ADVERTISEMENT

ಮತದಾರರ ಮಾಹಿತಿ ಸಂಗ್ರಹದಲ್ಲಿ ಬಿಜೆಪಿ ಕೈವಾಡ: ಅಲ್ತಾಫ ಹಳ್ಳೂರ

ಹು–ಧಾ ಮಹಾನಗರ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ ಹಳ್ಳೂರ ಆರೋಪ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 5:59 IST
Last Updated 2 ಡಿಸೆಂಬರ್ 2022, 5:59 IST
ಖಾಸಗಿ ಕಂಪನಿ ಮೂಲಕ ಮತದಾರರ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸಲಾಗುತ್ತಿದೆ ಎಂದು ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ ಹುಬ್ಬಳ್ಳಿ–ಧಾರವಾಡ ಮಹಾನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಲ್ತಾಫ ಹಳ್ಳೂರ (ಎಡದಿಂದ ಮೂರನೇಯವರು), ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಹೆಸರುಗಳ ಪಟ್ಟಿಯನ್ನು ಪ್ರದರ್ಶಿಸಿದರು. ಮುಖಂಡರಾದ ಪ್ರಕಾಶ ಹಳ್ಯಾಳ, ರಜತ್ ಉಳ್ಳಾಗಡ್ಡಿಮಠ ಹಾಗೂ ಡಿ.ಎಂ. ದೊಡ್ಡಮನಿ ಇದ್ದಾರೆ– ಪ್ರಜಾವಾಣಿ ಚಿತ್ರ
ಖಾಸಗಿ ಕಂಪನಿ ಮೂಲಕ ಮತದಾರರ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸಲಾಗುತ್ತಿದೆ ಎಂದು ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ ಹುಬ್ಬಳ್ಳಿ–ಧಾರವಾಡ ಮಹಾನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಲ್ತಾಫ ಹಳ್ಳೂರ (ಎಡದಿಂದ ಮೂರನೇಯವರು), ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಹೆಸರುಗಳ ಪಟ್ಟಿಯನ್ನು ಪ್ರದರ್ಶಿಸಿದರು. ಮುಖಂಡರಾದ ಪ್ರಕಾಶ ಹಳ್ಯಾಳ, ರಜತ್ ಉಳ್ಳಾಗಡ್ಡಿಮಠ ಹಾಗೂ ಡಿ.ಎಂ. ದೊಡ್ಡಮನಿ ಇದ್ದಾರೆ– ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಖಾಸಗಿ ಕಂಪನಿಗಳು ಜಿಲ್ಲೆಯಾದ್ಯಂತ ಮತದಾರರ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸುತ್ತಿವೆ. ಇದರ ಪರಿಣಾಮವಾಗಿ, ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 84 ಸಾವಿರ ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ. ಇದರ ಹಿಂದೆ ಬಿಜೆಪಿ ಕೈವಾಡವಿದೆ’ ಎಂದು ಮಹಾನಗರ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ ಹಳ್ಳೂರ ಆರೋಪಿಸಿದರು.

ನವ ಅಯೋಧ್ಯಾ ನಗರದಲ್ಲಿ ಮತದಾರರ ಮಾಹಿತಿ ಸಂಗ್ರಹಿಸಿದ ದೆಹಲಿ ಮೂಲದ ಎಎಸ್‌ಆರ್ ಕಂಪನಿಯ ಮೂವರು ಸಿಬ್ಬಂದಿ ವಿರುದ್ಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ಬೆನ್ನಲ್ಲೇ, ಪಕ್ಷದ ಕಚೇರಿಯಲ್ಲಿ ಅವರು ಸುದ್ದಿಗೋಷ್ಠಿ ನಡೆಸಿದರು.

‘ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಜಿಲ್ಲೆಯ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ 11 ಸಾವಿರ, ಪೂರ್ವದಲ್ಲಿ 6 ಸಾವಿರ, ಪಶ್ಚಿಮದಲ್ಲಿ 15 ಸಾವಿರ, ಧಾರವಾಡ ಗ್ರಾಮೀಣದಲ್ಲಿ 14 ಸಾವಿರ, ಕುಂದಗೋಳದಲ್ಲಿ 18 ಸಾವಿರ, ಕಲಘಟಗಿಯಲ್ಲಿ 11 ಸಾವಿರ ಹಾಗೂ ನವಲಗುಂದದಲ್ಲಿ 9 ಸಾವಿರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ’ ಎಂದು ದೂರಿದರು.

ADVERTISEMENT

‘ಪಕ್ಷದ ಕಾರ್ಯಕರ್ತರು ಕಂಪನಿ ಸಿಬ್ಬಂದಿಯನ್ನುವಿಚಾರಿಸಿದಾಗ, ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರ ಹೆಸರನ್ನು ಹೇಳಿದ್ದಾರೆ. ಬಿಜೆಪಿ ನಡೆಸಿರುವ ಈ ಕೃತ್ಯಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ಸಹ ಭಾಗಿಯಾಗಿದ್ದಾರೆ’ ಎಂದು ಆರೋಪಿಸಿದರು.

ಎಫ್‌ಐಆರ್‌ನಲ್ಲಿ ಏನಿದೆ?: ಕಂಪನಿ ಸಿಬ್ಬಂದಿ ನವ ಅಯೋಧ್ಯಾ ನಗರದ ಅಲ್ಪಸಂಖ್ಯಾತರು, ದಲಿತರು ಹಾಗೂ ಆರ್ಥಿಕವಾಗಿ ಹಿಂದುಳಿದ ಮತದಾರರ ಮನೆಗಳಿಗೆ ತೆರಳಿ, ಮೊಬೈಲ್‌ ಆ್ಯಪ್‌ ಬಳಸಿ ಸಮೀಕ್ಷೆ ನಡೆಸುತ್ತಿದ್ದರು. ಮತದಾರರ ಗುರುತಿನ ಚೀಟಿಯ ಸಂಖ್ಯೆ, ಮತಗಟ್ಟೆ, ಮನೆ ಯಜಮಾನನ ಹಿನ್ನೆಲೆ ಸೇರಿದಂತೆ ವಿವಿಧ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಈ ಮಾಹಿತಿ ಆಧಾರದ ಮೇಲೆ, ನೂರಾರು ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ ಎಂದು ರಜತ್ ದೂರಿನಲ್ಲಿ ತಿಳಿಸಿದ್ದಾರೆ.

‘ವಶಕ್ಕೆ ಪಡೆದಿರುವ ಕಂಪನಿ ಸಿಬ್ಬಂದಿ ಕೇವಲ 4–5 ದಿನಗಳಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ಅವರಿಗೆ ₹8 ಸಾವಿರ ಸಂಬಳ ನಿಗದಿಯಾಗಿದೆ. ಸಂಗ್ರಹಿಸಿದ ಮಾಹಿತಿಯನ್ನು ಕಂಪನಿಗೆ ಕಳಿಸುವುದಷ್ಟೇ ನಮ್ಮ ಕೆಲಸ. ಮತ್ತೇನೂ ಗೊತ್ತಿಲ್ಲ ಎಂಬುದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ. ಕಂಪನಿಯವರು ಇತರ ರಾಜ್ಯಗಳಲ್ಲೂ ಇಂತಹ ಸಮೀಕ್ಷೆ ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ. ಕಂಪನಿಯ ವ್ಯವಸ್ಥಾಪಕ ಮಹೇಶ್ ಎಂಬುವರನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ಯಾರಿಗೂ ಅನುಮತಿ ಕೊಟ್ಟಿಲ್ಲ: ಕಮಿಷನರ್

‘ಮತದಾರರ ಮಾಹಿತಿ ಸಂಗ್ರಹ ಅಥವಾ ಸಮೀಕ್ಷೆಗೆ ಯಾರಿಗೂ ಅನುಮತಿ ಕೊಟ್ಟಿಲ್ಲ.ಎಎಸ್‌ಆರ್ ಕಂಪನಿಯವರು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕಚೇರಿಯ ಟಪಾಲು ವಿಭಾಗದವರು ಸ್ವೀಕರಿಸಿ, ಸ್ವೀಕೃತಿ ಪತ್ರ ಕೊಟ್ಟಿದ್ದಾರೆ. ಕಂಪನಿ ಸಿಬ್ಬಂದಿ, ಅದನ್ನೇ ಅನುಮತಿ ಪತ್ರವೆಂದು ತೋರಿಸಿದ್ದಾರೆ ಎಂದು ತಿಳಿದು ಬಂದಿದೆ’ ಎಂದುಪೊಲೀಸ್ ಕಮಿಷನರ್ ಲಾಭೂರಾಮ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯ ಪ್ರಕರಣ ದಾಖಲಾಗಿದ್ದು, ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಕಂಪನಿಯ ಮೇಲಧಿಕಾರಿಗಳಿಗೂ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದೇವೆ’ ಎಂದರು.

ಸ್ವೀಕೃತಿ ಪತ್ರದಲ್ಲೇನಿದೆ?

ಹುಬ್ಬಳ್ಳಿ–ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಪೂರ್ವ ಅಧ್ಯಯನ ನಡೆಸಲು ನಮ್ಮ ಪ್ರತಿನಿಧಿಗಳಿಗೆ ಅನುಮತಿ ಕೊಡಿ ಎಂದು ಎಎಸ್‌ಆರ್ ಕಂಪನಿಯು ಪೊಲೀಸ್ ಕಮಿಷನರ್‌ಗೆ ನ. 9ರಂದು ಮನವಿ ಪತ್ರ ಸಲ್ಲಿಸಿದ್ದಾರೆ. ಅದರೊಂದಿಗೆ ಅಧ್ಯಯನದ ಉದ್ದೇಶ, ಪ್ರಶ್ನಾವಳಿ ಸೇರಿದಂತೆ ನಾಲ್ಕು ದಾಖಲೆಗಳನ್ನು ಲಗತ್ತಿಸಿದ್ದಾರೆ.

ಕರ್ನಾಟಕದ ರಾಜಕೀಯ ಮತ್ತು ಆಡಳಿತ ಕುರಿತು ಕಂಪನಿಯು ಸಮೀಕ್ಷೆ ನಡೆಸುತ್ತಿದೆ. ಇದಕ್ಕಾಗಿ ರಾಜ್ಯದ ಜಿಲ್ಲೆಗಳು, ವಿಧಾನಸಭಾ ಕ್ಷೇತ್ರಗಳು ಹಾಗೂ ಬೂತ್ ಮಟ್ಟದ ಮತಗಟ್ಟೆಗಳಲ್ಲಿ ಸಾವಿರಾರು ಜನರನ್ನು ಸಂದರ್ಶನ ಮಾಡಲಾಗುತ್ತದೆ. ಈ ಸಮೀಕ್ಷೆಯನ್ನು ಟಿ.ವಿ ಕಾರ್ಯಕ್ರಮಗಳು ಹಾಗೂ ದಿನಪತ್ರಿಕೆಗಳಲ್ಲಿ ಲೇಖನಕ್ಕಾಗಿ ಬಳಸಿಕೊಳ್ಳಲಾಗುತ್ತದೆ.

ಈ ಸಮೀಕ್ಷೆಯಲ್ಲಿ ಭಾಗಿಯಾಗುವವರ ಮಾಹಿತಿಯನ್ನು ಗೋಪ್ಯವಾಗಿಡಲಾಗುವುದು. ಸಮೀಕ್ಷೆಯು ಯಾವುದೇ ರಾಜಕೀಯ ಪಕ್ಷ ಅಥವಾಸರ್ಕಾರಿ ಸಂಸ್ಥೆಯೊಂದಿಗೆ ಸಂಬಂಧ ಹೊಂದಿಲ್ಲ ಎಂದು ಮನವಿ ಪತ್ರದಲ್ಲಿ ಕಂಪನಿ ನಮೂದಿಸಿದೆ.

ದಾಖಲೆ ನೀಡಲಿ: ಜಿಲ್ಲಾಧಿಕಾರಿ

‘ಮತದಾರರ ಪಟ್ಟಿಯ ಪರಿಷ್ಕರಣೆ ಹಾಗೂ ಪಟ್ಟಿಯಿಂದ ಮತದಾರರ ಹೆಸರು ಕೈಬಿಡುವ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿದೆ. ಅಕ್ರಮ ನಡೆದಿರುವ ದಾಖಲೆಗಳಿದ್ದರೆ ನೀಡಲಿ, ಪರಿಶೀಲನೆ ನಡೆಸಿ ಸರಿಪಡಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.