ADVERTISEMENT

ಶೆಟ್ಟರ್‌ ಬೆಂಬಲಿಗರ ಮರುಸೇರ್ಪಡೆ 28ರಂದು: ತಿಪ್ಪಣ್ಣ ಮಜ್ಜಗಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2024, 15:48 IST
Last Updated 26 ಫೆಬ್ರುವರಿ 2024, 15:48 IST

ಹುಬ್ಬಳ್ಳಿ: ಇಲ್ಲಿನ ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಕಾರ್ಯಾಲಯದಲ್ಲಿ ಇದೇ ತಿಂಗಳ 28ರಂದು ಜಗದೀಶ ಶೆಟ್ಟರ್‌ ಅವರ ಬೆಂಬಲಿಗರನ್ನು ಪಕ್ಷಕ್ಕೆ ಮರುಸೇರ್ಪಡೆ ಮಾಡಿಕೊಳ್ಳುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ತಿಳಿಸಿದರು.

‘ಕಳೆದ ವರ್ಷ ಶೆಟ್ಟರ್‌ ಅವರ ಜೊತೆ ಪಕ್ಷ ತೊರೆದು ಹೋಗಿದ್ದ ಎಲ್ಲರನ್ನೂ ಮರುಸೇರ್ಪಡೆಗೊಳಿಸಲಾಗುವುದು. 27ರಂದು ಬೆಂಗಳೂರಿನಲ್ಲಿ ರಾಜ್ಯಸಭೆ ಚುನಾವಣೆ ಇದ್ದು, ಇದರಲ್ಲಿ ಪಾಲ್ಗೊಂಡ ನಂತರ ಪಕ್ಷದ ಜಿಲ್ಲೆಯ ಶಾಸಕರು ಮರುದಿನ ಹುಬ್ಬಳ್ಳಿಗೆ ಬರಲಿದ್ದಾರೆ. ಅವರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆನ್ನುವ ಕಾರಣಕ್ಕಾಗಿ 28ರಂದು ದಿನಾಂಕ ನಿಗದಿ ಮಾಡಲಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕರೆ ಬಂದಿದೆ:

ADVERTISEMENT

ಜಗದೀಶ ಶೆಟ್ಟರ್‌ ಅವರ ಆಪ್ತ ನಾಗೇಶ ಕಲಬುರ್ಗಿ ಮಾತನಾಡಿ, ‘ಫೆ.28ರಂದು ಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಳ್ಳುವ ಕಾರ್ಯಕ್ರಮ ಇಟ್ಟುಕೊಂಡಿರುವುದಾಗಿ ಪಕ್ಷದ ಕಚೇರಿಯಿಂದ ದೂರವಾಣಿ ಕರೆ ಬಂದಿದೆ. ಶೆಟ್ಟರ್‌ ಅವರ 90ಕ್ಕೂ ಹೆಚ್ಚು ಬೆಂಬಲಿಗರು ಅಂದು ಮರುಸೇರ್ಪಡೆಗೊಳ್ಳಲಿದ್ದೇವೆ’ ಎಂದು ಹೇಳಿದರು. 

‘ನಾನು 1992ರಿಂದಲೇ ಬಿಜೆಪಿ ಕಾರ್ಯಕರ್ತನಾಗಿ ದುಡಿದಿದ್ದೇನೆ. ಅನಿವಾರ್ಯ ಕಾರಣಗಳಿಂದ ಕಳೆದ ವರ್ಷ ಶೆಟ್ಟರ್‌ ಅವರ ಜೊತೆ ಪಕ್ಷ ತೊರೆದಿದ್ದೆ. ಈಗ ಅವರ ಜೊತೆ ವಾಪಸ್‌ ಬರಲು ಸಿದ್ಧವಾಗಿದ್ದೇನೆ. ಪಕ್ಷ ಕೊಡುವ ಜವಾಬ್ದಾರಿ ನಿರ್ವಹಿಸಲು ಸಿದ್ಧನಿದ್ದೇನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.