ಅವರನ್ನು ಪ್ರಶ್ನಿಸಿದರು.

ಪಾಕಿಸ್ತಾನ ಜಿಂದಾಬಾದ್‌ ಎಂದು ಘೋಷಣೆ ಕೂಗಿದ್ದ ಯುವತಿಯನ್ನು ರಾಹುಲ್‌ ಅಪ್ಪಿದ್ದರು. ಸಿದ್ದರಾಮಯ್ಯ ಅವರು ವಿದ್ವಂಸಕ ಸಂಘಟನೆಗಳಿಗೆ ಬೆಂಬಲ ನೀಡಿದ್ದರು. ಅದೇ ರೀತಿ ನೀವು ರಾಷ್ಟ್ರವಿರೋಧಿಗಳಿಗೆ ಬೆಂಬಲ ನೀಡುತ್ತೀರಾ ಎಂದು ಪ್ರಶ್ನಿಸಿದರು.

‘ರಾಹುಲ್‌ ಗಾಂಧಿ ಪಾದಯಾತ್ರೆ ಮಾಡುವ ಚತುಷ್ಪಥ ಹೆದ್ದಾರಿಗಳನ್ನು ಅಟಲ್‌ ಬಿಹಾರಿ ವಾಜಪೇಯಿ ಅವರು ನಿರ್ಮಿಸಿದ್ದಾರೆ. ನೀವು ಅವುಗಳಿಗೆ ನಮಸ್ಕರಿಸಿ ಪಾದಯಾತ್ರೆ ಆರಂಭಿಸಬೇಕು. ನಿಮ್ಮ, ತಾತ, ಅಜ್ಜಿ, ಅಪ್ಪ, ಮನಮೋಹನ್ ಸಿಂಗ್‌ ಅವರ ಅವಧಿಯಲ್ಲಿ ರಸ್ತೆಗಳನ್ನು ನಿರ್ಮಿಸಿಲ್ಲ. ನೆಹರೂ ಕಾಲದಲ್ಲಿ ಆರಂಭವಾದ ದೇಶ ವಿಭಜನೆಯ ಶಾಪದ ಪರಿಹಾರಕ್ಕಾಗಿ ಈಗ ಪಾದಯಾತ್ರೆ ಮಾಡಲಾಗುತ್ತಿದೆ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.