ADVERTISEMENT

ಸಿದ್ದರಾಮಯ್ಯ ಕಾರ್ಯವೈಖರಿ ಸಹಿಸದ ಬಿಜೆಪಿ: ಸಚಿವ ಸಂತೋಷ್‌ ಲಾಡ್‌

ರಾಜ್ಯಪಾಲರ ನಡೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2024, 14:19 IST
Last Updated 19 ಆಗಸ್ಟ್ 2024, 14:19 IST
<div class="paragraphs"><p>ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಸಭೆಯಲ್ಲಿ ಸಂತೋಷ್‌ ಲಾಡ್‌ ಮಾತನಾಡಿದರು </p></div>

ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಸಭೆಯಲ್ಲಿ ಸಂತೋಷ್‌ ಲಾಡ್‌ ಮಾತನಾಡಿದರು

   

ಪ್ರಜಾವಾಣಿ ಚಿತ್ರ

ಧಾರವಾಡ: ಬಿಜೆಪಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯವೈಖರಿ ಸಹಿಸಲಾಗುತ್ತಿಲ್ಲ. ಹೀಗಾಗಿ, ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಉರುಳಿಸಲು ಷಡ್ಯಂತ್ರ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಆರೋಪಿಸಿದರು.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.‘ಮುಡಾ ಪ್ರಕರಣದಲ್ಲಿ ಜಾಗದ ಒಡೆತನಕ್ಕೆ ಸಂಬಂಧಿಸಿದಂತೆ ಯಾವುದೇ ತಕರಾರು ಇಲ್ಲದಿದ್ದರೂ ಪ್ರಕರಣವನ್ನು ಪ್ರಾಸಿಕ್ಯೂಷನ್‌ಗೆ ನೀಡಲಾಗಿದೆ. ಸರ್ಕಾರ ಅಸ್ಥಿರಗೊಳಿಸುವ ಪಿತೂರಿ ಇದು. ರಾಜ್ಯಪಾಲರು ದೆಹಲಿಗೆ ವಾಪಸ್‌ ಹೋಗಬೇಕು’ ಎಂದು ಒತ್ತಾಯಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಪಂಚಗ್ಯಾರಂಟಿಗಳ ಅನುಷ್ಠಾನಗೊಳಿಸಿ ಜನರಿಗೆ ತಲುಪಿಸುತ್ತಿರುವುದು ಬಿಜೆಪಿಯವರಿಗೆ ಸಹಿಸಲಾಗುತ್ತಿಲ್ಲ. ಸಿದ್ದರಾಮಯ್ಯ ಅವರು ಜಿಎಸ್‌ಟಿ ವಿಚಾರದಲ್ಲಿ ಕರ್ನಾಟಕಕ್ಕೆ ಏನು ಅನ್ಯಾಯವಾಗಿದೆ ಎಂದು ದೆಹಲಿಯಲ್ಲಿ ದೇಶದ ಗಮನ ಸೆಳೆದಿದ್ದು, ಕಳೆದ ವರ್ಷ ಬರ ಪರಿಹಾರಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿ ಕೋರ್ಟ್‌ ಮೂಲಕ ರಾಜ್ಯಕ್ಕೆ ಹಣ ಪಡೆದಿದದ್ದು ಬಿಜೆಪಿಯವರಿಗೆ ಮತ್ತು ಪ್ರಧಾನಿ ಮೋದಿ ಅವರಿಗೆ ಮುಜುಗರ ಉಂಟು ಮಾಡಿದೆ. ‘ಐಟಿ’, ‘ಇಡಿ’, ‘ಸಿಬಿಐ’, ‘ಫೆರಾ’, ‘ಫೆಮಾ’ ಎಲ್ಲವನ್ನು ಒಂದೂವರೆ ವರ್ಷದಿಂದ ಬಳಸಿ ಕಾಂಗ್ರೆಸ್‌ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸಿದರು. ಅವರ ಯತ್ನ ‌ಫಲಿಸಿಲ್ಲ. ನಮ್ಮ ರಕ್ತ ಸೋರಿದರೂ ಸಿದ್ದರಾಮಯ್ಯ ಪರವಾಗಿ ನಿಲ್ಲುತ್ತೇವೆ’ ಎಂದರು.

ಪ್ರತಿಭಟನಾಕಾರರು ಕಲಾ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಪತ್ರ ಸಲ್ಲಿಸಲಾಯಿತು. ಜಿಲ್ಲಾ ಕಾಂಗ್ರೆಸ್‌ ಸಮಿತಿ ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ, ಮಹಾನಗರ ಘಟಕದ ಅಧ್ಯಕ್ಷ ಅಲ್ತಾಫ ಹಳ್ಳೂರ, ಮೋಹನ ಲಿಂಬಿಕಾಯಿ, ಬಸವರಾಜ ಗುರಿಗಾರ, ಶರಣಪ್ಪ ಕೊಟಗಿ, ಶಾಕೀರ್ ಸನದಿ, ಕುಸಮಾ ಶಿವಳ್ಳಿ, ಎಂ.ಎಸ್‌.ಅಕ್ಕಿ ಪಾಲ್ಗೊಂಡಿದ್ದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮುಖ್ಯಮಂತ್ರಿ ಬಗ್ಗೆ ಮಾತನಾಡುವಾಗ ಬಾಯಿ, ನಾಲಿಗೆ ಹಿಡಿತದಲ್ಲಿ ಇರಬೇಕು. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಅಜೆಂಡಾ ನಿಮ್ಮದಾದರೆ, ಅವರನ್ನು ಉಳಿಸುವುದು ಕಾಂಗ್ರೆಸ್‌ ಹೈಕಮಾಂಡ್‌ ಮತ್ತು ಎಲ್ಲ ಕಾರ್ಯಕರ್ತರ ಅಜೆಂಡಾ ಆಗಿದೆ.
ಎನ್‌.ಎಚ್‌.ಕೋನರೆಡ್ಡಿ, ಶಾಸಕ
ಬ್ಲ್ಯಾಕ್‌ ಮೇಲರ್‌ ದೂರು ಪರಿಗಣಿಸಿ ಪ್ರಾಸಿಕ್ಯೂಷನ್‌ಗೆ ಅವಕಾಶ ನೀಡಲಾಗಿದೆ. ಕೇಂದ್ರದ ಒತ್ತಡಕ್ಕೆ ಮಣಿದು ನಿಯಮಗಳನ್ನು ಗಾಳಿಗೆ ತೂರಿ ರಾಜ್ಯಪಾಲರು ಈ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯಪಾಲರು ನಿರ್ಧಾರವನ್ನು ಮರುಪರಿಶೀಲಿಸಬೇಕು.
ಪ್ರಸಾದ ಅಬ್ಬಯ್ಯ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.