ADVERTISEMENT

ಫುಟ್‌ಪಾತ್‌ ಮೇಲೆ ಬೈಕ್; ರಸ್ತೆ ಮೇಲೆ ಪಾದಚಾರಿ!

ಪಿ–ಬಿ ರಸ್ತೆಯಲ್ಲಿ ಎಲ್ಲೆಂದರಲ್ಲಿ ಪಾದಚಾರಿ ಮಾರ್ಗದ ಅತಿಕ್ರಮಣ; ಪಾರ್ಕಿಂಗ್‌ ಅವ್ಯವಸ್ಥೆಯಿಂದ ಜನ ಹೈರಾಣ

ಕೃಷ್ಣಿ ಶಿರೂರ
Published 5 ಜನವರಿ 2025, 5:31 IST
Last Updated 5 ಜನವರಿ 2025, 5:31 IST
ಹುಬ್ಬಳ್ಳಿಯ ವಿದ್ಯಾನಗರದ ಬಿಆರ್‌ಟಿಎಸ್‌ ಬಸ್‌ ನಿಲ್ದಾಣದ ಎದುರಿನ ಫುಟ್‌ಪಾತ್‌ನಲ್ಲಿ ಬೈಕ್‌ಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುವುದರಿಂದ ಪಾದಚಾರಿಗಳಿಗೆ ಓಡಾಡಲು ದಾರಿ ಇಲ್ಲದಂತಾಗಿರುವುದು
ಹುಬ್ಬಳ್ಳಿಯ ವಿದ್ಯಾನಗರದ ಬಿಆರ್‌ಟಿಎಸ್‌ ಬಸ್‌ ನಿಲ್ದಾಣದ ಎದುರಿನ ಫುಟ್‌ಪಾತ್‌ನಲ್ಲಿ ಬೈಕ್‌ಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುವುದರಿಂದ ಪಾದಚಾರಿಗಳಿಗೆ ಓಡಾಡಲು ದಾರಿ ಇಲ್ಲದಂತಾಗಿರುವುದು   

ಹುಬ್ಬಳ್ಳಿ:ಸ್ಮಾರ್ಟ್‌ ಸಿಟಿ ಖ್ಯಾತಿಯ ಹುಬ್ಬಳ್ಳಿ–ಧಾರವಾಡದಲ್ಲಿ ಪಾರ್ಕಿಂಗ್‌ ಅವ್ಯವಸ್ಥೆಯಿಂದ ಪಾದಚಾರಿಗಳು, ವಾಹನ ಸವಾರರರು ಹೈರಾಣಾಗಿದ್ದಾರೆ. ಪಿಬಿ ರಸ್ತೆಯಲ್ಲಿ ಹಲವೆಡೆ ಪಾದಚಾರಿ ಮಾರ್ಗದಲ್ಲಿ ದ್ವಿಚಕ್ರ ವಾಹನ ನಿಲುಗಡೆಯಿಂದ ಪಾದಚಾರಿಗಳು ವಾಹನ ದಟ್ಟಣೆಯ ನಡುವೆಯೇ ರಸ್ತೆಯಲ್ಲಿ ಓಡಾಡುವಂತಾಗಿದೆ.

ಕಿಮ್ಸ್‌ ವೃತ್ತದ ಎದುರು, ವಿಶಾಲ್ ಮಾರ್ಟ್‌, ಶುಶ್ರುತಾ ಆಸ್ಪತ್ರೆ ಎದುರು, ಬಿವಿಬಿ ಪ್ರದೇಶದಲ್ಲಿ ಪಾದಚಾರಿಗಳು ಅಕ್ಷರಶಃ ಓಡಾಡಲು ಬವಣೆ ಪಡುವಂತಾಗಿದೆ. ಪಾದಚಾರಿ ಮಾರ್ಗದಲ್ಲೇ ಬೈಕ್ ನಿಲುಗಡೆ ಮಾಡುವುದರ ಜೊತೆಗೆ ಅದೇ ಮಾರ್ಗದಲ್ಲಿ ಬೈಕ್‌ಗಳ ವೇಗದ ಓಡಾಟ ಪಾದಚಾರಿಗಳಿಗೆ ಭಯಹುಟ್ಟಿಸುತ್ತಿವೆ. ಪಾದಚಾರಿಗಳು ವಾಹನ ಓಡಾಟದ ನಡುವೆಯೇ ರಸ್ತೆಗಿಳಿಯುವುದು ಅನಿವಾರ್ಯವಾಗಿದೆ.

ಜನಹೆಚ್ಚು ಓಡಾಡುವ ಜಾಗದಲ್ಲೇ ಪಾದಚಾರಿ ಮಾರ್ಗವನ್ನು ಟಿ–ಸ್ಟಾಲ್‌ಗಳೂ ಅತಿಕ್ರಮಿಸಿಕೊಂಡಿದೆ. ಹೋಟೆಲ್‌ ಹಾಗೂ ಉದ್ಯಮ ಸ್ಥಾಪಿಸುವ ಕಚೇರಿಯ ಮಾರ್ಗಸೂಚಿ ಫಲಕಗಳನ್ನೂ ಪಾದಚಾರಿ ಮಾರ್ಗದ ಬುಲೆಟ್‌ಗೆ ಕಟ್ಟಿ ಜನರ ಓಡಾಟಕ್ಕೆ ಅಡ್ಡಿಯುಂಟು ಮಾಡುತ್ತಿದ್ದರೂ ಯಾವುದೇ ಕ್ರಮ ಜಾರಿಯಾಗಿಲ್ಲ. ಇಷ್ಟೇ ಅಲ್ಲದೆ ಪಾದಚಾರಿ ಮಾರ್ಗದಲ್ಲಿ ವೈರ್‌ಗಳು ಹೊರಚಾಚಿಕೊಂಡಿದ್ದು, ಓಡಾಡುವವರ ಕಾಲಿಗೆ ಎಡತಾಕಿ ಮುಗ್ಗರಿಸುವಂತಾಗಿದೆ. ಇವೆಲ್ಲವೂ ಹುಧಾ ಮಹಾನಗರ ಪಾಲಿಕೆ ಜಾಣಕುರುಡುತನಕ್ಕೆ ಹಿಡಿದ ಕನ್ನಡಿಯಾಗಿದೆ.

ADVERTISEMENT

ಹುಬ್ಬಳ್ಳಿಯ ಕಿಮ್ಸ್‌ ವೃತ್ತದಲ್ಲಿ ಏಕಮುಖ ಸಂಚಾರ ವ್ಯವಸ್ಥೆ ನಡುವೆಯೇ ದ್ವಿಮುಖ ಸಂಚಾರಕ್ಕೆ ಬೈಕ್‌ ಸವಾರರು ಮುಂದಾಗುತ್ತಿರುವುದರಿಂದ ಬೈಕ್‌ಗಳು ಸ್ಕಿಡ್‌ ಆಗಿ ಬೀಳುವುದು ಸಾಮಾನ್ಯವೆನಿಸಿದೆ. ಕೆಲವೆಡೆ ಫುಟ್‌ಪಾತ್‌ ಮೇಲೆ ವಾಹನಗಳ ದುರಸ್ತಿ ಕಾರ್ಯನಡೆಸುವುದರಿಂದ ಪಾದಚಾರಿಗಳು ಅನಿವಾರ್ಯವಾಗಿ ರಸ್ತೆಗಿಳಿದು ಇಕ್ಕಟ್ಟಾದ ಜಾಗದಲ್ಲೇ ಭಯದಲ್ಲಿ ನಡೆಯುವಂತಾಗಿದೆ. ಹೀಗೆ ರಸ್ತೆಗೆ ಇಳಿದವರ ಕಾಲಿನ ಮೇಲೆ ದ್ವಿಚಕ್ರವಾಹನಗಳು ಹತ್ತುವ ಪ್ರಸಂಗಗಳೂ ಎದುರಾಗಿದೆ ಎಂದು ಪಾದಚಾರಿಗಳು ‘ಪ್ರಜಾವಾಣಿ’ ಎದುರು ಅಳಲು ಹೇಳಿಕೊಂಡರು. 

ಈಗಾಗಲೇ ನಗರದ ಕೆಲವೆಡೆ ಸುಸಜ್ಜಿತ ಪಾರ್ಕಿಂಗ್‌ಗಾಗಿ ಜಾಗ ಗುರುತಿಸಿ, ಕಾಮಗಾರಿ ಆರಂಭಗೊಂಡು ದಶಕಗಳೇ ಕಳೆದರೂ ಪಾರ್ಕಿಂಗ್‌ಗೆ ಮಾತ್ರ ತೆರೆದುಕೊಂಡಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಹುಬ್ಬಳ್ಳಿ–ಧಾರವಾಡದಲ್ಲಿ ಅಗತ್ಯ ಪಾರ್ಕಿಂಗ್‌ ವ್ಯವಸ್ಥೆಗಾಗಿ ಈಗಾಗಲೇ ಸಾಕಷ್ಟು ಬಾರಿ ಹು–ಧಾ ಮಹಾನಗರ ಪಾಲಿಕೆ ಆಯುಕ್ತರ ಜೊತೆ ಸಭೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ನಗರದ ಸಂಚಾರ ಪೊಲೀಸ್‌ ಠಾಣೆ ಅಧಿಕಾರಿಗಳ ಅಭಿಪ್ರಾಯವಾಗಿದೆ.

‘ನಗರದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇದ್ದು, ಅದನ್ನು ಪಾಲಿಸದಿದ್ದಲ್ಲಿ ಅಂಥ ಸವಾರರ ವಿರುದ್ಧ ಪ್ರಕರಣ ದಾಖಲಿಸಬಹುದು. ಆದರೆ ಪಾರ್ಕಿಂಗ್‌ ವ್ಯವಸ್ಥೆಯೇ ಇಲ್ಲದಿದ್ದಾಗ ನಾವಾದರೂ ಏನು ಮಾಡಲು ಸಾಧ್ಯ’ ಎಂಬುದು ಟ್ರಾಫಿಕ್‌ ಪೊಲೀಸ್‌ ಅಧಿಕಾರಿಗಳ ಪ್ರಶ್ನೆಯಾಗಿದೆ. 

‘ಮೊದಲೆಲ್ಲ ರಸ್ತೆ ಪಕ್ಕದಲ್ಲಿ ನೋ ಪಾರ್ಕಿಂಗ್‌ ಬೋರ್ಡ್‌ ಇರುವಲ್ಲಿ ವಾಹನಗಳನ್ನು ನಿಲುಗಡೆ ಮಾಡಿದರೆ, ಅಂಥ ವಾಹನಗಳನ್ನು ಸಂಚಾರ ಪೊಲೀಸರು ಎತ್ತಿಕೊಂಡು ಹೋಗಿ ದಂಡ ಹಾಕುತ್ತಿದ್ದರು. ಕೆಲವು ವರ್ಷಗಳಿಂದ ಅದು ನಿಂತಿರುವುದರಿಂದ ವಾಹನ ಸವಾರರಿಗೆ ಆ ಭಯವೂ ಇಲ್ಲದೆ ಕಂಡಕಂಡಲ್ಲಿ ವಾಹನಗಳನ್ನು ನಿಲ್ಲಿಸುವುದು ರೂಢಿಯಾಗಿದೆ’ ಎಂದು ಚನ್ನಮ್ಮ ವೃತ್ತದ ಸಮೀಪದ ಹೂವಿನ ವ್ಯಾಪಾರ ಮಲ್ಲಪ್ಪ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. 

ಗಬ್ಬೂರಿನಿಂದ– ಧಾರವಾಡ ಟೋಲ್‌ನಾಕಾವರೆಗೂ ಪಿಬಿ ರಸ್ತೆಯಲ್ಲಿ ಎಲ್ಲಿಯೂ ಪಾರ್ಕಿಂಗ್‌ ವ್ಯವಸ್ಥೆ ಇರದೇ ಇರುವುದು ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಫುಟ್‌ಪಾತ್‌ ಮೇಲೆ ಕಂಡಕಂಡಲ್ಲಿ ನಿಲ್ಲಿಸುವಂತಾಗಿದೆ. ಇದು ಸಮಸ್ಯೆಗೆ ಕಾರಣವಾಗಿದೆ
ವಿನೋದ ಮುಕ್ತೇದಾರ ಎಸಿಪಿ ಉತ್ತರ ಸಂಚಾರ ವಿಭಾಗ ಹುಬ್ಬಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.