ADVERTISEMENT

ಧಾರವಾಡ | ಕೇಳುಗರ ಮಂತ್ರಮುಗ್ಧಗೊಳಿಸಿದ ಸಂಗೀತೋತ್ಸವ

ಪಂ.‌ ಭೀಮಸೇನ ಜೋಶಿ ಜನ್ಮ ಶತಮಾನೋತ್ಸವ; ಭೀಮಪಲಾಸ ಸಮಾರೋಪ ಸಮಾರಂಭ

​ಪ್ರಜಾವಾಣಿ ವಾರ್ತೆ
Published 16 ಮೇ 2022, 3:59 IST
Last Updated 16 ಮೇ 2022, 3:59 IST
ಹುಬ್ಬಳ್ಳಿ ಸವಾಯಿ ಗಂಧರ್ವ ಸಭಾಂಗಣದಲ್ಲಿ ನಡೆದ ಭೀಮಪಲಾಸ ಸಂಗೀತೋತ್ಸವದಲ್ಲಿ ಪಂ. ಪ್ರವೀಣ ಗೋಡ್ಖಿಂಡಿ ಮತ್ತು ಅವರ ಪುತ್ರ ಷಡ್ಜ್ ಗೋಡ್ಖಿಂಡಿ ಬಾನ್ಸುರಿ ವಾದನ ಪ್ರಸ್ತುತಪಡಿಸಿದರು– ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿ ಸವಾಯಿ ಗಂಧರ್ವ ಸಭಾಂಗಣದಲ್ಲಿ ನಡೆದ ಭೀಮಪಲಾಸ ಸಂಗೀತೋತ್ಸವದಲ್ಲಿ ಪಂ. ಪ್ರವೀಣ ಗೋಡ್ಖಿಂಡಿ ಮತ್ತು ಅವರ ಪುತ್ರ ಷಡ್ಜ್ ಗೋಡ್ಖಿಂಡಿ ಬಾನ್ಸುರಿ ವಾದನ ಪ್ರಸ್ತುತಪಡಿಸಿದರು– ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ಹೊರಗಡೆ ಮಧ್ಯಾಹ್ನದ ಏರು ಬಿಸಿಲು. ಒಂದೇ ಸಮನೆ ಸೂರ್ಯನ ಶಾಖ ಹೆಚ್ಚುತ್ತಿದ್ದರೆ, ಒಳಗಡೆ ಬೃಂದಾವನಿ ಸಾರಂಗ್ ರಾಗದ ತಣ್ಣನೆಯ ಆಲಾಪ. ಅಪ್ಪ–ಮಗನ ಜೋಡಿ ಬಾನ್ಸುರಿ ವಾದನವು ಅಲ್ಲಿದ್ದ ಕೇಳುಗರನ್ನು ಎರಡು ತಾಸು ಮಂತ್ರಮುಗ್ಧಗೊಳಿಸಿತ್ತು...

ಪಂ. ಭೀಮಸೇನ ಜೋಶಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಯ ಸಹಯೋಗದಲ್ಲಿ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಭಾನುವಾರ ನಡೆದ ಎರಡನೇ ದಿನದ ಭೀಮಪಲಾಸ ಸಂಗೀತೋತ್ಸವದ ಸನ್ನಿವೇಶವಿದು.

ಅಪ್ಪ ಪ್ರವೀಣ ಗೋಡ್ಖಿಂಡಿ, ಮಗ ಷಡ್ಜ್‌ ಗೋಡ್ಖಿಂಡಿ ಅವರ ಜುಗಲ್‌ ಬಾನ್ಸುರಿ ವಾದನ ಗಾಂಧರ್ವ ಲೋಕವನ್ನೇ ಸೃಷ್ಟಿಸಿತ್ತು. ಸ್ವಾಮಿ ಹರಿದಾಸರು ಬೃಂದಾವನಿ ಸಾರಂಗ್‌ದಲ್ಲಿ ಹಾಡುವ ಮೂಲಕ ಶ್ರೀಕೃಷ್ಣನನ್ನು ಭೂಮಿಗೆ ಕರೆತಂದು, ವಿಗ್ರಹದ ರೂಪ ಪಡೆದರು ಎನ್ನುವ ಪುರಾಣ ಮಥುರಾದಲ್ಲಿ ಇಂದಿಗೂ ಇದೆ. ಅಂತಹದ್ದೇ ರಾಗಮಾಲಿಕೆ ಸವಾಯಿ ಗಂಧರ್ವ ಸಭಾಂಗಣದಲ್ಲೆಲ್ಲ ತುಂಬಿ ತುಳುಕಾಡಿತು. ಅಲ್ಲಿ ನೆರೆದ ಕೇಳುಗರನ್ನು ಮೂಕವಿಸ್ಮಿತರನ್ನಾಗಿಸಿತು.

ADVERTISEMENT

ತಬಲಾ ಸಾಥ್‌ ನೀಡುತ್ತಿದ್ದ ದೇಬ್ಜಿತ್‌ ಪಾಟಿಟುಂಡಿ ಅವರು ಬಾನ್ಸುರಿ ವಾದನದ ಲಯಕ್ಕೆ ಸಮಾನವಾಗಿ ತರಂಗಗಳನ್ನು ಹೊರಹೊಮ್ಮಿಸುತ್ತಿದ್ದರು. ಸಂಗೀತ ಕಛೇರಿಯ ಕೊನೆಯ ಘಟ್ಟದಲ್ಲಿ ಪ್ರತಿಸ್ಪರ್ಧಿಗಳಂತೆ ಮೂವರು ರಾಗಗಳನ್ನು ಪರಾಕಾಷ್ಠೆಗೆ ಕೊಂಡೊಯ್ದು, ಕೇಳುಗರನ್ನು ತಲ್ಲೀನಗೊಳಿಸಿದರು. ಅನೇಕರ ಕಣ್ಣಲ್ಲಿ ಆನಂದಬಾಷ್ಪವೂ ಹರಿಯಿತು.

ಪರಂಪರೆಯ ಮುಂದುವರಿಕೆ:‘ಜಗತ್ತು ನಮ್ಮ ಯೋಗ, ನಮಸ್ಕಾರದ ಜೊತೆಗೆ ಭಗವದ್ಗೀತೆಯನ್ನು ಒಪ್ಪಿಕೊಳ್ಳುತ್ತಿದೆ. ಪ್ರಧಾನಮಂತ್ರಿ ಮೋದಿ ಅವರು, ಅತಿಥಿಗಳಿಗೆ ತಾಜ್‌ಮಹಲ್ ಬದಲು ಭಗವದ್ಗೀತೆ ಕೊಡುತ್ತಿದ್ದಾರೆ. ನಮ್ಮತನದ ಪರಂಪರೆಯ ಮುಂದುವರಿಕೆಯ ಭಾಗವಾಗಿ ಭೀಮಪಲಾಸ ಹಮ್ಮಿಕೊಳ್ಳಲಾಗಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಲಹೆ ನೀಡಿದರು.

ಭೀಮಪಲಾಸ ಸಂಗೀತೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕ್ಷಮತಾ ಸಂಸ್ಥೆಯ ಸಂಚಾಲಕ ಅಧ್ಯಕ್ಷ ಗೋವಿಂದ ಜೋಶಿ, ‘ಸಚಿವ ಪ್ರಲ್ಹಾದ ಜೋಶಿ ಅವರು ಬೆನ್ನೆಲುಬಾಗಿ ನಿಂತಿದ್ದರಿಂದಭೀಮಪಲಾಸ ಸಂಗೀತೋತ್ಸವ ಕಾರ್ಯಕ್ರಮ ಸಾಧ್ಯವಾಯಿತು’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ‘ದೇಶದ ಸಂಗೀತದ ವೈಭವವನ್ನು ಭೀಮಸೇನ ಜೋಶಿ ಅವರು ಅಂತರರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದರು’ ಎಂದರು.

ಗಾಯಕ ಪಂ. ಜಯತೀರ್ಥ ಮೇವುಂಡಿ, ತಬಲಾ ವಾದಕ ಓಜಸ್ ಆದಿಯಾ,ಮುರಳೀಧರ ಮಳಗಿ ಇದ್ದರು.

ಎನ್‌ಇಪಿಯಲ್ಲಿ ನಮ್ಮತನ: ಜೋಶಿ
‘ಹಿಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ನಮ್ಮತನವನ್ನು ಕೀಳರಿಮೆಯಿಂದ ಕಾಣಲಾಗುತ್ತಿತ್ತು.ಬುದ್ಧಿಜೀವಿಗಳು ಅಥವಾ ಎಡಪಂಥೀಯರು ಎಂದು ಕರೆದುಕೊಳ್ಳುವವರು ನಮ್ಮ ಆಹಾರ ಪದ್ಧತಿ, ಕೌಟುಂಬಿಕ ವ್ಯವಸ್ಥೆ, ಸಂಗೀತ, ಯೋಗ, ವ್ಯಾಯಾಮ, ಆಟಗಳು, ಸಂಸ್ಕೃತಿ, ಮೌಲ್ಯಗಳು ಸೇರಿದಂತೆ ಎಲ್ಲವನ್ನು ಹಾಳು ಮಾಡಲು ಯತ್ನಿಸಿದರು. ಆದರೆ, ಸಾಧ್ಯವಾಗಲಿಲ್ಲ. ನಮ್ಮ ಸರ್ಕಾರ ಬಂದ ನಂತರ ಜಾರಿಗೆ ನೂತನ ಶಿಕ್ಷನ ನೀತಿ (ಎನ್‌ಇಪಿ) ನಮ್ಮತನವನ್ನು ಪ್ರತಿನಿಧಿಸುವ ಎಲ್ಲವನ್ನೂ ಒಳಗೊಂಡಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.