ADVERTISEMENT

ಎಂ.ಬಿ.ಪಾಟೀಲ ರಾಜೀನಾಮೆಗೆ ಬಿಜೆಪಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಮೇ 2019, 10:55 IST
Last Updated 6 ಮೇ 2019, 10:55 IST
ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಧರಣಿ ನಡೆಸಿದ ಬಿಜೆಪಿ ಮುಖಂಡರನ್ನು ಉದ್ದೇಶಿಸಿ ಜಗದೀಶ ಶೆಟ್ಟರ್ ಮಾತನಾಡಿದರು
ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಧರಣಿ ನಡೆಸಿದ ಬಿಜೆಪಿ ಮುಖಂಡರನ್ನು ಉದ್ದೇಶಿಸಿ ಜಗದೀಶ ಶೆಟ್ಟರ್ ಮಾತನಾಡಿದರು   

ಧಾರವಾಡ: ‘ಗೃಹಸಚಿವರಾಗಿರುವ ಕಾರಣಕ್ಕೆ ಎಂ.ಬಿ.ಪಾಟೀಲ ಅವರು ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ತಮ್ಮ ವಿರುದ್ಧ ಹೇಳಿಕೆ ನೀಡುವ ರಾಜಕೀಯ ಎದುರಾಳಿಗಳ ವಿರುದ್ಧ ಪ್ರಕತಿಕಾರದ ಕ್ರಮ ಕೈಗೊಳ್ಳುತ್ತಿರುವುದು ಖಂಡನೀಯ’ ಎಂದು ಶಾಸಕ ಜಗದೀಶ ಶೆಟ್ಟರ್ ಅವರು ಆರೋಪಿಸಿದರು.

ಗೃಹ ಸಚಿವ ಎಂ.ಬಿ.ಪಾಟೀಲ ವಿರುದ್ಧ ಬಿಜೆಪಿ ಹಮ್ಮಿಕೊಂಡಿದ್ದ ಧರಣಿಯಲ್ಲಿ ಸೋಮವಾರ ಪಾಲ್ಗೊಂಡು ಅವರು ಮಾತನಾಡಿದರು.

‘ಇಂದಿರಾಗಾಂಧಿ ಅಂದು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. ಆದರೆ ಇಂದು ಎಂ.ಬಿ. ಪಾಟೀಲ ಅವರ ಅಘೋಷಿತ ತುರ್ತು ಪರಿಸ್ಥಿತಿಯನ್ನು ರಾಜ್ಯದಲ್ಲಿ ಹೇರಿದ್ದಾರೆ. ಬಿಜೆಪಿ ಬಗ್ಗೆ ಅಪಾರ ಗೌರವ ಹೊಂದಿರುವ ಮಹೇಶ ವಿಕ್ರಮ ಹೆಗಡೆ, ಶ್ರುತಿ ಬೆಳ್ಳಕ್ಕಿ, ಶಾರದಾ ಡೈಮಂಡ್‌, ಹೇಮಂತಕುಮಾರ್‌ ಮತ್ತು ಅಜಿತ್ ಶೆಟ್ಟಿ ಹೇರಂಜಿ ವಿರುದ್ಧ ಪೊಲೀಸರ ಮೂಲಕ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಬಗ್ಗೆ ಒಲವು ಹೊಂದಿದ್ದಾರೆ ಎನ್ನುವುದೇ ದೊಡ್ಡ ಅಪಾರಧ ಎನ್ನುವಂತಾಗಿದೆ’ ಎಂದರು.

ADVERTISEMENT

‘ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಎಂ.ಬಿ.ಪಾಟೀಲ ಅವರು ಧರ್ಮದ ವಿಭಜನೆ ಪ್ರಯತ್ನದಲ್ಲಿ ಶಾಮೀಲಾಗಿದ್ದರು. ಈಗ ಇತರರ ವಿರುದ್ಧ ಕ್ರಮಕ್ಕೆ ಪೊಲೀಸ್ ವ್ಯವಸ್ಥೆಯನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. 2018ರಲ್ಲಿ ಸೋನಿಯಾಗಾಂಧಿಗೆ ಬರೆದಿದ್ದಾರೆ ಎನ್ನಲಾದ ಪತ್ರವನ್ನು ಹಂಚಿಕೊಂಡವರು ಹಾಗೂ ಆ ಕುರಿತು ಮಾತನಾಡಿದವರ ಮೇಲೂ ಪ್ರಕರಣ ದಾಖಲಾಗುತ್ತಿದೆ. ಆ ಪತ್ರ ತಾನು ಬರೆದಿಲ್ಲ, ಅದರಲ್ಲಿ ನಕಲಿ ಸಹಿ ಮಾಡಲಾಗಿದೆ ಎಂದು ಆರೋಪಿಸುತ್ತಿರುವ ಪಾಟೀಲರು, ಆಗಲೇ ಏಕೆ ಅದನ್ನು ತನಿಖೆಗೆ ಒಪ್ಪಿಸಲಿಲ್ಲ?’ ಎಂದು ಪ್ರಶ್ನಿಸಿದರು.

‘ನರೇಂದ್ರ ಮೋದಿ ಹತ್ಯೆ ಮಾಡುವಂತೆ ಕರೆ ನೀಡಿದ ಬೇಳೂರು ಗೋಪಾಲಕೃಷ್ಣ, ನಟರಾದ ಯಶ್ ಮತ್ತು ದರ್ಶನ್ ಅವರಿಗೆ ಬೆದರಿಕೆ ಹಾಕಿದ ನಾರಾಯಣಗೌಡ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ದೂರು ನೀಡಿದ್ದರೂ ಆ ಕುರಿತು ಸರ್ಕಾರ ಕ್ರಮ ಕೈಗೊಂಡಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್‌ ಜತೆಗೂಡಿ ಆಡಳಿತ ನಡೆಸುತ್ತಿರುವ ರಾಜ್ಯದಲ್ಲಿ ಸಂವಿಧಾನದ ದುರುಪಯೋಗವಾಗುತ್ತಿದೆ. ನಾಲ್ಕನೇ ಅಂಗದಂತಿರುವ ಮಾಧ್ಯಮಗಳ ಮೇಲೂ ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರದ ಕೆಲ ಸಚಿವರು ಬೆದರಿಕೆ ಹಾಕುತ್ತಿರುವುದು ಅಪಾಯದ ಮುನ್ಸೂಚನೆಯಂತಿದೆ’ ಎಂದು ಶೆಟ್ಟರ್ ಹೇಳಿದರು.

‘ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದ ಬಂದ ದಿನದಿಂದ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗುತ್ತಿದೆ. ಇದರಿಂದ ಪ್ರಜಾಪ್ರಭುತ್ವ, ಪ್ರಜಾಸತ್ತೆಗೆ ಧಕ್ಕೆಯಾಗುತ್ತಿದೆ.ರಾಜ್ಯದ ಗೃಹ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಲು ವಿಫಲರಾಗಿರುವ ಮತ್ತು ದುರಹಂಕಾರದಿಂದ ವರ್ತಿಸುತ್ತಿರುವ ಎಂ.ಬಿ.ಪಾಟೀಲ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಸೂಕ್ತ. ಅವರು ದಾಖಲಿಸಿರುವ ಕೊಟ್ಟಿ ಪ್ರಕರಣಗಳನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದರು.

ನಂತರ ಉಪವಿಭಾಗಾಧಿಕಾರಿ ಮೊಹಮ್ಮದ್ ಜುಬೇರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಕಳುಹಿಸಿದರು.ಪಕ್ಷದ ಜಿಲ್ಲಾ ಅಧ್ಯಕ್ಷ ನಾಗೇಶ ಕಲರ್ಬುಗಿ, ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮುಖಂಡರಾದಸೀಮಾ ಮಸೂತಿ, ಶಿವು ಹಿರೇಮಠ, ಸಂಜಯ ಕಪಟಕರ, ಶಿವಾನಂದ ಮುತ್ತಣ್ಣವರ, ಸುಧೀರ ಸರಾಫ್, ವಿಜಯಾನಂದ ಶೆಟ್ಟಿ, ಯಲ್ಲಪ್ಪ ಅರವಾಳದ, ಅರವಿಂದ ಏಗನಗೌಡರ, ಈರಣ್ಣ ಹಪ್ಪಳಿ, ಶಂಕರ ಶೇಳಕೆ, ಉದಯ ಲಾಡ್, ಮೋಹನ ರಾಮದುರ್ಗ, ಸುರೇಶ ಬೇದರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.