ಹುಬ್ಬಳ್ಳಿ: ನಗರದ ಬೈರಿದೇವರಕೊಪ್ಪದಲ್ಲಿ ಐದು ಎಕರೆಯಲ್ಲಿ ನಿರ್ಮಿಸಿರುವ ಏಷ್ಯಾದ ಅತಿದೊಡ್ಡ ಭಗವದ್ಗೀತಾ ಜ್ಞಾನಲೋಕ ಮ್ಯೂಸಿಯಂ ಲೋಕಾರ್ಪಣೆ ಕಾರ್ಯಕ್ರಮ ಮೇ 15ರಂದು ಸಂಜೆ 4ಕ್ಕೆ ಜರುಗಲಿದೆ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ನಿರ್ಮಲಾ ಬೆಹೆನ್‌ಜಿ ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮ್ಯೂಸಿಯಂ ಲೋಕಾರ್ಪಣೆ ಮಾಡಲಿದ್ದಾರೆ. ಭಗವದ್ಗೀತಾ ಜ್ಞಾನ ಕಲಾಲೋಕವನ್ನು ಶಾಸಕ ಬಿ.ಎಸ್. ಯಡಿಯೂರಪ್ಪ, ಭಗವದ್ಗೀತಾ ಜ್ಞಾನ ದೇವಲೋಕವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೌಂಟು ಅಬುವಿನಲ್ಲಿರುವ ಬ್ರಹ್ಮಕುಮಾರಿಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ರಾಜಯೋಗಿ ಬ್ರ.ಕು. ಬೃಜ್‌ಮೋಹನ್ ಭಾಯಿಜಿ ಮತ್ತು ಬ್ರ.ಕು. ಸಂತೋಷ ದೀದೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವರಾದ ಹಾಲಪ್ಪ ಆಚಾರ್, ಶಂಕರಪಾಟೀಲ ಮುನೇನಕೊಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಜಗದೀಶ ಶಟ್ಟರ್, ಎಚ್.ಕೆ. ಪಾಟೀಲ, ಸೋಮಶೇಖರ ರೆಡ್ಡಿ, ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಅಮೃತ ದೇಸಾಯಿ, ಪ್ರದೀಪ ಶೆಟ್ಟರ್ ಹಾಗೂ ಬ್ರಹ್ಮಕುಮಾರಿ ಕೇಂದ್ರ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಮ್ಯೂಸಿಯಂನಲ್ಲಿ 114 ಕೋಣೆಗಳಿದ್ದು, ಅವುಗಳಲ್ಲಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಭಗವದ್ಗೀತೆಯ ಶ್ಲೋಕಗಳ ಸಾರಾಂಶ ತಿಳಿಸಲಾಗಿದೆ. 1500 ಜನರ ಸಾಮರ್ಥ್ಯದ ಅಧ್ಯಾತ್ಮಿಕ ತರಬೇತಿ ಸಭಾಂಗಣದಲ್ಲಿ ಅಧ್ಯಾತ್ಮಿಕ ಮತ್ತು ಯೋಗ ತರಬೇತಿ ಶಿಕ್ಷಣ ನೀಡಲಾಗುತ್ತದೆ. 200 ಜನರಿಗೆ ಅನುಕೂಲವಾಗುವಂತೆ ವಸತಿ ವ್ಯವಸ್ಥೆ ನಿರ್ಮಿಸಲಾಗಿದೆ ಎಂದರು.
ಬಸವರಾಜ ರಾಜಋಷಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.