
ಹುಬ್ಬಳ್ಳಿ: ಬಿಪಿಎಲ್ ಕುಟುಂಬಗಳಲ್ಲಿ ಜನಿಸಿದ ಹೆಣ್ಣುಮಕ್ಕಳ ಸರ್ವತೋಮುಖ ಪ್ರಗತಿ, ಭವಿಷ್ಯಕ್ಕೆ ಒತ್ತು ನೀಡಲು ಮತ್ತು ಅವರ ಸ್ಥಾನಮಾನ ಸುಧಾರಿಸಲು 2006–07ರಲ್ಲಿ ಜಾರಿಗೆ ತರಲಾದ ‘ಭಾಗ್ಯಲಕ್ಷ್ಮಿ’ ಯೋಜನೆಯಡಿ ಅತೀ ಹೆಚ್ಚು ಫಲಾನುಭವಿಗಳು ಬೆಳಗಾವಿ ಜಿಲ್ಲೆಯವರಾಗಿದ್ದಾರೆ.
ಭಾಗ್ಯಲಕ್ಷ್ಮಿ ಯೋಜನೆಯಡಿ 1.83 ಲಕ್ಷ ಜನ ನೋಂದಣಿ ಮಾಡಿಸಿಕೊಂಡಿದ್ದು, 2.36 ಲಕ್ಷ ಜನ ಫಲಾನುಭವಿಗಳ ಪೈಕಿ 1.58 ಲಕ್ಷ ಮಂದಿ ಪರಿಪಕ್ವ ಮೊತ್ತ ಪಡೆದಿದ್ದಾರೆ. ಯೋಜನೆ ಆರಂಭದಿಂದ 2025ರ ಡಿಸೆಂಬರ್ 30ರ ವರೆಗೆ 36,29,560 ಫಲಾನುಭವಿಗಳು ಬಾಂಡ್/ಪಾಸ್ ಬುಕ್ ಪಡೆದಿದ್ದಾರೆ. ವರ್ಷಕ್ಕೆ ಸರಾಸರಿ 1.50 ಲಕ್ಷ ಮಕ್ಕಳು ಈ ಯೋಜನೆಯಡಿ ನೋಂದಣಿಯಾಗುತ್ತಿದ್ದಾರೆ.
ಅತೀ ಹೆಚ್ಚು ಫಲಾನುಭವಿಗಳು ಬೆಳಗಾವಿಯವರೇ ಆಗಿದ್ದು, 2006-07ರಲ್ಲಿ 19,745 ಜನ ಬಾಂಡ್ ಪಡೆದಿದ್ದಾರೆ. ಕೊಡಗು ಜಿಲ್ಲೆಯಲ್ಲಿ 1,355 ಫಲಾನುಭವಿಗಳು ಬಾಂಡ್ ಪಡೆದಿದ್ದು, ಪರಿಪಕ್ವ ಮೊತ್ತ ಪಾವತಿಯಾದ ಫಲಾನುಭವಿಗಳ ಸಂಖ್ಯೆ 1,180. ಧಾರವಾಡ ಜಿಲ್ಲೆಯಲ್ಲಿ ಅತೀ ಕಡಿಮೆ, ಕೇವಲ 896 ಫಲಾನುಭವಿಗಳು ಪರಿಪಕ್ವ ಮೊತ್ತಕ್ಕೆ ಅರ್ಹರಾಗಿದ್ದಾರೆ. ಯೋಜನೆ ಪ್ರಾರಂಭದಿಂದ 2019-20ರವರೆಗೆ ಭಾರತೀಯ ಜೀವ ವಿಮಾ ನಿಗಮವು (ಎಲ್ಐಸಿ) ಪಾಲುದಾರ ಹಣಕಾಸು ಸಂಸ್ಥೆಯಾಗಿತ್ತು.
‘2006-07ರಲ್ಲಿ ನೋಂದಣಿಯಾಗಿ 2024-25ರಲ್ಲಿ 18 ವರ್ಷ ಪೂರ್ಣಗೊಂಡ ಅರ್ಹ ಫಲಾನುಭವಿಗಳಿಗೆ ₹32,351 ರಂತೆ ಪರಿಪಕ್ವ ಮೊತ್ತವನ್ನು ಪಾವತಿಸಲಾಗಿದೆ. ಈವರೆಗೆ 1,58,866 ಫಲಾನುಭವಿಗಳಿಗೆ ಈ ಮೊತ್ತ ಪಾವತಿಸಲಾಗಿದೆ. 2007-08ರಲ್ಲಿ ನೋಂದಣಿಯಾದವರಿಗೆ ಪರಿಪಕ್ವ ಮೊತ್ತ ಪಾವತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘2006ರ ಏಪ್ರಿಲ್ 1ರಿಂದ 2008ರ ಜುಲೈ 31 ರವರೆಗಿನ ಅವಧಿಯಲ್ಲಿ ಜನಿಸಿ, ನೋಂದಣಿಯಾದ ಮಕ್ಕಳಿಗೆ ₹ 10,000 ಠೇವಣಿ ಇಡಲಾಗಿತ್ತು. 2008ರ ಆಗಸ್ಟ್ 1ರ ನಂತರ ಜನಿಸಿ, ನೋಂದಣಿಯಾದ ಮೊದಲನೇ ಮಗುವಿಗೆ ₹19,300 ಮತ್ತು ಎರಡನೇ ಮಗುವಿಗೆ ₹18,350 ಮೊತ್ತವನ್ನು ಎಲ್.ಐ.ಸಿಯಲ್ಲಿ ಠೇವಣಿ ಇರಿಸಲಾಗಿದೆ’ ಎಂದರು.
‘ಫಲಾನುಭವಿಗಳಿಗೆ 18 ವರ್ಷ ಪೂರ್ಣಗೊಂಡ ನಂತರ ನಿಗದಿತ ಮಾನದಂಡಗಳನ್ನು ಪೂರೈಸಿದರೆ, ಪರಿಪಕ್ವ ಮೊತ್ತವನ್ನು ಎಲ್.ಐ.ಸಿ ವತಿಯಿಂದ ನೇರವಾಗಿ ಫಲಾನುಭವಿಗಳ ಖಾತೆಗೆ ಪಾವತಿಸಲಾಗುವುದು’ ಎಂದು ತಿಳಿಸಿದರು.
ಬಿಪಿಎಲ್ ಕಾರ್ಡ್‌ನಲ್ಲಿ ದಾಖಲಾದ ಕುಟುಂಬದ ವಿವರಗಳನ್ನು ಪರಿಶೀಲಿಸುತ್ತೇವೆ. ಯೋಜನೆ ದುರ್ಬಳಕೆ ಮಾಡಿಕೊಂಡವರನ್ನು ಪತ್ತೆ ಮಾಡಲಾಗುತ್ತದೆ. ಪರಿಪಕ್ವ ಮೊತ್ತ ಪಡೆಯುವಾಗ ಅದನ್ನು ತಡೆ ಹಿಡಿಯಲಾಗುವುದುಮಹೇಶ್ಬಾಬು ನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ನನ್ನ ಇಬ್ಬರು ಹೆಣ್ಣುಮಕ್ಕಳ ಹೆಸರಿನಲ್ಲಿ ಭಾಗ್ಯಲಕ್ಷ್ಮಿ ಬಾಂಡ್ ಪಡೆದಿದ್ದು ಆರ್ಥಿಕವಾಗಿ ಹಿಂದುಳಿದ ನಮ್ಮ ಕುಟುಂಬಕ್ಕೆ ಈ ಯೋಜನೆ ನೆರವಾಗಿದೆ. ಭವಿಷ್ಯದಲ್ಲಿ ಮಕ್ಕಳಿಗೆ ಈ ಹಣ ಉಪಯೋಗವಾಗಲಿದೆಅಶ್ವಿನಿ ರೂಗಿ ವಿಜಯಪುರ
ಸುಕನ್ಯಾ ಸಮೃದ್ಧಿ ಯೋಜನೆ ಜೊತೆ ವಿಲೀನ 2020-21ರಿಂದ ಈ ಯೋಜನೆಯನ್ನು ಅಂಚೆ ಇಲಾಖೆಯ ‘ಸುಕನ್ಯಾ ಸಮೃದ್ಧಿ’ ಯೋಜನೆಯೊಂದಿಗೆ ವಿಲೀನಗೊಳಿಸಿ ‘ಭಾಗ್ಯಲಕ್ಷ್ಮಿ-ಸುಕನ್ಯಾ ಸಮೃದ್ಧಿ ಯೋಜನೆ’ಯನ್ನು ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯಡಿ ಪ್ರತಿ ಫಲಾನುಭವಿಗೆ ಪ್ರತಿ ವರ್ಷ ₹3000 ರಂತೆ 15 ವರ್ಷಗಳವರೆಗೆ ಖಾತೆಗೆ ಜಮೆ ಮಾಡಲಾಗುವುದು. ಖಾತೆ ತೆರೆದ 21 ವರ್ಷಗಳ ನಂತರ ಅಂದಾಜು ₹1.27 ಲಕ್ಷ ಮೊತ್ತ ಲಭಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.