ADVERTISEMENT

ಹುಬ್ಬಳ್ಳಿ| ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಮುಖಂಡರ ವಶ, ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 5:27 IST
Last Updated 25 ಜನವರಿ 2026, 5:27 IST
ಹುಬ್ಬಳ್ಳಿ ನಗರದ ದುರ್ಗದಬೈಲ್ ವೃತ್ತದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು
ಹುಬ್ಬಳ್ಳಿ ನಗರದ ದುರ್ಗದಬೈಲ್ ವೃತ್ತದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು   

ಹುಬ್ಬಳ್ಳಿ: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣವಾದ ಮನೆಗಳ ವಿತರಣೆ ಕಾರ್ಯಕ್ರಮವನ್ನು ರಾಜ್ಯ ಸರ್ಕಾರವು ಕಾಂಗ್ರೆಸ್ ಸಮಾವೇಶದಂತೆ ಮಾಡುತ್ತಿದೆ, ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಬಿಜೆಪಿ ಶಾಸಕರನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ನಗರದ ದುರ್ಗದಬೈಲ್‌ ವೃತ್ತದಲ್ಲಿ ಬಿಜೆಪಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಬಳಿಕ ಮಂಟೂರ ರಸ್ತೆಯಲ್ಲಿ ನಡೆದ ವಸತಿ ಹಂಚಿಕೆ ಕಾರ್ಯಕ್ರಮ ಸ್ಥಳಕ್ಕೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಲು ಮುಂದಾದ ಬಿಜೆಪಿ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಶಾ ಬಜಾರ್‌ನಲ್ಲಿ ಬ್ಯಾರಿಕೇಡ್ ಅಡ್ಡ ಹಾಕಿ ತಡೆದರು.

ಈ ವೇಳೆ ರಸ್ತೆ ಮಧ್ಯದಲ್ಲಿಯೇ ಕುಳಿತು ಪ್ರತಿಭಟನೆಗೆ ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು, ಸಾರಿಗೆ ಬಸ್‌ ಹಾಗೂ ಪೊಲೀಸ್ ವಾಹನಗಳಲ್ಲಿ ಕರೆದೊಯ್ದು ವಿದ್ಯಾನಗರದ ರಂಭಾಪುರಿ ಕಲ್ಯಾಣ ಮಂಟಪದ ಆವರಣದಲ್ಲಿ ಬಿಡುಗಡೆ ಮಾಡಿದರು.

ADVERTISEMENT

ದುರ್ಗದಬೈಲ್ ವೃತ್ತದಲ್ಲಿ ವಿಧಾನಸಭೆ ವಿರೋಧಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್.ಪಾಟೀಲ, ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಭಿತ್ತಿಪತ್ರ ಪ್ರದರ್ಶಿಸಿ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅರವಿಂದ ಬೆಲ್ಲದ ಮಾತನಾಡಿ, ‘ವಸತಿ ಹಂಚಿಕೆ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಹಣದ ಹೊಳೆ ಹರಿಸಿದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಜನರನ್ನು ಸೇರಿಸಲು ಗ್ರಾಮೀಣ ಭಾಗದ ಬಡ ಜನರಿಗೆ ತಲಾ ₹1 ಸಾವಿರ ನೀಡಿ ಕರೆತರಲಾಗಿದೆ’ ಎಂದು ಟೀಕಿಸಿದರು.

‘ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ವಸತಿ ಸಚಿವ ವಿ.ಸೋಮಣ್ಣ ಅವರು ಬಡವರಿಗಾಗಿ 1.30 ಲಕ್ಷ ಮನೆಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅನುದಾನ ಕೊರತೆಯ ನೆಪವೊಡ್ಡಿ 42 ಸಾವಿರ ಮನೆಗಳನ್ನು ಮಾತ್ರ ನಿರ್ಮಿಸಿದೆ. ಬಡವರ ಮೇಲೆ ಕಾಂಗ್ರೆಸ್‌ ಸರ್ಕಾರಕ್ಕೆ ನಿಜವಾದ ಕಾಳಜಿ ಇದ್ದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭೂಮಿಪೂಜೆ ನೆರವೇರಿಸಿದ್ದ ಎಲ್ಲ ಮನೆಗಳನ್ನು ಪೂರ್ಣಗೊಳಿಸಿ ಹಂಚಲಿ. ಕಾಂಗ್ರೆಸ್‌ಗೆ ಬಡವರ ಕಾಳಜಿಗಿಂತ ಪ್ರಚಾರ ಬೇಕಿದೆ’ ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಅವರು, ‘ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಆ ಸಮುದಾಯದವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳನ್ನು ನೀಡಲಾಗಿದೆ. ಬಡವರಿಗೆ ಸೇರಬೇಕಾದ ಮನೆಗಳನ್ನು ಶಾಸಕ ಪ್ರಸಾದ ಅಬ್ಬಯ್ಯ ಅವರ ಬೆಂಬಲಿಗರಿಗೆ ನೀಡಲಾಗುತ್ತಿದೆ’ ಎಂದು ಆರೋಪಿಸಿದರು.

‘ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಎಲ್ಲ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮೂರ್ನಾಲ್ಕು ಬಾರಿ ಕಾರ್ಯಕ್ರಮದ ದಿನಾಂಕ ಬದಲಿಸಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ವಿದೇಶ ಪ್ರವಾಸದಲ್ಲಿದ್ದಾಗ ಉದ್ದೇಶಪೂರ್ವಕವಾಗಿಯೇ ಕಾರ್ಯಕ್ರಮ ಆಯೋಜಿಸಿ, ಶಿಷ್ಟಾಚಾರ ಉಲ್ಲಂಘಿಸಲಾಗಿದೆ’ ಎಂದು ಟೀಕಿಸಿದರು.

ಪ್ರಮುಖರಾದ ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತಗಟ್ಟಿ, ಮಹೇಂದ್ರ ಕೌತಾಳ, ಶಿವು ಮೆಣಸಿನಕಾಯಿ, ರಾಜಣ್ಣ ಕೊರವಿ, ಮಹಿಳಾ ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಪೆಂಡಾಲ್‌ ಹಾಗೂ ಬ್ಯಾನರ್‌ಗಾಗಿ ಕಾಂಗ್ರೆಸ್ ಸರ್ಕಾರ ಕೋಟ್ಯಂತರ ಹಣ ಖರ್ಚು ಮಾಡಿದೆ. ಇದರ ಬದಲಿಗೆ ಆ ಹಣದಲ್ಲೇ ಮತ್ತಷ್ಟು ಮನೆಗಳನ್ನು ನಿರ್ಮಿಸಿ ಬಡವರಿಗೆ ನೀಡಬಹುದಿತ್ತು
ಪ್ರದೀಪ ಶೆಟ್ಟರ್, ವಿಧಾನಪರಿಷತ್ ಸದಸ್ಯ
ಹು–ಧಾ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕ್ರಮ ನಡೆದಿದ್ದು ಶಾಸಕ ಪ್ರಸಾದ ಅಬ್ಬಯ್ಯ ಅಧ್ಯಕ್ಷತೆ ವಹಿಸಬೇಕಿತ್ತು. ಆದರೆ ಸಚಿವ ಜಮೀರ್ ಅಹಮದ್ ಖಾನ್ ಅವರೇ ಅಧ್ಯಕ್ಷತೆ ವಹಿಸಿ ಹಿಟ್ಲರ್ ಧೋರಣೆ ಅನುಸರಿಸಿದ್ದಾರೆ
ಮಹೇಶ ಟೆಂಗಿನಕಾಯಿ, ಶಾಸಕ

‘ಲಿಕ್ಕರ್ ಗ್ಯಾರಂಟಿ’ ಯೋಜನೆ: ಶಾಸಕ ಟೀಕೆ ಹುಬ್ಬಳ್ಳಿ

‘ಕೊಳಗೇರಿ ಮಂಡಳಿಯಿಂದ ನಿರ್ಮಿಸಿದ ಮನೆ ಹಂಚಿಕೆಯ ಕಾರ್ಯಕ್ರಮಕ್ಕೆ ನಗರಕ್ಕೆ ಆಗಮಿಸಿದ್ದ ಜನರಿಗಾಗಿ ಸರ್ಕಾರವು ‘ಲಿಕ್ಕರ್ ಗ್ಯಾರಂಟಿ’ ಯೋಜನೆ ಜಾರಿಗೆ ತಂದಿದೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ವ್ಯಂಗ್ಯವಾಡಿದರು. ‘ವಸತಿ ಹಂಚಿಕೆ ಕಾರ್ಯಕ್ರಮದಲ್ಲಿ ಎರಡೂವರೆ ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು ಎಲ್ಲ ಮದ್ಯ ವ್ಯಾಪಾರಸ್ಥರು ಹೆಚ್ಚುವರಿ ಮದ್ಯ ಸಂಗ್ರಹಿಸಿಟ್ಟುಕೊಳ್ಳಬೇಕು’ ಎಂದು ಅಬಕಾರಿ ಇಲಾಖೆಯ ಹುಬ್ಬಳ್ಳಿ ರೇಂಜ್ 1 ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಅಧಿಕಾರಿಯೊಬ್ಬರು ಸಂದೇಶ ಕಳುಹಿಸಿದ್ದಾರೆ. ಸರ್ಕಾರಕ್ಕೆ ಲಿಕ್ಕರ್ ಹಂಚಿಕೆ ಮುಖ್ಯವೋ ಮನೆ ಹಂಚಿಕೆ ಮುಖ್ಯವೋ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.