ಧಾರವಾಡ: ‘ಬಯಲಾಟದಂತಹ ಕಲೆಯನ್ನು ಅತಿ ಎಚ್ಚರದಿಂದ ಕಾಪಿಟ್ಟುಕೊಳ್ಳಬೇಕು. ಮುಂದುವರಿಸಬೇಕು ಮತ್ತು ಬೆಳೆಸಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಸಲಹೆ ನೀಡಿದರು.
ನಗರದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಬಾಗಲಕೋಟೆಯ ಕರ್ನಾಟಕ ಬಯಲಾಟ ಅಕಾಡೆಮಿ ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ಮಂಗಳವಾರ ನಡೆದ ‘ಬಯಲಾಟ: ಹೊಸ ಸಾಧ್ಯತೆಗಳು’ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
‘ಇಂತಹ ಕಲೆಗಳಿಂದ ‘ಮಹಾಭಾರತ’, ‘ರಾಮಾಯಣ’ದಂತಹ ಮಹಾಕತೆಗಳು ಜನಸಂಸ್ಕೃತಿಯಲ್ಲಿ ಪ್ರವೇಶಿಸಿ ಮರುಸೃಷ್ಟಿಯಾಗಿವೆ. ಈ ಮರುಸೃಷ್ಟಿಗೊಳ್ಳುವ ಬಗೆಯಲ್ಲಿ ಭಾರತೀಯ ಸಂಸ್ಕೃತಿಯ ಸೂಕ್ಷ್ಮಗಳು ಇವೆ. ಈ ಕಲೆಗಳು ಬೇಕು. ಮಾತಿನಲ್ಲೇ ಪ್ರೇಕ್ಷಕರನ್ನು ಹಿಡಿದಿಡುವ ಶಕ್ತಿ ಕಲೆಗೆ ಇದೆ’ ಎಂದು ವಿವರಿಸಿದರು.
ಕಲೆಗಳು ಇಲ್ಲದಿದ್ದರೆ ಭಾರತೀಯ ಪರಂಪರೆ ಅರ್ಥವಾಗುತ್ತಿರಲಿಲ್ಲ. ಭಾರತೀಯ ಪುರಾಣಗಳು ಗೊತ್ತಾಗಿದ್ದೇ ಇವುಗಳಿಂದ.ಪುರುಷೋತ್ತಮ ಬಿಳಿಮಲೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
‘ಬಯಲಾಟ ಕಲೆಯ ಮೂಲಗುಣ ನಾಶವಾಗದಂತೆ ವೇಷಭೂಷಣದಲ್ಲಿ ಸ್ವಲ್ಪ ಪರಿಷ್ಕರಣೆ ಮಾಡಿಕೊಳ್ಳಬಹುದು. ಹಾಡುಗಾರಿಕೆಗೆ ಏಳು ಕಲಾವಿದರನ್ನು ಬಳಸಿಕೊಳ್ಳುವುದನ್ನು ಹಾಗೆಯೇ ಉಳಿಸಿಕೊಳ್ಳಬೇಕು. ಹಿಂದೂಸ್ತಾನಿ ಗಾಯಕರು ಬಯಲಾಟದವರಿಗೆ ಮಾರ್ಗದರ್ಶನ ನೀಡಬೇಕು. ಅರ್ಥಗಾರಿಕೆ ಸರಳಗೊಳಿಸಬೇಕು’ ಎಂದು ಸಲಹೆ ನೀಡಿದರು.
ಹಿಂದೂಸ್ಥಾನಿ ಗಾಯಕ ಪಂಡಿತ ಎಂ.ವೆಂಕಟೇಶಕುಮಾರ ಮಾತನಾಡಿದರು. ಬಯಲಾಟ ಅಕಾಡೆಮಿ ಅಧ್ಯಕ್ಷ ಕೆ.ಆರ್.ದುರ್ಗಾದಾಸ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ವಿಶ್ವೇಶ್ವರಿ ಹಿರೇಮಠ ಉಪಸ್ಥಿತರಿದ್ದರು.
ಯುವಜನರ ಆಕರ್ಷಿಸಲು ಸಲಹೆ
‘ಬಯಲಾಟ ಸಣ್ಣಾಟ ದೊಡ್ಡಾಟದಂತಹ ಕಲಾ ಪರಂಪರೆಗಳು ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಟ್ಟಿವೆ. ಜನರಲ್ಲಿ ಮೌಲ್ಯ ಪ್ರಜ್ಞೆ ಬಿತ್ತಿವೆ’ ಎಂದು ಆಕಾಶವಾಣಿ ನಿವೃತ್ತ ನಿರ್ದೇಶಕ ಬಸವರಾಜ ಸಾದರ ಹೇಳಿದರು.
‘ಬಯಲಾಟ ಕಲೆಯ ಕಡೆಗೆ ಯುವಜನರನ್ನು ಆಕರ್ಷಿಸಬೇಕು. ಅವರಿಗೆ ಕಲೆ ಕಲಿಸಬೇಕು. ಕಲೆಯ ಮೂಲವಸ್ತು ಉಳಿಸಿಕೊಂಡು ಸಮಯ ಸಂಕ್ಷೇಪಗೊಳಿಸಿ ಇಡೀ ವಸ್ತುವನ್ನು ಕಟ್ಟಿಕೊಡಬೇಕು. ಯೂಟ್ಯೂಬ್ ಮಾಧ್ಯಮ ಬಳಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಯೋಚಿಸಬೇಕು’ ಎಂದು ಸಲಹೆ ನೀಡಿದರು.
‘ಈ ಕಲಾ ಪ್ರಕಾರದಲ್ಲಿ ಹೊಸಗನ್ನಡ ಸಾಹಿತ್ಯದ ಕತೆ ಪ್ರಬಂಧಗಳನ್ನು ಅಳವಡಿಸುವುದು ಜನಪದ ಕಲೆ ಪ್ರದರ್ಶನದ ರಿಯಾಲಿಟಿ ಷೋ ಆಯೋಜಿಸುವ ಹೊಸ ಸಾಧ್ಯತೆಗಳ ಬಗ್ಗೆ ಯೋಚಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.