ADVERTISEMENT

ಮತಯಾಚನೆಗೆ ಬಿಜೆಪಿ, ಕಾಂಗ್ರೆಸ್‌ ನಾಯಕರ ದಂಡು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 4:06 IST
Last Updated 1 ಸೆಪ್ಟೆಂಬರ್ 2021, 4:06 IST
ಹುಬ್ಬಳ್ಳಿಯಲ್ಲಿ ಮಂಗಳವಾರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಪ್ರಚಾರ ಮಾಡಿದರು
ಹುಬ್ಬಳ್ಳಿಯಲ್ಲಿ ಮಂಗಳವಾರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಪ್ರಚಾರ ಮಾಡಿದರು   

ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಮಂಗಳವಾರ ಬಿಜೆಪಿ, ಕಾಂಗ್ರೆಸ್‌, ಎಎಪಿ ನಾಯಕರ ದಂಡು ಪ್ರಚಾರ ನಡೆಸಿತು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌, ಸಚಿವ ಶಂಕರಪಾಟೀಲ ಮುನೇನಕೊಪ್ಪ, ಕಾಂಗ್ರೆಸ್‌ ಶಾಸಕ ಎಚ್‌.ಕೆ. ಪಾಟೀಲ, ಶಾಸಕ ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಎಎಪಿಯ ಪೃಥ್ವಿ ರೆಡ್ಡಿ ಮತ್ತಿತರು ಬೆಂಬಲಿಗರೊಡನೆ ಬಿರುಸಿನ ಪ್ರಚಾರ ನಡೆಸಿದರು.

ವಾರ್ಡ್‌ 63ರಲ್ಲಿ ಮಲ್ಲಪ್ಪ ಶಿರಕೋಳ, 67ರಲ್ಲಿ ಶಿವು ಮೆಣಸಿನಕಾಯಿ ಮತ್ತು 80ರಲ್ಲಿ ಶಾಂತಾ ಹಿರೇಮಠ ಪರ ಮತ ಕೇಳಿದರು. ಶೆಟ್ಟರ್‌ ಓಣಿಯಲ್ಲಿ ಬಿಜೆಪಿಯ ಮಹಿಳಾ ಕಾರ್ಯಕರ್ತೆಯರು ಕಟೀಲ್‌ ಅವರಿಗೆ ಆರತಿ ಮಾಡಿ ಸ್ವಾಗತಿಸಿದರು.

ADVERTISEMENT

ಶಾಸಕ ಜಗದೀಶ ಶೆಟ್ಟರ್‌ ಅವರು 37ನೇ ವಾರ್ಡ್‌ನಲ್ಲಿ ಉಮೇಶಗೌಡ ಕೌಜಗೇರಿ ಪರ, ಸಚಿವ ಶಂಕರಪಾಟೀಲ ಮುನೇನಕೊಪ್ಪ 39ನೇ ವಾರ್ಡ್‌ನಲ್ಲಿ ಸೀಮಾಸಿದ್ದು ಮೊಗಲಿಶೆಟ್ಟರ್‌ ಮತಯಾಚಿಸಿದರು.

ಕಾಂಗ್ರೆಸ್‌ನಲ್ಲಿಯೂ ಚುರುಕು: ಶಾಸಕ ಎಚ್.ಕೆ. ಪಾಟೀಲ ಅವರು 58ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶ್ರುತಿ ಚಲವಾದಿ ಪರ ಮತಯಾಚನೆ ಮಾಡಿದರು.

ಪಾಲಿಕೆ ಚುನಾವಣೆ ಕಾಂಗ್ರೆಸ್‌ ಉಸ್ತುವಾರಿ ಸಂಚಾಲಕ ಆರ್‌. ಧ್ರುವ ನಾರಾಯಣ ಅವರು ಚುನಾವಣಾ ಪ್ರಕ್ರಿಯೆ ಆರಂಭವಾದ ದಿನದಿಂದಲೂ ಹುಬ್ಬಳ್ಳಿಯಲ್ಲಿ ಮೊಕ್ಕಾಂ ಹೂಡಿದ್ದಾರೆ.

ಸ್ವತಂತ್ರ ಅಭ್ಯರ್ಥಿಗಳ ಪ್ರಚಾರವೂ ಜೋರು

ಸ್ವತಂತ್ರವಾಗಿ ಸ್ಪರ್ಧಿಸಿರುವ ಕೆಲ ಬಂಡಾಯ ಅಭ್ಯರ್ಥಿಗಳು ಕೂಡ ವೈಯಕ್ತಿಕ ವರ್ಚಸ್ಸು ಮತ್ತು ಅಭಿವೃದ್ಧಿ ವಿಷಯಗಳನ್ನು ಮುಂದಿಟ್ಟು ಜೋರಾಗಿ ಪ್ರಚಾರ ಮಾಡುತ್ತಿದ್ದಾರೆ.

47ನೇ ವಾರ್ಡ್‌ನಿಂದ ಸ್ಪರ್ಧಿಸಿರುವ ಮಾಜಿ ಉಪಮೇಯರ್‌ ಲಕ್ಷ್ಮಿ ಉಪ್ಪಾರ, ಕಾಂಗ್ರೆಸ್‌ನಿಂದ ಬಂಡಾಯವೆದ್ದಿರುವ ಅಕ್ಷತಾ ಮೋಹನ ಅಸುಂಡಿ (ವಾರ್ಡ್‌ 82), ಗಣೇಶ ಟಗರಗುಂಟಿ (71), ಮೋಹನಾಂಬ ಗುಡಿಹಾಳ (81), ಚಂದ್ರಿಕಾ ವೆಂಕಟೇಶ್ ಮೇಸ್ತ್ರಿ (56) ಸೇರಿದಂತೆ ಅನೇಕರು ಮತಯಾಚನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.