ADVERTISEMENT

ಡಿಕೆಶಿ ಆಮಿಷಕ್ಕೆ ಬಿಜೆಪಿಯವ್ರು ಬಗ್ಗಲ್ಲ: ಯಡಿಯೂರಪ್ಪ

ಸರ್ಕಾರ ರಚನೆ ಬಗ್ಗೆ ಪುನರುಚ್ಛರಿಸಿದ ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 12 ಮೇ 2019, 9:41 IST
Last Updated 12 ಮೇ 2019, 9:41 IST
   

ಹುಬ್ಬಳ್ಳಿ: ‘ಸಚಿವ ಡಿ.ಕೆ. ಶಿವಕುಮಾರ್ ಆಮಿಷಕ್ಕೆ ನಮ್ಮ ಪಕ್ಷದ ಮುಖಂಡರು ಬಗ್ಗುವುದಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರ್ಕಾರ ಅಸ್ಥಿರಗೊಳಿಸುವ ಯಾವುದೇ ಪ್ರಯತ್ನ ಮಾಡುವುದಿಲ್ಲ. ಅವರೇ ಹೊಡೆದಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ನಾವು ಹೊಣೆಯಲ್ಲ. ಕುಂದಗೋಳ ಹಾಗೂ ಚಿಂಚೋಳಿಯಲ್ಲಿ ಬಿಜೆಪಿ ಗೆದ್ದರೆ, ರಾಜ್ಯದಲ್ಲಿ ನಾವೇ ಸರ್ಕಾರ ರಚನೆ ಮಾಡುತ್ತೇವೆ’ ಎಂದರು.

‘ಕ್ಷೇತ್ರದಾದ್ಯಂತ ಬಿಜೆಪಿ ಪರವಾದ ಅಲೆ ಇದೆ. ಎಸ್‌.ಐ. ಚಿಕ್ಕನಗೌಡ್ರ 25 ಸಾವಿರ ಮತಗಳ ಅಂತರದಿಂದ ಗೆಲ್ಲಲಿದ್ದಾರೆ. ಇಂದು ಪ್ರಚಾರ ಮುಗಿಸಿ ಮತ್ತೆ ಮೇ 16 ಮತ್ತು 17ಕ್ಕೆ ವಾಪಸ್ ಬಂದು ಪ್ರಚಾರ ಮಾಡುತ್ತೇನೆ’ ಎಂದು ಹೇಳಿದರು.

ADVERTISEMENT

‘ಡಿಕೆಶಿ ಪೇಪರ್ ಟೈಗರ್’

‘ಸಚಿವ ಡಿ.ಕೆ. ಶಿವಕುಮಾರ್ ಅವರು ಪೇಪರ್ ಟೈಗರ್. ಮಾಧ್ಯಮದವರು ಸುಮ್ಮನೆ ಅವರನ್ನು ಹೀರೊ ಮಾಡುತ್ತಿದ್ದಾರೆ. ಕನಕಪುರದ ಅಕ್ಕಪಕ್ಕ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಾಧ್ಯವಾಗದ ಅವರು, ಇಲ್ಲಿ ಯಾರನ್ನು ತಾನೇ ಗೆಲ್ಲಿಸಲು ಸಾಧ್ಯ’ ಎಂದು ಶಾಸಕ ಜಗದೀಶ ಶೆಟ್ಟರ್ ವ್ಯಂಗ್ಯವಾಡಿದರು.

ಶಾಸಕ ಬಸವರಾಜ ಬೊಮ್ಮಾಯಿ, ‘ಕಾಂಗ್ರೆಸ್ ಪಕ್ಷದ ತನ್ನ ಮೂಲ ತತ್ವಗಳನ್ನು ಗಾಳಿಗೆ ತೂರಿದೆ. ಡಿ.ಕೆ. ಶಿವಕುಮಾರ್ ಕನಕಪುರದಿಂದ ಕಾರ್ಯಕರ್ತರನ್ನು ಕರೆದುಕೊಂಡು ಬಂದು ಕುಂದಗೋಲದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಅವರ ತಂತ್ರಗಾರಿಕೆ ಇಲ್ಲಿ ನಡೆಯದು. ಬಳ್ಳಾರಿ ಹಾಗೂ ಕುಂದಗೋಳ ಸ್ಥಿತಿ ಬೇರೆ. ಫಲಿತಾಂಶದ ಬಳಿಕ ಅವರ ಬಣ್ಣ ಬಯಲಾಗಲಿದೆ’ ಎಂದರು.

ಶಾಸಕ ಗೋವಿಂದ ಕಾರಜೋಳ ಹಾಗೂ ಮುಖಂಡರ ಬಿ.ಜೆ. ಪುಟ್ಟಸ್ವಾಮಿ ಇದ್ದರು.

ತಾ.ಪಂ ಸದಸ್ಯ ಬಿಜೆಪಿ ತೆಕ್ಕೆಗೆ

ಕುಂದಗೋಳದಲ್ಲಿ ತೆರೆಮರೆಯ ರಾಜಕೀಯ ಚಟುವಟಿಕೆಗಳು ದಿನೇ ದಿನೇ ತಿರುವು ಪಡೆಯುತ್ತಿವೆ. ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಮ್ಮುಖದಲ್ಲಿ ಗುರುವಾರ ಕ್ಷೇತ್ರದ ಕೂಬಿಹಾಳ ತಾಲ್ಲೂಕು ಪಂಚಾಯ್ತಿ ಸದಸ್ಯ ಹಾಗೂ ದ್ಯಾವನೂರು ಗ್ರಾಮ ಪಂಚಾಯ್ತಿಯ ಕೆಲ ಸದಸ್ಯರು ಬಿಜೆಪಿ ಸೇರಿದರು.

ಸಚಿವ ಡಿ.ಕೆ. ಶಿವಕುಮಾರ್ ಅವರು, ಸ್ಥಳೀಯ ಬಿಜೆಪಿ ಮುಖಂಡರನ್ನು ಕಾಂಗ್ರೆಸ್‌ನತ್ತ ಸೆಳೆಯುತ್ತಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪದ ಬೆನ್ನಲ್ಲೇ, ಕಾಂಗ್ರೆಸ್‌ನ ಸ್ಥಳೀಯ ಜನಪ್ರತಿನಿಧಿಗಳನ್ನು ಬಿಜೆಪಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.