ADVERTISEMENT

ಹುಬ್ಬಳ್ಳಿ: ಎರಡು ವರ್ಷಗಳಾದರೂ ಶುರುವಾಗದ ಪ್ರಮುಖ ಕಾಮಗಾರಿ

ಅಶೋಕನಗರ ರೈಲ್ವೆ ಸೇತುವೆ– ಉಪ ಕಾರಾಗೃಹವರೆಗೆ ಸಿಮೆಂಟ್ ರಸ್ತೆ ಯೋಜನೆ ನನೆಗುದಿಗೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 19:30 IST
Last Updated 2 ಡಿಸೆಂಬರ್ 2021, 19:30 IST
ಎರಡು ವರ್ಷದ ಹಿಂದೆ ಹುಬ್ಬಳ್ಳಿಯ ಅಶೋಕನಗರ ರೈಲ್ವೆ ಸೇತುವೆಯಿಂದ ಉಪ ಕಾರಾಗೃಹದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದ ಶಾಸಕ ಜಗದೀಶ ಶೆಟ್ಟರ್    – ಪ್ರಜಾವಾಣಿ ಸಂಗ್ರಹ ಚಿತ್ರ
ಎರಡು ವರ್ಷದ ಹಿಂದೆ ಹುಬ್ಬಳ್ಳಿಯ ಅಶೋಕನಗರ ರೈಲ್ವೆ ಸೇತುವೆಯಿಂದ ಉಪ ಕಾರಾಗೃಹದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದ ಶಾಸಕ ಜಗದೀಶ ಶೆಟ್ಟರ್    – ಪ್ರಜಾವಾಣಿ ಸಂಗ್ರಹ ಚಿತ್ರ   

ಹುಬ್ಬಳ್ಳಿ: ನಗರದ ಅಶೋಕನಗರ ರೈಲ್ವೆ ಸೇತುವೆಯಿಂದ ಉಪ ಕಾರಾಗೃಹವರೆಗೆ ಸಿಮೆಂಟ್ ರಸ್ತೆ ನಿರ್ಮಾಣಕ್ಕಾಗಿ ಭೂಮಿ ಪೂಜೆ ನಡೆದು, ಎರಡು ವರ್ಷಗಳಾದರೂ ಇದುವರೆಗೆ ಕಾಮಗಾರಿ ಮಾತ್ರ ಆರಂಭವಾಗಿಲ್ಲ!

ಕೇಂದ್ರ ರಸ್ತೆ ನಿಧಿಯಡಿ(ಸಿಆರ್‌ಎಫ್‌) ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಕೈಗೆತ್ತಿಕೊಂಡಿದ್ದ 1.56 ಕಿಲೋಮೀಟರ್ ಉದ್ದದ ರಸ್ತೆ ಕಾಮಗಾರಿಗೆ ಶಾಸಕ ಜಗದೀಶ ಶೆಟ್ಟರ್, 2019ರಲ್ಲಿ ಚಾಲನೆ ನೀಡಿದ್ದರು. ಅಂದಿನಿಂದ ಇಂದಿನವರೆಗೆ ಗುತ್ತಿಗೆದಾರ ಕಾಮಗಾರಿಯನ್ನೇ ಶುರು ಮಾಡಿಲ್ಲ.ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ,ಅವರ ಮನೆಯಿಂದ ಅನತಿ ದೂರದಲ್ಲಿರುವ ಮುಖ್ಯ ರಸ್ತೆವರೆಗೆ ಡಾಂಬರು ಹಾಕಿರುವುದನ್ನು ಬಿಟ್ಟರೆ, ಇಡೀ ರಸ್ತೆಮುಂಚಿನ ಸ್ಥಿತಿಯಲ್ಲೇ ಇದೆ.

‘ಮಾಜಿ ಮುಖ್ಯಮಂತ್ರಿಯೊಬ್ಬರು ಭೂಮಿ ಪೂಜೆ ನೆರವೇರಿಸಿದ ಕಾಮಗಾರಿ ಎರಡು ವರ್ಷಗಳಾದರೂ ಆರಂಭವಾಗಿಲ್ಲವೆಂದರೆ, ನಿಜಕ್ಕೂ ಆಶ್ಚರ್ಯವೆನಿಸುತ್ತದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಇದು ಸಾಕ್ಷಿ. ಶಾಸಕ ಜಗದೀಶ ಶೆಟ್ಟರ್ ಈಗಲಾದರೂ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯ ನಿವಾಸಿ ಸಿದ್ದು ಪಾಟೀಲ ಹೇಳಿದರು.

ADVERTISEMENT

ಕೆಲಸ ಆಗಲ್ಲ ಎಂದ ಗುತ್ತಿಗೆದಾರ

‘ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಆರಂಭದಲ್ಲಿ ಉತ್ಸಾಹ ತೋರಿದ್ದ ಗುತ್ತಿಗೆದಾರ ನಂತರ ಕೆಲಸ ಶುರು ಮಾಡಲು ಹಿಂದೇಟು ಹಾಕಿದರು. ಈಗಾಗಲೇ ಮಾಡಿರುವ ಕಾಮಗಾರಿಗಳ ಬಿಲ್‌ ಬಿಡುಗಡೆಯಾಗದಿರುವುದರಿಂದ, ಉದ್ದೇಶಿತ ಕಾಮಗಾರಿಯನ್ನು ಮಾಡಲು ತಮ್ಮಿಂದ ಸಾಧ್ಯವಿಲ್ಲ ಎಂದು ಇಲಾಖೆಗೆ ಪತ್ರ ಕೂಡ ಬರೆದಿದ್ದಾರೆ’ ಎಂದುಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್‌ ಆರ್‌.ಸಿ. ಹುರಕಡ್ಲಿ ತಿಳಿಸಿದರು.

‘ಅದೇ ಗುತ್ತಿಗೆದಾರ ₹40 ಕೋಟಿ ವೆಚ್ಚದಲ್ಲಿ ದೇಸಾಯಿ ವೃತ್ತದಿಂದ, ವಿದ್ಯಾನಗರದ ಕೆನರಾ ಬ್ಯಾಂಕ್‌ವರೆಗೆ ಸಿಆರ್‌ಎಫ್ ರಸ್ತೆ ನಿರ್ಮಿಸಿದ್ದಾರೆ. ಬಹುತೇಕ ಸಿಆರ್‌ಎಫ್ ಕಾಮಗಾರಿಗಳ ಬಿಲ್ ಬಾಕಿ ಇರುವುದರಿಂದ ಗುತ್ತಿಗೆದಾರರು ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ’ ಎಂದು ಹೇಳಿದರು.

ಶಾಸಕರು ಒತ್ತಡ ಹಾಕಲಿ

‘ಸಂಬಂಧಪಟ್ಟ ಇಲಾಖೆಗಳು ಗುತ್ತಿಗೆದಾರರಿಗೆ ಸಕಾಲದಲ್ಲಿ ಬಿಲ್ ಪಾವತಿಸದಿರುವುದರಿಂದ ಹಲವೆಡೆ ಕಾಮಗಾರಿಗಳು ಕುಂಟುತ್ತಾ ಸಾಗುತ್ತಿವೆ. ಈ ಕುರಿತು ಶಾಸಕರು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಬಿಲ್‌ ಬಿಡುಗಡೆ ಮಾಡಿಸಬೇಕು.ಅಶೋಕನಗರ ರೈಲ್ವೆ ಸೇತುವೆಯಿಂದ ಉಪ ಕಾರಾಗೃಹವರೆಗೆ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಸೂಚನೆ ನೀಡಬೇಕು’ ಎಂದು ಕಾಂಗ್ರೆಸ್ ಮುಖಂಡ ಎಂ.ಎಸ್. ಪಾಟೀಲ ಒತ್ತಾಯಿಸಿದರು.

‘ವಿಶೇಷ ಅನುದಾನದಲ್ಲಿ ಕಾಮಗಾರಿ’

‘ಸಿಆರ್‌ಎಫ್ ರಸ್ತೆ ಕಾಮಗಾರಿ ಅನುದಾನದ ಉಳಿತಾಯ ಮೊತ್ತದಲ್ಲಿಅಶೋಕನಗರ ರೈಲ್ವೆ ಸೇತುವೆ– ಉಪ ಕಾರಾಗೃಹದವರೆಗೆ ಸಿಮೆಂಟ್ ರಸ್ತೆ ನಿರ್ಮಾಣವನ್ನು ಕೈಗೆತ್ತಿಕೊಂಡು ಭೂಮಿಪೂಜೆ ನೆರವೇರಿಸಲಾಗಿತ್ತು. ಆದರೆ, ಕಾಮಗಾರಿಯ ಬಿಲ್‌ಗಳು ಪಾವತಿಯಾಗದ ಹಾಗೂ ಕೋವಿಡ್ ಕಾರಣದಿಂದ ಕಾಮಗಾರಿ ಶುರುವಾಗಲಿಲ್ಲ’ ಎಂದು ಶಾಸಕ ಜಗದೀಶ ಶೆಟ್ಟರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸ್ಥಗಿತಗೊಂಡಿರುವ ಕಾಮಗಾರಿಗಳಿಗೆ ಚಾಲನೆ ನೀಡಲು ಲೋಕೋಪಯೋಗಿ ಇಲಾಖೆಯಿಂದ ವಿಶೇಷ ಅನುದಾನ ಕೇಳಿದ್ದೇನೆ. ಆದಷ್ಟು ಬೇಗ ಮಂಜೂರಾಗುವ ಸಾಧ್ಯತೆ ಇದ್ದು, ಅನುದಾನ ಬಂದ ಕೂಡಲೇ ಕೆಲಸ ಆರಂಭಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.